ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಿಲಾ ಪ್ರವಾಸ ಕೈಬಿಟ್ಟ ಮೇಯರ್‌

ಬೆಂಗಳೂರಿಗೆ ಬಂದು ಮಾಹಿತಿ ಒದಗಿಸಿದ ತಜ್ಞರ ತಂಡ
Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ ಅಧ್ಯಯನ­ಕ್ಕಾಗಿ ಮನಿಲಾ ಮತ್ತು ಫಿಲಿಫೈನ್ಸ್‌ ದೇಶಗಳಿಗೆ ನಿಯೋಗ ಕರೆದೊಯ್ಯುವ ನಿರ್ಧಾರದಿಂದ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹಿಂದೆ ಸರಿದಿದ್ದಾರೆ.

ಮನಿಲಾದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರ­ಜ್ಞಾನದ ಕುರಿತು ಅಲ್ಲಿನ ತಜ್ಞರ ತಂಡ ಗುರುವಾರ ಬೆಂಗಳೂರಿಗೆ ಬಂದು ಮೇಯರ್‌ ಹಾಗೂ ವಿಶೇಷ ಆಯುಕ್ತ (ಘನತ್ಯಾಜ್ಯ) ದರ್ಪಣ್‌ ಜೈನ್‌ ಅವರಿಗೆ ವಿವರಣೆ ನೀಡಿದೆ. ಹೀಗಾಗಿ ಮೇಯರ್‌ ತಮ್ಮ ಉದ್ದೇಶಿತ ಪ್ರವಾಸವನ್ನು ಕೈಬಿಟ್ಟಿದ್ದಾರೆ. ‘ಮನಿಲಾ ಸಂಸ್ಥೆಯ ಮುಖ್ಯಸ್ಥ ಆ್ಯಂಡ್ರ್ಯೂ ಸ್ಕಿಡ್‌ಮೋರ್‌ ಅವರ ತಂಡವೇ ಬೆಂಗಳೂರಿಗೆ ಬಂದು ಕಸ ಸಂಸ್ಕರಣೆ ಘಟಕದ ಕುರಿತು ಸಮಗ್ರ ಮಾಹಿತಿ ಒದಗಿಸಿದೆ’ ಎಂದು ಮೇಯರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಪ್ರತಿದಿನ 700 ಟನ್‌ ಕಸ ಸಂಸ್ಕರಿಸುವ ಘಟಕ ಸ್ಥಾಪನೆಗೆ ಮನಿಲಾ  ಮೂಲದ ಸಂಸ್ಥೆ ಮುಂದಾ­ಗಿದೆ. ಮಿಶ್ರ ಕಸವನ್ನೇ ಸ್ವೀಕರಿಸಿ ಇಂಧನ ಉತ್ಪಾದನೆ ಮಾಡುವ ಪ್ರಸ್ತಾವವನ್ನು ಅದು ಮುಂದಿಟ್ಟಿದೆ. ಘಟಕ ಸ್ಥಾಪನೆಗೆ ಒಂದೂವರೆ ಎಕರೆ ಭೂಮಿ ಸಾಕು ಎಂದು ಅಲ್ಲಿನ ತಜ್ಞರು ಹೇಳಿದ್ದು, ಹಣ­ಕಾಸಿನ ವಿಷಯವನ್ನು ಇನ್ನಷ್ಟೇ ಚರ್ಚಿಸಬೇಕಿದೆ’ ಎಂದು ವಿವರಿಸಿದರು. ‘ಪ್ರಾಯೋಗಿಕವಾಗಿ ಸ್ಥಾಪನೆಯಾಗುವ ಘಟಕದ ಯಶಸ್ಸನ್ನು ನೋಡಿಕೊಂಡು ಇನ್ನಷ್ಟು ಘಟಕ­ಗಳ ಸ್ಥಾಪನೆ ಕುರಿತು ತೀರ್ಮಾನ ಮಾಡ­ಲಾಗುತ್ತದೆ’ ಎಂದು ಹೇಳಿದರು.

ತಮ್ಮ ಸಂಸ್ಥೆಯ ಕುರಿತು ಮಾಹಿತಿ ನೀಡಿದ ಸ್ಕಿಡ್‌ಮೋರ್‌, ‘ನಾವು ಮಿಶ್ರ ತ್ಯಾಜ್ಯವನ್ನು ಸ್ವೀಕರಿಸುತ್ತೇವೆ. ಕಸ ವಿಂಗಡಣೆ ಮಾಡಿಕೊಂಡು ವಿದ್ಯುತ್‌ ಉತ್ಪಾದನೆ ಮಾಡುವ ತಂತ್ರಜ್ಞಾನ ನಮ್ಮಲ್ಲಿದೆ. ಬೃಹನ್‌ ಮುಂಬೈ ಮಹಾನಗರ ಪಾಲಿಕೆ ಸಹ ಘಟಕ ಸ್ಥಾಪನೆಗೆ ಆಸಕ್ತಿ ತೋರಿದೆ’ ಎಂದು ಮಾಹಿತಿ ನೀಡಿದರು.

‘ಮನಿಲಾದಲ್ಲಿ ಏಳು ಘಟಕಗಳು ಇದ್ದು, 5,000 ಟನ್‌ ತ್ಯಾಜ್ಯವನ್ನು ನಿತ್ಯ ಸಂಸ್ಕರಣೆ ಮಾಡುತ್ತಿವೆ’ ಎಂದು ತಿಳಿಸಿದರು. ‘ಘಟಕ ಸ್ಥಾಪಿಸಲು ನಮಗೆ ಕನಿಷ್ಠ ಆರು ತಿಂಗಳು ಬೇಕು. ಪರಿಸರ ಸ್ನೇಹಿಯಾದ ತಂತ್ರಜ್ಞಾನವನ್ನೇ ನಾವು ಹೊಂದಿದ್ದೇವೆ’ ಎಂದು ಹೇಳಿದರು.ನಗರದಲ್ಲಿ ಪ್ರತಿದಿನ 4,000 ಟನ್‌ ಕಸ ಉತ್ಪಾದನೆ ಆಗುತ್ತಿದ್ದು, ವೈಜ್ಞಾನಿಕವಾಗಿ ಕಸ ಸಂಸ್ಕರಿಸುವ ಮಾರ್ಗೋಪಾಯಗಳಿಗಾಗಿ ಬಿಬಿಎಂಪಿ ಹುಡುಕಾಟ ನಡೆಸಿದೆ. ಡಿಸೆಂಬರ್‌ 1ರಿಂದ ಮಂಡೂರು ಭೂಭರ್ತಿ ಘಟಕವನ್ನು ಬಂದ್‌ ಮಾಡಬೇಕಾಗಿರುವ ಕಾರಣ ಒತ್ತಡಕ್ಕೂ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT