ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಮಂಡಳ ಅಪ್ಪನ ಗಂಟೇನ್ರೀ?

ಯಡಿಯೂರಪ್ಪ ಅವರ ವಿರುದ್ಧ ಹರಿಹಾಯ್ದ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ
Last Updated 11 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ರಚಿಸುವ ಸರ್ಕಸ್‌ ಮಾಡಿ ಸೋತ ಮೇಲೆ ಮತ್ತೇನಿದೆ? ಮಂತ್ರಿಗಿರಿ ಅವರಪ್ಪನ ಗಂಟೇನ್ರೀ’ ಎಂದು ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಗುಡುಗಿದರು.

ಭಾರತಯಾತ್ರಾ ಕೇಂದ್ರ ಹಾಗೂ ಬಯಲು ಪರಿಷತ್ತು, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದ ಮಹಾತ್ಮಗಾಂಧಿ–150 ಹಾಗೂ ಜೆ.ಪಿ (ಜಯಪ್ರಕಾಶ್‌ ನಾರಾಯಣ್‌) ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಜೆ.ಪಿ ಪ್ರಶಸ್ತಿ ಪಡೆದು ಅವರು ಮಾತನಾಡಿದರು.

‘ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಅವರು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಅಧಿಕಾರ ಸಿಕ್ಕಮೇಲೆ ಕೆಟ್ಟ ರಾಜಕೀಯಕ್ಕೆ ಮುಂದಾದರು. ಈಗ ಅವರು ಸರ್ಕಾರದ ಭಾಗವಾಗಿಲ್ಲ ಎಂಬುದನ್ನು ನಂಬಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕೇವಲ ಜಗಳ ಆಡಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಈಗಿರುವ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬರುತ್ತೇನೆ ಎನ್ನುವುದು ರಾಜಕೀಯ ಅಲ್ಲ. ಅಧಿವೇಶನದಲ್ಲಿ ಅಭಿವೃದ್ಧಿಯ ಕುರಿತ ಚರ್ಚೆಗಳು ಆಗುತ್ತಿಲ್ಲ. ಈಗಿನ ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ, ಐದು ವರ್ಷಗಳ ಅವಧಿಯನ್ನು ಅವರು ಪೂರೈಸಲಿ’ ಎಂದು ಅವರು ಹೇಳಿದರು.

ಪತ್ರಕರ್ತ ಸುಗತ ಶ್ರೀನಿವಾಸರಾಜು, ‘ಕಾಂಗ್ರೆಸ್‌ ಪಕ್ಷವನ್ನು ನಾವು ಎರಡು ರೀತಿ ನೋಡಬೇಕಾಗುತ್ತದೆ. ಒಂದು ಗಾಂಧಿ ಕಾಂಗ್ರೆಸ್‌, ಇನ್ನೊಂದು ಇಂದಿರಾ ಕಾಂಗ್ರೆಸ್‌. ಎರಡೂ ಭಿನ್ನವಾಗಿ ಸಾಗಿದವು. ಆರಂಭದ ಕಾಂಗ್ರೆಸ್‌ನ ಭಾಗವಾಗಿದ್ದ ಶಾಸಕರಲ್ಲಿ ಬೌದ್ಧಿಕ ಶಕ್ತಿ ಹೆಚ್ಚಿತ್ತು. ಅದನ್ನು ಅವರು ಉತ್ತಮ ಕೆಲಸಗಳಿಗೆ ಬಳಸಿಕೊಂಡರು. ಅಂತಹ ಪರಂಪರೆಯನ್ನು ನಾವು ಓದಬೇಕು. ದಾಖಲು ಮಾಡಬೇಕು’ ಎಂದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಅಭಿಪ್ರಾಯಗಳನ್ನು ಹುಟ್ಟುಹಾಕುತ್ತಿರುವ ರೀತಿ ಸರಿಯಿಲ್ಲ. ತಮ್ಮ ಸೋಲಿಗೆ ಅವರು ಜಾತಿ, ಧರ್ಮದ ಕಾರಣಗಳನ್ನು ಹೇಳಿಕೊಂಡು ಓಡಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

‘ಜೆ.ಪಿ ಪ್ರಭಾವಿ ನಾಯಕ. ಆದರೆ ಅವರು ಅಂದು ಮಾಡಿದ ಒಂದು ತಪ್ಪು ಇವತ್ತು ಹೆಮ್ಮರವಾಗಿ ಬೆಳೆದಿದೆ. ಸಂಘ ಪರಿವಾರವನ್ನು ಸಮರ್ಥಿಸಿಕೊಳ್ಳುವ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು’ ಎಂದು ನೆನಪಿಸಿಕೊಂಡರು.

‘ಸ್ವಾತಂತ್ರ್ಯದ ನಂತರದ ರಾಜಕೀಯವನ್ನು ಬರೆಯುವವರು ಕಡಿಮೆ. ಮಾಜಿ ಶಾಸಕ ವೈ.ಎಸ್‌.ವಿ ದತ್ತ ಅವರು ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.

‘ಗಾಂಧೀಯಾನ–ವಿಭಿನ್ನ ಪಯಣ’ ಎಂಬ ಆಂದೋಲನಕ್ಕೆ ಎಚ್‌.ಡಿ ದೇವೇಗೌಡರು ಚಾಲನೆ ನೀಡಿದರು. ಇದನ್ನು ದತ್ತ ಹಾಗೂ ಬಿ.ಎಲ್‌.ಶಂಕರ್ ಅವರು ಮುನ್ನಡೆಸಿಕೊಂಡು ಹೋಗಬೇಕು ಎಂದು ಹೇಳಿದರು.

ಆಸ್ಪತ್ರೆಯಿಂದ ಬಂದ ದೊರೆಸ್ವಾಮಿ

ಉಸಿರಾಟದ ತೊಂದರೆಯಿಂದ ಗುರುವಾರ ಬೆಳಿಗ್ಗೆಯಷ್ಟೇ ಜಯದೇವ ಹೃದ್ರೋಗ ಸಂಸ್ಥೆಗೆ ದೊರೆಸ್ವಾಮಿ ಅವರು ದಾಖಲಾಗಿದ್ದರು. ಕಾರ್ಯಕ್ರಮದ ನಿರೂಪಕರು, ದೊರೆಸ್ವಾಮಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ, ಅವರು ಬರುವುದಿಲ್ಲ ಎಂದು ಘೋಷಿಸಿದ್ದರು. ಆದರೆ, ಜಯಪ್ರಕಾಶ ನಾರಾಯಣರ ಕುರಿತು ಮಾತನಾಡಲೇಬೇಕು ಎಂದು ಪಟ್ಟುಹಿಡಿದ ದೊರೆಸ್ವಾಮಿ ಅವರು, ವೈದ್ಯರೊಂದಿಗೆ ನೇರವಾಗಿ ಕಾರ್ಯಕ್ರಮಕ್ಕೆ ಬರುವ ಮೂಲಕ ಸಭಿಕರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದರು.

ತೃತೀಯ ರಂಗ: ಗೌಡರಿಗೆ ಅನುಮಾನ

‘ಜೆಡಿಎಸ್‌ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ರಚನೆ ಸಂದರ್ಭದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳನ್ನು ರಾಷ್ಟ್ರಮಟ್ಟದಲ್ಲಿ ಒಂದುಗೂಡಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿದೆಯೇ ಅನ್ನುವುದು ಗೊತ್ತಿಲ್ಲ’ ಎಂದು ಎಚ್‌.ಡಿ.ದೇವೇಗೌಡ ಅನುಮಾನ ವ್ಯಕ್ತಪಡಿಸಿದರು.

‘ವರ್ತಮಾನ’ ಕೃತಿ ವಿವರ

ಲೇಖಕ: ವೈ.ಎಸ್‌.ವಿ ದತ್ತ, ಪ್ರಕಾಶಕರು: ಭಾರತಯಾತ್ರಾ ಕೇಂದ್ರ

ಪುಟ ಸಂಖ್ಯೆ:138, ಬೆಲೆ: ₹ 120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT