ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಯ ಪದಾಧಿಕಾರಿಗಳ ಒತ್ತಾಯ

ವಾರ್ಡ್‌ ಸಮಿತಿಗೆ ಎಂಜಿನಿಯರ್‌ ಆಯ್ಕೆ ಮಾಡಿ
Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಾರ್ಡ್‌ಮಟ್ಟದ ಸಮಿತಿಗಳಿಗೆ ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಯ (ಐಇಐ) ಹಿರಿಯ ಎಂಜಿನಿಯರ್‌ಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು.’ ಸಂಸ್ಥೆಯಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ‘ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವ್ಯಕ್ತವಾದ ಒಕ್ಕೊರಲಿನ ಆಗ್ರಹವಿದು.

‘ವಾರ್ಡ್‌ಗಳಲ್ಲಿ ನಾಗರಿಕರ ಭಾಗವಹಿಸುವಿಕೆಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬಹುದು. ಆದರೆ, ವಾರ್ಡ್‌ಮಟ್ಟದ ಸಮಿತಿಗಳಿಗೆ ಆಯಾ ವಾರ್ಡ್‌ನ ಸದಸ್ಯರು ತಮಗೆ ಬೇಕಾದವರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರೂ, ಸಮಿತಿಗಳಿಗೆ ತಾಂತ್ರಿಕ ತಜ್ಞರನ್ನು ನೇಮಿಸಬೇಕು’ ಎಂದು ಹಿರಿಯ ಎಂಜಿನಿಯರ್‌ಗಳು ಒತ್ತಾಯಿಸಿದರು.

‘ಆಯಾ ಪ್ರದೇಶದಲ್ಲಿ ಕೈಗೊಳ್ಳುವ ರಸ್ತೆ, ಚರಂಡಿ, ಮಳೆನೀರು ಕಾಲುವೆ ಸೇರಿದಂತೆ ಅನೇಕ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದೆಯೇ ಇಲ್ಲವೇ ಎಂಬುದರ ಕುರಿತು ಎಂಜಿನಿಯರ್‌ಗಳು ನಿಗಾವಹಿಸಿ ವರದಿ ನೀಡಬೇಕು. ಪ್ರಾಯೋಗಿಕವಾಗಿ ಒಂದೆರಡು ವಾರ್ಡ್‌ಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಬಿಬಿಎಂಪಿ ಮುಂದಾಗಬೇಕು’ ಎಂದರು.

‘ನಿಯಮ ಪಾಲಿಸುತ್ತಿಲ್ಲ’: ‘ಭಾರತೀಯ ರಸ್ತೆ ಕಾಂಗ್ರೆಸ್‌ನ ನಿಯಮದ ಪ್ರಕಾರ ರಸ್ತೆಗಳನ್ನು ನಿರ್ಮಿಸುತ್ತಿಲ್ಲ. ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಿದರೆ ಗುಂಡಿ ಬೀಳುವ ಪ್ರಮೇಯ ಬರುವುದಿಲ್ಲ. ರಸ್ತೆಯ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ವ್ಯವಸ್ಥಿತ ಚರಂಡಿಗಳು ಇರಬೇಕು’ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌ ದೂರಿದರು.

‘ವಿದೇಶಗಳಲ್ಲಿ ಹಿಮಪಾತ ಬೀಳುತ್ತದೆ. ಆದರೆ, ಅಲ್ಲಿನ ರಸ್ತೆಗಳಲ್ಲಿ ಹೆಚ್ಚಾಗಿ ಗುಂಡಿಗಳು ಕಾಣಿಸಿಕೊಳ್ಳುವುದಿಲ್ಲ. ವ್ಯವಸ್ಥಿತವಾಗಿ ರಸ್ತೆ ನಿರ್ಮಿಸುವುದೇ ಇದಕ್ಕೆ ಕಾರಣ. ಆದರೆ, ನಮ್ಮಲ್ಲಿ ರಸ್ತೆ ಕಾಮಗಾರಿಯ ಮೇಲ್ವಿಚಾರಣೆಯನ್ನು ಅಧಿಕಾರಿಗಳು ಸರಿಯಾಗಿ ನಡೆಸುತ್ತಿಲ್ಲ. ಗುತ್ತಿಗೆದಾರರು ಇಷ್ಟ ಬಂದಂತೆ ರಸ್ತೆ ನಿರ್ಮಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

***

‘ರಾಜಭವನ ರಸ್ತೆಯಲ್ಲಿ ಗುಂಡಿ ಏಕಿಲ್ಲ?’

‘ರಾಜಭವನ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಕಂಡುಬರುತ್ತದೆ. ಆದರೆ, ಆ ರಸ್ತೆಯಲ್ಲಿ ಗುಂಡಿ ಏಕೆ ಬೀಳುವುದಿಲ್ಲ. ಅಲ್ಲಿ ಗುಂಡಿ ಬಿದ್ದರೆ ಎಂಜಿನಿಯರ್‌ಗಳ ಕೆಲಸ ಹೋಗುತ್ತದೆ. ಈ ಭಯದಿಂದಲೇ ಅಲ್ಲಿನ ರಸ್ತೆಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಜನಸಾಮಾನ್ಯರು ವಾಸಿಸುವ ಪ್ರದೇಶಗಳಲ್ಲಿ ಮಾತ್ರ ರಸ್ತೆಗಳು ಗುಂಡಿಮಯವಾಗಿರುತ್ತವೆ’ ಎಂದು ಡಿ.ಎಸ್‌.ರಾಜಶೇಖರ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT