ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಾನವತಾವಾದಿ, ಶಿಕ್ಷಣ ಪ್ರೇಮಿ'

Last Updated 16 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಜಾತಿಯ ಕಟ್ಟುಪಾಡಿಲ್ಲದೇ ಆದಿಚುಂಚನಗಿರಿ ಮಠವನ್ನು ಬೆಳೆಸಿದ ಮಹಾನ್ ಮಾನವತಾವಾದಿ ಬಾಲಗಂಗಾಧರನಾಥ ಸ್ವಾಮೀಜಿ' ಎಂದು ಗಾಂಧಿ ಭವನದ ಅಧ್ಯಕ್ಷ ಹೊ.ಶ್ರೀನಿವಾಸಯ್ಯ ಬಣ್ಣಿಸಿದರು.

ಒಕ್ಕಲಿಗರ ಸಂಘ ಬುಧವಾರ ನಗರದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

`ಕೇವಲ ಒಕ್ಕಲಿಗ ಜನಾಂಗಕ್ಕೆ ಮಾತ್ರ ಮಠವನ್ನು ಸೀಮಿತಗೊಳಿಸದೇ ಮಠಕ್ಕೆ ಎಲ್ಲ ಜಾತಿ ಹಾಗೂ ಮತಗಳ ಜನರ ಪ್ರವೇಶಕ್ಕೆ ಸ್ವಾಮೀಜಿ ಅವಕಾಶ ಮಾಡಿಕೊಟ್ಟಿದ್ದರು. ಮಾತೃ ಹೃದಯಿಯಾಗಿದ್ದ ಸ್ವಾಮೀಜಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಒತ್ತು ನೀಡಿದ್ದರು' ಎಂದು ಅವರು ನುಡಿದರು.

`ಮೃದು ಮಾತಿನ ಸರಳ ವ್ಯಕ್ತಿತ್ವದ ಸ್ವಾಮೀಜಿ, ಸದ್ದಿಲ್ಲದೇ ಮೌಲ್ಯಯುತ ಕೆಲಸ ಮಾಡುತ್ತಿದ್ದರು ಎಂದರು.

ಕೆಂಗೇರಿಯ ವಿಶ್ವ ಒಕ್ಕಲಿಗ ಸಂಸ್ಥಾನದ ಕುಮಾರ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, `1968ರಲ್ಲಿ ನಾನು ಮತ್ತು ಸ್ವಾಮೀಜಿ ಒಟ್ಟಾಗಿ ಮಠವನ್ನು ಪ್ರವೇಶಿಸಿದೆವು. ಕೈಲಾಸಾಶ್ರಮದಲ್ಲಿ ಒಟ್ಟಿಗೇ ಸಂಸ್ಕೃತ ಅಭ್ಯಾಸ ಮಾಡಿದೆವು. ಆದರೆ, ಕೆಲವರ ಒತ್ತಡದಿಂದಾಗಿ ಬಾಲಗಂಗಾಧರನಾಥ ಸ್ವಾಮೀಜಿ ಅವರೇ ಪೀಠಾಧ್ಯಕ್ಷರಾದರು. ಅಂದಿನಿಂದ ನಮ್ಮ ನಡುವಿದ್ದ ವೈಮನಸ್ಸು ಅವರ ಸಾವಿನ ಸಂದರ್ಭದಲ್ಲಿ ದೂರವಾಯಿತು' ಎಂದು ಹೇಳಿದರು.

`ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ದಿನ (ಜ.13) ನನ್ನ ಕೆಲವು ಶಿಷ್ಯರು, ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸುವುದು ಒಳ್ಳೆಯದು ಎಂದು ನನಗೆ ಸಲಹೆ ನೀಡಿದರು. ಅಂದು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಅಂಜಿಕೆಯಿಲ್ಲದೇ ನಾನು ಮತ್ತು ಸ್ವಾಮೀಜಿ ಮಾತನಾಡಿದೆವು. ಅಂದೇ ಸ್ವಾಮೀಜಿ ಇಹಲೋಕ ತ್ಯಜಿಸಿದರು' ಎಂದರು.
ಗುರುಗುಂಡ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ,`ಸ್ವಾಮೀಜಿ ಅವರ ಆದರ್ಶ ಹಾಗೂ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.

ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ಹಿರಿಯ ಪರ್ತಕರ್ತರಾದ ಪಿ.ರಾಮಯ್ಯ, ಅರ್ಜುನ ದೇವ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ಮತ್ತಿತರರು ಸ್ವಾಮೀಜಿ ಅವರಿಗೆ ನುಡಿನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT