ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹಬ್ಬವಾಗಿ ರಾಜ್ ಜನ್ಮದಿನ ಆಚರಣೆಯಾಗಲಿ

ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಪಾದನೆ
Last Updated 24 ಏಪ್ರಿಲ್ 2013, 20:19 IST
ಅಕ್ಷರ ಗಾತ್ರ

ಬೆಂಗಳೂರು: `ಬಹುಮುಖ ವ್ಯಕ್ತಿತ್ವದ ವಿರಾಟ್ ಸ್ವರೂಪಿಯಾದ ಡಾ.ರಾಜ್‌ಕುಮಾರ್ ಅವರ ಜನ್ಮದಿನವನ್ನು ದೇಶದ ಹಬ್ಬವಾಗಿ ಆಚರಿಸುವಂತಾಗಬೇಕು' ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರು ಪ್ರತಿಪಾದಿಸಿದರು.

ವಾರ್ತಾ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಏರ್ಪಡಿಸಿದ್ದ `ಡಾ.ರಾಜ್‌ಕುಮಾರ್ ಅವರ 85ನೇ ಜನ್ಮ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

`ಸರ್ಕಾರ ತನ್ನ ದುರಾಡಳಿತ ಮತ್ತು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಡಾ.ರಾಜ್ ಕುಮಾರ್ ಜನ್ಮ ದಿನವನ್ನು ನೆಪ ಮಾತ್ರಕ್ಕೆ ಆಚರಿಸುತ್ತಿದೆ. ಡಾ.ರಾಜ್ ಅಭಿಮಾನಿಗಳು ಪ್ರಯತ್ನ ಪಟ್ಟರೆ ಈ ದಿನವನ್ನು ದೇಶಿಯ ಹಬ್ಬವಾಗಿ ಆಚರಿಸಬಹುದು' ಎಂದು ಹೇಳಿದರು.

`ರಾಜ್ ಕುಮಾರ್ ಅವರು ಕಲಾನಿಷ್ಠೆ, ಭಾಷಾ ಸ್ಪಷ್ಟತೆ ಮತ್ತು ಸಹ ಕಲಾವಿದರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಇಂದು ನಾಯಕನಟರ ಸರ್ವಾಧಿಕಾರಿ ಧೋರಣೆಯಿಂದ ಉಳಿದ ಕಲಾವಿದರು ಅಸಹಾಯಕ ಬಲಿಪಶುಗಳಂತೆ ಬದುಕುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.

ನಟ ಶಿವರಾಜ್ ಕುಮಾರ್ ಮಾತನಾಡಿ, `ರಾಜ್ ಕುಮಾರ್ ಅವರು ನಮಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಅಪ್ಪಾಜಿ ಇದ್ದಂತೆ. ಅವರು ನಮ್ಮಿಂದ ದೂರವಾಗಿಲ್ಲ, ಅಭಿಮಾನಿಗಳ ಪ್ರೀತಿಯ ಮೂಲಕ ನಮ್ಮ ಜತೆಗೆ ಇದ್ದಾರೆ' ಎಂದು ಹೇಳುತ್ತಾ ಭಾವುಕರಾದರು.

ಗುರುಕಿರಣ್ ಹಾಡಿಗೆ ಆಕ್ಷೇಪ: ಕಾರ್ಯಕ್ರಮದ ಮೊದಲು ಡಾ.ರಾಜ್‌ಕುಮಾರ್ ಅಭಿನಯದ ಆಯ್ದ ಚಿತ್ರಗಳ ಹಾಡಿಗೆ ಗುರುಕಿರಣ್, ವೈ.ಎನ್. ರವೀಂದ್ರ ಮತ್ತು ಅನುರಾಧ ಭಟ್ ಧ್ವನಿಗೂಡಿಸಿದರು.

ಈ ಸಂದರ್ಭ ಗುರುಕಿರಣ್ ಅವರು ರಾಜ್‌ಕುಮಾರ್ ಅವರ ಹಳೆಯ ಮಧುರ ಹಾಡನ್ನು ರಿಮಿಕ್ಸ್ ಮಾಡುವ ಮೂಲಕ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಶಿವರಾಜ್ ಕುಮಾರ್ ಮಧ್ಯ ಪ್ರವೇಶಿಸಿ, ಇಲ್ಲಿ ಯಾರೂ ಹಾಡನ್ನು ಕೆಡಿಸಲು ಬಂದಿಲ್ಲ. ಕಲಾವಿದರ ಪ್ರಯತ್ನಕ್ಕೆ ಬೆಲೆ ಕೊಟ್ಟು, ಶಾಂತಿಯುತವಾಗಿ ಹಾಡನ್ನು ಕೇಳುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದರು. ನಂತರ ಗುರುಕಿರಣ್ ಅವರು `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡನ್ನು ಹಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡರು.

`ಕನ್ನಡಿಗರ ಸಂಸ್ಕೃತಿ ಬಿಂಬಿಸುವ ರಾಜ್ ಚಿತ್ರಗಳು'
ಬೆಂಗಳೂರು:
`ಮೇರುನಟ ಡಾ.ರಾಜ್ ಕುಮಾರ್ ಅಭಿನಯದ 200ಕ್ಕೂ ಅಧಿಕ ಚಿತ್ರಗಳು ಕನ್ನಡಿಗರ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ' ಎಂದು ಚಲನಚಿತ್ರ ಹಿರಿಯ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅಭಿಪ್ರಾಯಪಟ್ಟರು.
ಡಾ.ರಾಜ್‌ಕುಮಾರ್ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ತರಬೇತಿ ಕೇಂದ್ರ ನಗರದಲ್ಲಿ ಏರ್ಪಡಿಸಿರುವ `ಡಾ.ರಾಜ್ ಸಂಸ್ಕೃತಿ ಹಬ್ಬ'ವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

`ರಾಜ್ ಅಭಿನಯದ ಎಲ್ಲಾ ಸಿನಿಮಾಗಳು ನಮ್ಮ ನೆನಪಿನಿಂದ ಎಂದೂ ಮಾಸುವುದಿಲ್ಲ. ಆದರೆ ಇಂದು ಎಷ್ಟೇ ಪ್ರಯತ್ನ ಪಟ್ಟರೂ ಅಂತಹ ಸಿನಿಮಾಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ರಾಜ್ ಅವರ 10 ಚಿತ್ರಗಳನ್ನು ಮಕ್ಕಳಿಗೆ ತೋರಿಸಿದರೆ, ಬೇರೆ ಸಂಸ್ಕಾರದ ಪಾಠ ನೀಡುವ ಅಗತ್ಯವಿಲ್ಲ' ಎಂದು ಹೇಳಿದರು.

ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್, ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕೇಂದ್ರದ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಸಂಸ್ಥಾಪಕ ಕಾರ್ಯದರ್ಶಿ ಮೇಕಪ್ ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT