ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಲಕ್ಷ ಗಣಪ ನೀರಿಗೆ!

Last Updated 10 ಸೆಪ್ಟೆಂಬರ್ 2013, 19:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ಕೆರೆಗಳಲ್ಲಿ ನಿರ್ಮಿಸಲಾಗಿದ್ದ ಕಲ್ಯಾಣಿ ಮತ್ತು ಮೊಬೈಲ್‌ ಟ್ಯಾಂಕ್‌ಗಳಲ್ಲಿ ಗಣೇಶ ಚತುರ್ಥಿಯ ಮೊದಲ ದಿನವಾದ ಸೋಮವಾರವೇ 1,10,250 ಗಣೇಶ ಮೂರ್ತಿಗಳು ಮುಳುಗಿವೆ!

ಬೆಳಿಗ್ಗೆ ಗಣೇಶ ಮೂರ್ತಿಯ ಪ್ರತಿಷ್ಠಾನದ ಸಂಭ್ರಮವಾದರೆ ಸಂಜೆ ಕಳುಹಿಸುವ ಸಡಗರ. ಪಟಾಕಿ ಅಬ್ಬರ. ಸ್ಯಾಂಕಿ ಕೆರೆ, ಹಲಸೂರು ಕೆರೆ ಮತ್ತು ಯಡೆಯೂರು ಕೆರೆಗಳಲ್ಲಿ ಗಣೇಶನ ವಿಸರ್ಜನೆಗಾಗಿಯೇ ವಿಶೇಷ ಕಲ್ಯಾಣಿಗಳನ್ನು ನಿರ್ಮಿಸಲಾಗಿದೆ.

ಸುಸೂತ್ರವಾಗಿ ಮೂರ್ತಿ ವಿಸರ್ಜನೆ ನಡೆಯುವಂತೆ ನೋಡಿಕೊಳ್ಳಲು ಎಲ್ಲ ಕಡೆ ಸರದಿ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್‌ ಕಾವಲನ್ನೂ ಹಾಕಲಾಗಿದೆ.
ಸಂಜೆ 4ರ ಸುಮಾರಿಗೆ ಶುರುವಾದ ವಿಸರ್ಜನೆ ಭರಾಟೆ ಇಡೀ ರಾತ್ರಿ ನಡೆದೇ ಇತ್ತು. ಬೆಳಗಿನವರೆಗೂ ಗಣಪತಿ ವಿಗ್ರಹಗಳ ವಿಸರ್ಜನೆ ಮಾಡಲಾಯಿತು. ಈ ಮೂರು ಕೆರೆಗಳಲ್ಲದೆ ಮೊಬೈಲ್‌ ಟ್ಯಾಂಕ್‌ಗಳ ವ್ಯವಸ್ಥೆಯನ್ನೂ ಬಿಬಿಎಂಪಿಯಿಂದ ಕಲ್ಪಿಸಲಾಗಿತ್ತು.

ಸ್ಯಾಂಕಿ ಕೆರೆಯೊಂದರಲ್ಲೇ 35,129 ಮೂರ್ತಿಗಳನ್ನು ನೀರಿಗೆ ಬಿಡಲಾಯಿತು. ಸ್ಯಾಂಕಿ ಕೆರೆಯಲ್ಲಿ ಎರಡನೇ ದಿನವೂ 250 ಗಣಪತಿ ವಿಗ್ರಹಗಳನ್ನು ವಿಸರ್ಜನೆ ಮಾಡಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ಮೊದಲನೇ, ಮೂರನೇ, ಐದನೇ... ಹೀಗೇ ಬೆಸಸಂಖ್ಯೆ ದಿನಗಳಲ್ಲಿ ಮೂರ್ತಿಗಳನ್ನು ವಿಸರ್ಜನೆ ಮಾಡುವುದು ರೂಢಿಯಾಗಿದೆ.

ಕಲ್ಯಾಣಿಯಲ್ಲಿ ದೊಡ್ಡ ವಿಗ್ರಹಗಳನ್ನು ಮುಳುಗಿಸಲು ಹರಸಾಹಸವನ್ನೇ ಮಾಡಬೇಕಿತ್ತು. ವಿಸರ್ಜನೆಗೆ ಸಾವಿರ, ಸಾವಿರ ಸಂಖ್ಯೆಯಲ್ಲಿ ಮೂರ್ತಿಗಳನ್ನು ತರಲಾಗಿತ್ತು. ಕೆಲವು ‘ಗಣಪ’ರು ಮುಳುಗಲು ಸಿದ್ಧರಿಲ್ಲದೆ ತೇಲುತ್ತಿದ್ದರು. ಬಣ್ಣವಿಲ್ಲದ ಮಣ್ಣಿನ ಮೂರ್ತಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು.

ಮುಳುಗಿದ ವಿಗ್ರಹಗಳನ್ನು ಉಳಿದವುಗಳ ವಿಸರ್ಜನೆಗೆ ಅನುವು ಮಾಡಿಕೊಡಲು ಬಿಬಿಎಂಪಿ ಸಿಬ್ಬಂದಿ ಎತ್ತಿ ದಡದ ಮೇಲೆ ಇಡುತ್ತಿದ್ದರು. ಅವುಗಳನ್ನು ತೆರಪಿಲ್ಲದಂತೆ ಟ್ರ್ಯಾಕ್ಟರ್‌ಗಳಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಬೃಹತ್‌ ಗಾತ್ರದ ನೂರಾರು ವಿಗ್ರಹಗಳನ್ನೂ ಮೊದಲ ದಿನವೇ ನೀರಿಗೆ ಬಿಡಲಾಯಿತು.

ವಿಗ್ರಹಗಳ ಜತೆಗೆ ಅಲಂಕಾರಕ್ಕೆ ಬಳಸಿದ ಸಾಮಗ್ರಿಗಳನ್ನೂ ಎಸೆದಿದ್ದರಿಂದ ಕೊಳಗಳು ತುಂಬಿ ತುಳುಕುತ್ತಿದ್ದವು. ಕೆರೆ ಸುತ್ತಲಿನ ಪ್ರದೇಶಗಳಲ್ಲಿ ಹೂವು ಮತ್ತು ಬಾಳೆಕಂಬದ ದೊಡ್ಡ ರಾಶಿಯೇ ಬಿದ್ದಿತ್ತು. ಪೌರ ಕಾರ್ಮಿಕರು ಇಡೀ ದಿನ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದರು. ವಿಗ್ರಹಗಳ ಬಣ್ಣದಿಂದ ಕೊಳಗಳು ರಂಗು–ರಂಗಾಗಿದ್ದವು.

ಮಾರುಕಟ್ಟೆ ಪ್ರದೇಶಗಳಲ್ಲೂ ಹೂವು, ಬಾಳೆಕಂಬದ ತ್ಯಾಜ್ಯ ದೊಡ್ಡ ಪ್ರಮಾಣದಲ್ಲಿ ಬಿದ್ದಿತ್ತು. ಮಲ್ಲೇಶ್ವರದ ದೇವಾಲಯದ ಬೀದಿಯಲ್ಲಿ ಮಾರಾಟವಾಗದೆ ಉಳಿದಿದ್ದ ‘ಗಣೇಶ’ರು ರಸ್ತೆಯ ಎಡ–ಬಲ ಬದಿಯಲ್ಲಿ ಸಾಲಾಗಿ ನಿಂತಿದ್ದರು. ಆ ಮೂರ್ತಿಗಳನ್ನು ವಾಪಸು ಒಯ್ಯುತ್ತಿದ್ದ ದೃಶ್ಯ ಸಹ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT