ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಗೋಪಾಲಧಾರಿ ಮನೆ ಪ್ರವೇಶಿಸುವ ದಿನ...

Last Updated 21 ಆಗಸ್ಟ್ 2011, 19:20 IST
ಅಕ್ಷರ ಗಾತ್ರ

ಶ್ರೀ ಕೃಷ್ಣನನ್ನು ಭಾರತೀಯ ಸಂಸ್ಕೃತಿಯ ಪ್ರತೀಕವೆಂದೇ ಹೇಳಬಹುದು. ಶ್ರೀ ಕೃಷ್ಣನು ಲೋಕವಂದ್ಯನಾದ ಜಗದ್ಗುರುವಾಗಿದ್ದಾನೆ.  ಶ್ರೀ ಕೃಷ್ಣನನ್ನು ಸಮಾಜದ ಎಲ್ಲಾ ವರ್ಗದ ಜನರು ಜಾತಿ ಮತ ಭೇದವಿಲ್ಲದೆ ಪೂಜಿಸುತ್ತಾರೆ ಹಾಗು ಆರಾಧಿಸುತ್ತಾರೆ. ಮಹಾವಿಷ್ಣುವಿನ 10 ಅವತಾರಗಳಲ್ಲಿ 8 ನೆ ಯ ಅವತಾರವೇ ಶ್ರೀ ಕೃಷ್ಣಾವತಾರ. ಶ್ರೀ ಕೃಷ್ಣನು ದುಷ್ಟ ಶಿಕ್ಷಣೆ ಮತ್ತು ಶಿಷ್ಟ ರಕ್ಷಣೆಗೋಸ್ಕರ ಈ ಭೂಮಿಯಲ್ಲಿ ಜನ್ಮತಳೆದನು.

ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜಯಂತಿಯನ್ನು ಕೇವಲ ನಮ್ಮ ದೇಶವಲ್ಲದೇ ಪ್ರಪಂಚದ ನಾನಾ ಭಾಗಗಳಲ್ಲಿ ಆಚರಿಸುತ್ತಾರೆ. ಜನ್ಮಾಷ್ಟಮಿಯನ್ನು ಶ್ರೀ ವೈಷ್ಣವ ಪಂಗಡದವರು ಶ್ರಾವಣ ಬಹುಳ ರೋಹಿಣಿ ನಕ್ಷತ್ರದ ದಿನದಂದು ಮತ್ತು ಬೇರೆ ಎಲ್ಲಾ ಪಂಗಡದವರು ಶ್ರಾವಣ ಬಹುಳ ಅಷ್ಟಮಿ ದಿನದಂದು ಆಚರಿಸುತ್ತಾರೆ.

ಕೃಷ್ಣಾಷ್ಟಮಿಯ ದಿನದಂದು ಬೆಳಗ್ಗೆ ಬೇಗನೆ ಎದ್ದು ಸ್ನಾನಾದಿಗಳನ್ನು ಮುಗಿಸಿ ಮನೆಯನ್ನು ತಳಿರು, ತೋರಣಗಳಿಂದ ಅಲಂಕರಿಸಿ ಶ್ರೀ ಕೃಷ್ಣನ ಕಥಾ ಶ್ರವಣ ಮಾಡಿ ರಾತ್ರಿ ವಿಶೇಷ ಪೂಜೆ ಸಲ್ಲಿಸುವುದು ಈ ಹಬ್ಬದ ವೈಶಿಷ್ಟ್ಯ. ಕೆಲವು ಕಡೆ ಶ್ರೀ ಕೃಷ್ಣನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲಿಸುವುದು ವಾಡಿಕೆಯಿದೆ.
 
ಶ್ರೀ ಕೃಷ್ಣನು ಮಧ್ಯ ರಾತ್ರಿಯಲ್ಲಿ ಜನಿಸಿದ ಪ್ರಯುಕ್ತ ಇಡೀ ರಾತ್ರಿ ಜಾಗರಣೆಯನ್ನು ಕೂಡ ಕೆಲವರು ಮಾಡುತ್ತಾರೆ. ಜಾಗರಣೆಯ ಸಮಯದಲ್ಲಿ ಉಪವಾಸ ಹಾಗು ಶ್ರೀ ಕೃಷ್ಣನ ಲೀಲಾಮೃತವನ್ನು ಹೊಗಳುವ ಹಾಡುಗಳು, ಗೋಪಿಕಾ ಗೀತಾ, ಹಾಗು ಭಾಗವತ ಪುರಾಣ ಮುಂತಾದ ಕೃಷ್ಣನ ಸ್ತುತಿಯನ್ನು ಹೇಳುತ್ತಾರೆ.

ಮಧ್ಯ ರಾತ್ರಿಯ ಸಮಯದಲ್ಲಿ ಶ್ರೀ ಕೃಷ್ಣ ಮೂರ್ತಿಗೆ ಆರತಿಯನ್ನು ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಿ ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಇದು ಬೆಳಗಿನ ಸೂರ್ಯೋದಯದವರೆಗೂ ಶ್ರೀ ಕೃಷ್ಣಾಮೃತದ ಭಜನೆ ಮುಂತಾದವುಗಳು ಮುಂದುವರೆಸುತ್ತಾರೆ.

ದಕ್ಷಿಣ ಭಾರತದಲ್ಲಿ  ಶ್ರೀ ಕೃಷ್ಣನನ್ನು ಬಾಲಗೋಪಾಲಧಾರಿಯಾಗಿ ಪೂಜಿಸುತ್ತಾರೆ. ಹಬ್ಬದ ದಿನ ಮನೆಯನ್ನು ಚೆನ್ನಾಗಿ ಅಲಂಕರಿಸಿ ಶ್ರೀ ಕೃಷ್ಣನ ಪುಟ್ಟ ಪಾದಗಳನ್ನು ಹೋಲುವ ಪಾದದ ಚಿತ್ರವನ್ನು ಮನೆಯ ಮುಂಬಾಗಿಲಿನಿಂದ ಪೂಜಾ ಕೋಣೆಯವರೆಗೂ ಬರೆಯುತ್ತಾರೆ. ಇದರ ಅರ್ಥವೇನೆಂದರೆ ಕೃಷ್ಣನು ಬಾಲ ಗೋಪಾಲಧಾರಿಯಾಗಿ ಮನೆಗೆ ಪ್ರವೇಶಿಸಿ ಮನೆಯಲ್ಲಿ ಸುಖ ಸಂತೋಷಗಳನ್ನು ಕೊಟ್ಟು ಕರುಣಿಸಲಿ ಎಂಬುದಾಗಿದೆ.

ಈ ದಿವಸ ಜನರು ತಮ್ಮ ಶಕ್ತಾನುಸಾರ ವಿವಿಧ ರೀತಿಯ ಸಿಹಿತಿಂಡಿಗಳು, ಕರಿದ ತಿಂಡಿಗಳು, ಖಾರಾ ತಿಂಡಿಗಳು ಮತ್ತು ಮುಖ್ಯವಾಗಿ ಬೆಣ್ಣೆಯನ್ನು ನೈವೇದ್ಯ ರೂಪದಲ್ಲಿ ಸಮರ್ಪಿಸುತ್ತಾರೆ. ನಂತರ ಎಲ್ಲಾ ತಿಂಡಿಯನ್ನು ತಮ್ಮ ಬಂಧು ಮಿತ್ರರಿಗೆ, ಕುಟುಂಬದ ಸದಸ್ಯರಿಗೆ ಹಂಚಿ ಶ್ರೀ ಕೃಷ್ಣನ ಪ್ರಸಾದವೆಂದು ಸೇವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT