ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಸ್ಕ್ವೇರ್: ಕಾಂಪೌಂಡ್ ತೆರವು

Last Updated 1 ಜೂನ್ 2011, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿದ್ದ ಸಂಪಿಗೆ ರಸ್ತೆಯ ಮಂತ್ರಿ ಸ್ಕ್ವೇರ್ ಕಟ್ಟಡದ ಬಳಿ ವಿಸ್ತರಣೆಗೆ ಅಗತ್ಯವಾದ ಭೂಮಿ ಪಡೆಯುವ ಕಾರ್ಯಕ್ಕೆ ಬುಧವಾರ ಚಾಲನೆ ದೊರೆತಿದ್ದು, ಕಾಂಪೌಂಡ್ ತೆರವುಗೊಳಿಸಲಾಯಿತು. ಈ ನಡುವೆ ಸಮಯಾವಕಾಶ ನೀಡುವಂತೆ ಮಂತ್ರಿ ಡೆವಲಪರ್ಸ್‌ ಸಂಸ್ಥೆ ಪ್ರಮಾಣ ಪತ್ರ ಸಲ್ಲಿಸಿದ್ದು, ತೆರವು ಕಾರ್ಯ ಸ್ಥಗಿತಗೊಂಡಿದೆ.

ಮಂತ್ರಿ ಸ್ಕ್ವೇರ್ ಕಟ್ಟಡದಲ್ಲಿ 108.08 ಮೀಟರ್ ಉದ್ದ ಹಾಗೂ ಮಂತ್ರಿ ಗ್ರೀನ್ಸ್ ಅಪಾರ್ಟ್‌ಮೆಂಟ್ ಕಾಂಪೌಂಡ್ ಬಳಿ 210 ಮೀಟರ್ ಉದ್ದದ ಭೂಮಿಯನ್ನು ವಶಕ್ಕೆ ಪಡೆಯುವ ಕಾರ್ಯಕ್ಕೆ ಬುಧವಾರ ಬೆಳಿಗ್ಗೆ 7.30ಕ್ಕೆ ಚಾಲನೆ ನೀಡಲಾಯಿತು.

ಸಂಪಿಗೆ ರಸ್ತೆಯಿಂದ ಶ್ರೀರಾಮಪುರದ ಕಡೆಗೆ ಹೋಗುವ ರಸ್ತೆಯಲ್ಲಿನ `ಮಂತ್ರಿ ಗ್ರೀನ್ಸ್~ ಅಪಾರ್ಟ್‌ಮೆಂಟ್‌ಕಾಂಪೌಂಡ್ ಕೆಡವಲಾಯಿತು.

ಈ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್‌ನ ಕೆಲವು ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.  ಜೆಸಿಬಿ ಯಂತ್ರದ ಕಾರ್ಯಾಚರಣೆಗೆ ಮಹಿಳೆಯರು ಅಡ್ಡಿಪಡಿಸ ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ನೀಡದಿದ್ದಾಗ ಆಕ್ರೋಶ ವ್ಯಕ್ತಪಡಿಸಿದರು.

`ಪಾಲಿಕೆ ನೋಟಿಸ್ ನೀಡದೆ ಕಾಂಪೌಂಡ್ ಕೆಡವುತ್ತಿದೆ. ಇದರಿಂದ ಯಾರು ಬೇಕಾದರೂ ಅಪಾರ್ಟ್‌ಮೆಂಟ್ ಪ್ರವೇಶಿಸುವಂತಾಗಿದ್ದು, ರಕ್ಷಣೆ ಇಲ್ಲದಂತಾಗಿದೆ. ಕಾಂಪೌಂಡ್ ತೆರವುಗೊಳಿಸುವ ಬಗ್ಗೆ ಮಂತ್ರಿ ಡೆವಲಪರ್ಸ್‌ ಸಂಸ್ಥೆಯ ಅಧಿಕಾರಿಗಳು ಕೂಡ ಯಾವುದೇ ಮಾಹಿತಿ ನೀಡದಿರುವುದು ಖಂಡನೀಯ~ ಎಂದು ನಿವಾಸಿಗಳು ದೂರಿದರು.

ಕಾರ್ಯಾಚರಣೆ ನಡೆಯುತ್ತಿದ್ದಂತೆ ಮಂತ್ರಿ ಡೆವಲಪರ್ಸ್‌ ಸಂಸ್ಥೆಯ ಸಿಬ್ಬಂದಿ ಮುರಿದುಬಿದ್ದ ಕಬ್ಬಿಣದ ಸಲಾಕೆಗಳು, ಉಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾರಂಭಿಸಿದರು. ದುಬಾರಿ ಮೌಲ್ಯದ ಅಲಂಕಾರಿಕ ವಸ್ತುಗಳನ್ನು ಬೇರೆಡೆಗೆ ಸಾಗಿಸಿದರು.

ಜನರ ಬೆಂಬಲ: ಕಾರ್ಯಾಚರಣೆಗೆ ಸ್ಥಳೀಯರು ಬೆಂಬಲ ಸೂಚಿಸಿದರು. ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಚಾಲಕರು ಪಾಲಿಕೆ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಅಭಿನಂದಿಸಿದ  ದೃಶ್ಯ ಕಂಡುಬಂತು.

ಎರಡು ಕೋಟಿ ನಷ್ಟ: `ಪಾಲಿಕೆ ಯಾವುದೇ ನೋಟಿಸ್ ನೀಡದೇ ಏಕಾಏಕಿ ಕಾಂಪೌಂಡ್ ಕೆಡವಿರುವುದು ನ್ಯಾಯವಲ್ಲ. ಇದರಿಂದ ಎರಡು ಕೋಟಿ ರೂಪಾಯಿ ನಷ್ಟ ಉಂಟಾಗಿದೆ~ ಎಂದು ಮಂತ್ರಿ ಡೆವಲಪರ್ಸ್‌ ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಕಿರಣ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

`ರ‌್ಯಾಂಪ್ ನಿರ್ಮಾಣವಾಗಿರುವ ಪ್ರದೇಶದಲ್ಲಿ ಸಾಕಷ್ಟು ಕೇಬಲ್‌ಗಳು ಹಾದು ಹೋಗಿವೆ. ಇವುಗಳ ತೆರವಿಗೆ ವೈಜ್ಞಾನಿಕ ಯಂತ್ರೋಪಕಣ ಬಳಸಬೇಕಿದೆ. ಹಾಗಾಗಿ ಕಾಲಾವಕಾಶ ಕೋರಿದ್ದರೂ ಸ್ಪಂದಿಸಲಿಲ್ಲ~ ಎಂದರು.

ವಿಳಂಬವಾಗಿರುವುದು ನಿಜ: `ಜನರ ಅನುಕೂಲಕ್ಕಾಗಿ ಮಾಲ್‌ನ ಪಕ್ಕದಲ್ಲಿ ಸಾರ್ವಜನಿಕ ರಸ್ತೆ ನಿರ್ಮಾಣ ಕಾರ್ಯ ವಿಳಂಬವಾಗಿದೆ. ಉದ್ದೇಶಿತ ರಸ್ತೆ ನಿರ್ಮಾಣ ಸ್ಥಳದಲ್ಲಿ ಮೆಟ್ರೊ ರೈಲು ಕಾಮಗಾರಿ ಪ್ರಗತಿಯಲ್ಲಿರುವುದರಿಂದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ~ ಎಂದರು. `ಕೇಬಲ್ ಮಾರ್ಗದ ಸ್ಥಳಾಂತರ ಹಾಗೂ ರ‌್ಯಾಂಪ್ ಭಾಗ ತೆರವುಗೊಳಿಸಲು ಒಂದು ತಿಂಗಳ ಕಾಲಾವಕಾಶ ಕೋರಿ ಪ್ರಮಾಣ ಪತ್ರ ಸಲ್ಲಿಸಲಾಗುವುದು~ ಎಂದು ಹೇಳಿದರು.

ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಟಿ. ರಮೇಶ್, `8 ಜೆಸಿಬಿ ಯಂತ್ರಗಳು ಸೇರಿದಂತೆ ಹಲವು ಯಂತ್ರೋಪಕರಣಗಳು ಹಾಗೂ 50 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಂತ್ರಿ ಡೆವಲಪರ್ಸ್‌ ಸಂಸ್ಥೆಯು ತಿಂಗಳ ಕಾಲಾವಕಾಶ ನೀಡುವಂತೆ ಕೋರಿರುವುದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ~ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಥಹೀನ ಹೇಳಿಕೆ: `ರಸ್ತೆ ವಿಸ್ತರಣೆಗೆ ಅಗತ್ಯವಾದ ಭೂಮಿಯನ್ನು ಬಿಟ್ಟುಕೊಡುವಂತೆ ಈ ಹಿಂದೆಯೇ ಮಂತ್ರಿ ಡೆವಲಪರ್ಸ್‌ ಸಂಸ್ಥೆಗೆ ತಿಳಿಸಲಾಗಿತ್ತು. ಸಂಸ್ಥೆ ಸಹ ಒಪ್ಪಿಗೆ ನೀಡಿತ್ತು. ರ‌್ಯಾಂಪ್ ತೆರವಿಗೆ ಕಾಲಾವಕಾಶ ನೀಡುವಂತೆ ಕೋರಿದ್ದರಿಂದ ಮೇ 10ರಿಂದ 31ರವರೆಗೆ ಸಮಯಾವಕಾಶ ಸಹ ನೀಡಲಾಗಿತ್ತು. ಇಷ್ಟಾದರೂ ಯಾವುದೇ ಮಾಹಿತಿ ನೀಡಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ~ ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ `ಪ್ರಜಾವಾಣಿ~ಗೆ ತಿಳಿಸಿದರು.

`ಖಾಸಗಿ ಸಂಸ್ಥೆಯೊಂದರ ಅನುಕೂಲಕ್ಕಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಮಾಡುವುದು ಸರಿಯಲ್ಲ. ಹಾಗಾಗಿ ಬುಧವಾರದಿಂದ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ~ ಎಂದರು.`ಈ ನಡುವೆ 30 ದಿನಗಳ ಕಾಲಾವಕಾಶ ನೀಡುವಂತೆ ಕೋರಿ ಸಂಸ್ಥೆಯು ಪ್ರಮಾಣಪತ್ರ ಸಲ್ಲಿಸಿದೆ. ಇದನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದರು.

ವಿರೋಧಾಭಾಸದ ಹೇಳಿಕೆಗಳು!

ಮಂತ್ರಿ ಸ್ಕ್ವೇರ್ ಕಟ್ಟಡ ನಿರ್ಮಾಣದ ಬಗ್ಗೆ ಸಾಕಷ್ಟು ವಿರೋಧಾಭಾಸದ ಹೇಳಿಕೆಗಳು ಕೇಳಿಬಂದವು. ಕಟ್ಟಡಕ್ಕೆ ಕೇವಲ ತಾತ್ಕಾಲಿಕ ಸ್ವಾಧೀನ ಪತ್ರ (ಪಾರ್ಷಿಯಲ್ ಒ.ಸಿ) ನೀಡಲಾಗಿದೆ ಎಂದು ಪ್ರಧಾನ ಎಂಜಿನಿಯರ್ ಬಿ.ಟಿ. ರಮೇಶ್ ತಿಳಿಸಿದರೆ, ಕಿರಣ್ ಕುಮಾರ್ ಅವರು ಮೂಲ ಸ್ವಾಧೀನ ಪತ್ರ ಪಡೆದಿರುವುದಾಗಿ ಹೇಳಿದರು.

ಸ್ವಾಧೀನ ಪತ್ರ ವಿತರಣೆಗೆ ಸಂಬಂಧಪಟ್ಟ ನಿಬಂಧನೆಗಳನ್ನು ಒಪ್ಪಿರುವುದಾಗಿ ಕಿರಣ್‌ಕುಮಾರ್ ಹೇಳಿದರೆ, ಎಲ್ಲವನ್ನೂ ಒಪ್ಪಿಲ್ಲ ಎಂದು ರಮೇಶ್ ಸ್ಪಷ್ಟನೆ ನೀಡಿದರು. ರಸ್ತೆ ವಿಸ್ತರಣೆಗೆ ಸಂಬಂಧಪಟ್ಟಂತೆ ನೋಟಿಸ್ ನೀಡಿಲ್ಲ ಎಂದು ಕಿರಣ್‌ಕುಮಾರ್ ಆರೋಪಿಸಿದರೆ, ಈ ಬಗ್ಗೆ ನೋಟಿಸ್ ಜತೆಗೆ ಮಾಹಿತಿ ನೀಡಲಾಗಿದೆ ಎಂದು ರಮೇಶ್ ಪ್ರತಿಕ್ರಿಯಿಸಿದರು.

ಈ ಎಲ್ಲ ಹೇಳಿಕೆಗಳು ಇಬ್ಬರೂ ಪರಸ್ಪರ ಮುಖಾಮುಖಿಯಾಗಿದ್ದ ಸಂದರ್ಭದಲ್ಲೇ ವ್ಯಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT