ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ ಆಶ್ರಮಕ್ಕೆ ಮರಳಿದ ನಿತ್ಯಾನಂದ

Last Updated 21 ಅಕ್ಟೋಬರ್ 2012, 19:15 IST
ಅಕ್ಷರ ಗಾತ್ರ

ರಾಮನಗರ: ಮದುರೆ ಅಧೀನಂ ಪೀಠಾಧಿಪತಿ ಸ್ಥಾನದಿಂದ ಉಚ್ಛಾಟನೆಗೆ ಒಳಗಾಗಿರುವ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಭಾನುವಾರ ಬೆಳಿಗ್ಗೆ ಧ್ಯಾನಪೀಠಕ್ಕೆ ಹಿಂದಿರುಗಿ ಧ್ಯಾನ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.

ರಾಸಲೀಲೆ ಪ್ರಕರಣದಲ್ಲಿ ಬಂಧಿತರಾಗಿ ನಂತರ ವಿವಿಧ ರೀತಿಯ ಆರೋಪಗಳಿಂದ ವಿವಾದಕ್ಕೆ ಸಿಲುಕಿದ್ದ ನಿತ್ಯಾನಂದ ಸ್ವಾಮೀಜಿಯನ್ನು ಕಳೆದ ಏಪ್ರಿಲ್‌ನಲ್ಲಿ ಮದುರೈ ಅಧೀನಂ ಪೀಠಕ್ಕೆ ಪೀಠಾಧಿಪತಿಯಾಗಿ ಅಲ್ಲಿನ ಹಿರಿಯ ಸ್ವಾಮೀಜಿ ಅರುಣ ಗಿರಿನಾಥ ದೇಶಿಕಾರ್ ಅವರು ನೇಮಕ ಮಾಡಿದ್ದರು.

ಈ ಸಂಬಂಧ ಮದುರೈ ಸೇರಿದಂತೆ ತಮಿಳುನಾಡಿನಲ್ಲಿ ಹಲವೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ತಮಿಳುನಾಡು ಸರ್ಕಾರವೂ ಈ ಬಗ್ಗೆ ನ್ಯಾಯಾಲಯದಲ್ಲಿ ಕಾನೂನು ಸಮರಕ್ಕೆ ಚಾಲನೆ ನೀಡಿತ್ತು. ಇದರಿಂದಾಗಿ ಅರುಣ ಗಿರಿನಾಥ ದೇಶಿಕಾರ್ ಸ್ವಾಮೀಜಿ ಅವರು ನಿತ್ಯಾನಂದ ಅವರನ್ನು ಪೀಠಾಧಿಪತಿ ಸ್ಥಾನದಿಂದ ಕೆಳಕ್ಕಿಳಿಸಿ ಇತ್ತೀಚೆಗೆ ಆದೇಶಿಸಿದ್ದರು.

ಆ ನಂತರ ತಿರುವಣ್ಣಾಮಲೈ ಆಶ್ರಮದಲ್ಲಿ ನಿತ್ಯಾನಂದ ಸ್ವಾಮೀಜಿ ಇದ್ದಾರೆ ಎಂದು ತಿಳಿದು ಬಂದಿತ್ತು. `ಆದರೆ ನಿತ್ಯಾನಂದ ಸ್ವಾಮೀಜಿ ಬಿಡದಿಯ ಧ್ಯಾನಪೀಠ ಆಶ್ರಮದಲ್ಲಿ ಧ್ಯಾನ ಕಾರ್ಯಕ್ರಮದಲ್ಲಿ ತಲ್ಲೆನರಾಗಿದ್ದಾರೆ~ ಎಂದು ಧ್ಯಾನಪೀಠ ಆಶ್ರಮವು ಭಾನುವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ನಿತ್ಯಾನಂದ ಸ್ವಾಮೀಜಿ ಬಿಡದಿ ಆಶ್ರಮಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಸ್ವಾಮೀಜಿ ಭಕ್ತರು ಬಿಡದಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ಅನುಮತಿ ಪಡೆಯುವಂತೆ ಬಿಡದಿ ಪೊಲೀಸರು ಭಕ್ತರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಭಾನುವಾರ ಸಂಜೆಯವರೆಗೆ ಆಶ್ರಮದಲ್ಲಿ ಪೊಲೀಸರ ಭದ್ರತೆ ಇರಲಿಲ್ಲ. ಬದಲಿಗೆ ಆಶ್ರಮದ ಎರಡೂ ಮಾರ್ಗದ ಪ್ರವೇಶ ದ್ವಾರಗಳಿಗೆ ಬೀಗ ಜಡಿಯಲಾಗಿದ್ದು, ಆಶ್ರಮದ ಖಾಸಗಿ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದ ದೃಶ್ಯಗಳು ಕಂಡು ಬಂದಿವೆ.

ಒಂದು ವರ್ಷ ಕಾಲ ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಶಾಂತಿಗೆ ಭಂಗ ಬಾರದಂತೆ ಸದ್ವರ್ತನೆ ತೋರುವುದಾಗಿ ನಿತ್ಯಾನಂದ ಸ್ವಾಮೀಜಿ ಈಗಾಗಲೇ ಜಿಲ್ಲಾಡಳಿತಕ್ಕೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.
ಅಲ್ಲದೆ ಅದಕ್ಕೆ ಪೂರಕವಾಗಿ ಭಕ್ತರು ಎರಡು ಲಕ್ಷ ರೂಪಾಯಿ ಬಾಂಡ್ ಅನ್ನು ಭದ್ರತೆಯಾಗಿ ನೀಡಿದ್ದಾರೆ.

ಸಾಮೂಹಿಕ ಆತ್ಮಹತ್ಯೆ ಯತ್ನ
ದೊಡ್ಡಬಳ್ಳಾಪುರ: ನಗರದ ದೇಶದಪೇಟೆ ಬಡಾವಣೆಯಲ್ಲಿ ಆಂಧ್ರಪ್ರದೇಶ ಮೂಲದ ಕುಟುಂಬವೊಂದು ಶನಿವಾರ ರಾತ್ರಿ ಜ್ಯೂಸ್‌ನಲ್ಲಿ ವಿಷ ಬೆರೆಸಿಕೊಂಡು ಸಾಮೂಹಿಕ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಅನಂತಪುರ ಜಿಲ್ಲೆಯ ಕದಿರಿ ಪಟ್ಟಣದವರಾದ  ಶ್ರೀನಿವಾಸ್ (45), ಪತ್ನಿ ನಿರ್ಮಲಮ್ಮ (38), ಪುತ್ರಿಯರಾದ ನಾಗಭವಾನಿ (18) ಹಾಗೂ ನಾಗಸಾಯಿ ಲಕ್ಷ್ಮೀ (15) ವಿಷ ಕುಡಿದವರು. ಆದರೆ ನಾಗಭವಾನಿ ಮತ್ತು ನಾಗಸಾಯಿಲಕ್ಷ್ಮೀ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಣಕಾಸಿನ ತೊಂದರೆ ಮತ್ತು ಸಾಲಭಾದೆ ಆತ್ಮಹತ್ಯೆಗೆ ಶರಣಾಗಲು ಕಾರಣ ಎಂಬ ಸಂಶಯ ವ್ಯಕ್ತವಾಗಿದೆ.

ಕಿರಿ ಮಗಳು ನಾಗಸಾಯಿಲಕ್ಷ್ಮೀ ಕಡಿಮೆ ವಿಷ ಸೇವಿಸಿದ್ದರಿಂದ ಪ್ರಜ್ಞೆ ತಪ್ಪಿದವಳು ಭಾನುವಾರ ಬೆಳಿಗ್ಗೆ ಎಚ್ಚರಗೊಂಡಿದ್ದಾಳೆ. ಪೋಷಕರ ಮೃತ ದೇಹ ನೋಡಿ ಗಾಬರಿಗೊಂಡು ಚೀರಿಕೊಂಡಿದ್ದಾಳೆ. ತಕ್ಷಣವೇ ಸ್ಥಳೀಯರು  ಮಕ್ಕಳಿಬ್ಬರನ್ನೂ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

 ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಶಿವಾರೆಡ್ಡಿ, ನಗರ ಪೊಲೀಸ್ ಠಾಣೆ  ಸಬ್‌ಇನ್‌ಸ್ಪೆಕ್ಟರ್ ನವೀನ್ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ರಾತ್ರಿ ಆರಂಭವಾದ ಪ್ರತಿಭಟನೆ
ನಿತ್ಯಾನಂದ ಸ್ವಾಮೀಜಿ ಆಶ್ರಮ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನಾ ವೇದಿಕೆ ಕಾರ್ಯಕರ್ತರು ಬಿಡದಿ ಆಶ್ರಮದ ಮುಂದೆ ಭಾನುವಾರ ರಾತ್ರಿ 9 ಗಂಟೆಗೆ ಈ ಪ್ರತಿಭಟನೆ ಆರಂಭಿಸಿದರು. ಸ್ವಾಮೀಜಿ ಆಶ್ರಮ ಬಿಟ್ಟು ಹೋಗುವಂತೆ ಘೋಷಣೆ ಕೂಗುತ್ತಾ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಿಡದಿ ಬಿಟ್ಟು ಹೋಗದಿದ್ದರೆ ಮುಂದೆ ಆಗಬಹುದಾದ ಎಲ್ಲ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಮೀಸಲು ಪೊಲೀಸ್ ಪಡೆಯ ಒಂದು ವಾಹನ ಹಾಗೂ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT