ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರಿಗೆ ಸಹಾಯವಾಣಿ

Last Updated 24 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳು, ಅಲ್ಲಿ ಲಭ್ಯವಿರುವ ವಸತಿ ಸೌಕರ್ಯ, ಸಾರಿಗೆ ವ್ಯವಸ್ಥೆ ಮತ್ತಿತರ ಮಾಹಿತಿಯನ್ನು ಇನ್ನು ಕೆಲ ದಿನಗಳಲ್ಲಿ ಒಂದು ದೂರವಾಣಿ ಕರೆಯ ಮೂಲಕವೇ ಪಡೆಯಬಹುದು.

`ಕರ್ನಾಟಕ ಪ್ರವಾಸೋದ್ಯಮ ನಿರಂತರ ಮಾಹಿತಿ ಸೇವೆ~ ಸ್ಥಾಪಿಸುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಒಪ್ಪಿಗೆ ನೀಡಿದೆ. ಈ ವ್ಯವಸ್ಥೆಯಡಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆರಂಭಿಸುವ ಸಹಾಯವಾಣಿಯ ಮೂಲಕ ದಿನದ 24 ಗಂಟೆಗಳ ಅವಧಿಯಲ್ಲೂ ನಿರಂತರವಾಗಿ ಮಾಹಿತಿ ಒದಗಿಸುವ ಉದ್ದೇಶವಿದೆ.

ಸದ್ಯ ಲಭ್ಯವಿರುವ ಹಾಗೂ ಹೊಸದಾಗಿ ಆರಂಭಿಸುವ ಸಾರ್ವಜನಿಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಸ್ಥಾಪಿಸಿರುವ ವಿಶೇಷ ನಿಧಿಯ ಅಡಿಯಲ್ಲಿ ಈ ಪ್ರಸ್ತಾವ ರೂಪಿಸಲಾಗಿದೆ. ತಲಾ ಎಂಟು ಗಂಟೆಗಳ ಮೂರು ಪಾಳಿಗಳಲ್ಲಿ ನುರಿತ ಸಿಬ್ಬಂದಿಯನ್ನು ಬಳಸಿಕೊಂಡು ಪ್ರವಾಸಿಗರಿಗೆ ಮಾಹಿತಿ
ಒದಗಿಸಲು ಉದ್ದೇಶಿಸಲಾಗಿದೆ.

ಈ ಕುರಿತ ಪ್ರಸ್ತಾವಗಳ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದ ಉನ್ನತಮಟ್ಟದ ಸಮಿತಿ ಇತ್ತೀಚೆಗೆ ಪರಿಶೀಲನೆ ನಡೆಸಿದೆ. `ಕರ್ನಾಟಕ ಪ್ರವಾಸೋದ್ಯಮ ನಿರಂತರ ಮಾಹಿತಿ ಸೇವೆ~ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರುವ ಸಮಿತಿ, ಇದಕ್ಕಾಗಿ ಒಂದು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ.

ಸಹಾಯವಾಣಿಗೆ ಕರೆಮಾಡಿದ ಪ್ರವಾಸಿಗಳು, ಉತ್ತರ ಕರ್ನಾಟಕ ಅಥವಾ ದಕ್ಷಿಣ ಕರ್ನಾಟಕದ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಅಗತ್ಯವಿರುವುದಾಗಿ ತಿಳಿಸಬೇಕು. ಬಳಿಕ ಕರೆಯನ್ನು ಆಯಾ ವಿಭಾಗಗಳಲ್ಲಿ ತರಬೇತಿ ಪಡೆದ ಸಿಬ್ಬಂದಿಗೆ ವರ್ಗಾಯಿಸಲಾಗುತ್ತದೆ. ಪ್ರಸಿದ್ಧ ಪ್ರವಾಸಿ ತಾಣಗಳು, ತಲುಪುವ ಮಾರ್ಗ, ಸಮೀಪದಲ್ಲಿರುವ ವಸ್ತು ಸಂಗ್ರಹಾಲಯಗಳು, ಸಾರಿಗೆ, ವಸತಿ ಸೌಕರ್ಯ, ಸಮೀಪದಲ್ಲಿರುವ ಹೋಮ್‌ಸ್ಟೇಗಳು ಮತ್ತಿತರ ಮಾಹಿತಿಯನ್ನು ಒದಗಿಸಲಾಗುತ್ತದೆ. ಹತ್ತಿರದಲ್ಲಿರುವ ಆಸ್ಪತ್ರೆಗಳು, ಬ್ಯಾಂಕ್‌ಗಳ ಮಾಹಿತಿಯನ್ನೂ ಈ ಸೇವೆಯಡಿ ಒದಗಿಸುವ ಉದ್ದೇಶವಿದೆ. ಪ್ರವಾಸಿಯು ನಿಗದಿತ ಸ್ಥಳವನ್ನು ತಲುಪಿದ ಬಳಿಕವೂ ಮತ್ತೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು.

ಪ್ರಸ್ತಾವದ ಪ್ರಕಾರ, ಸಹಾಯವಾಣಿಯಲ್ಲಿರುವ ಸಿಬ್ಬಂದಿ, ಕರೆ ಮಾಡುವ ಪ್ರವಾಸಿಗರನ್ನು `ಹೊಸದಾಗಿ ಕರೆ ಮಾಡುತ್ತಿರುವವರು, ಹಿಂದೆ ಕರೆ ಮಾಡಿದ್ದವರು~ ಎಂಬುದಾಗಿ ವರ್ಗೀಕರಿಸಿ ಮಾಹಿತಿ ಒದಗಿಸುತ್ತಾರೆ. ಪ್ರವಾಸಿಗರು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆಯೂ ಈ ಸಿಬ್ಬಂದಿ ಗಮನಹರಿಸಿ, ಪರಿಹಾರೋಪಾಯ ಸೂಚಿಸುತ್ತಾರೆ. ಪ್ರವಾಸಿಗರ ಮಾಹಿತಿಯನ್ನೂ ಈ ಸಿಬ್ಬಂದಿ ಸಂಗ್ರಹಿಸಿ ಇಡುತ್ತಾರೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪೂರಕವಾಗಿ ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.

ಸ್ಮಾರ್ಟ್‌ಫೋನ್‌ನಲ್ಲೂ ಮಾಹಿತಿ: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು, ಕಡಲ ಕಿನಾರೆಗಳು, ಯಾತ್ರಾ ಸ್ಥಳಗಳು, ಜಲಪಾತಗಳು, ಗಿರಿ-ಶಿಖರಗಳು, ಕಲೆ ಮತ್ತು ಸಾಂಸ್ಕೃತಿಕ ಕೇಂದ್ರಗಳ ಕುರಿತು ಸ್ಮಾರ್ಟ್‌ಫೋನ್‌ನಲ್ಲಿ ಮಾಹಿತಿ ಪಡೆಯಲು ಪೂರಕವಾದ ತಂತ್ರಾಂಶ (ಅಪ್ಲಿಕೇಷನ್) ಸಿದ್ಧಪಡಿಸುವ ಪ್ರಸ್ತಾವಕ್ಕೂ  ಸಮಿತಿ ಒಪ್ಪಿಗೆ ನೀಡಿದೆ. ಇದಕ್ಕಾಗಿ 14 ಲಕ್ಷ ರೂಪಾಯಿ ಅನುದಾನವನ್ನೂ ಮಂಜೂರು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT