ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಫ್ಟ್‌ನಲ್ಲಿ 12 ಪ್ರಯಾಣಿಕರ ಪರದಾಟ

Last Updated 26 ಅಕ್ಟೋಬರ್ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು:  ಮೂರು ತಿಂಗಳ ಮಗು, ಏಳು ವರ್ಷದ ಬಾಲಕ ಸೇರಿದಂತೆ 12 ಮಂದಿ ಪ್ರಯಾಣಿಕರು ಸುಮಾರು 45 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಪಡಿಪಾಡಲು ಪಟ್ಟ ಘಟನೆ `ನಮ್ಮ ಮೆಟ್ರೊ~ದ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಬುಧವಾರ ನಡೆದಿದೆ. ಕೇವಲ 8ಜನ ಸಾಗಬಹುದಾದ ಲಿಫ್ಟ್‌ನಲ್ಲಿ ಸಾಮರ್ಥ್ಯ ಮೀರಿ ಪ್ರಯಾಣಿಕರು ಸಾಗಿದ್ದೇ ಘಟನೆಗೆ ಕಾರಣವಾಯಿತು.

`ಒಬ್ಬ ಹಿರಿಯ ದಂಪತಿ, ಅವರ ಮೊಮ್ಮಕ್ಕಳು ಹಾಗೂ ನಮ್ಮ ಕುಟುಂಬ ಲಿಫ್ಟ್ ಪ್ರವೇಶಿಸಿದ ನಂತರವೂ ಆಪರೇಟರ್ ಮತ್ತೊಂದು ದಂಪತಿಯನ್ನೂ ಒಳಗೆ ಬಿಟ್ಟ. ನಮ್ಮ ಮಾತಿಗೆ ಬೆಲೆ ಕೊಡದೆ ಆಪರೇಟರ್ ದಂಪತಿಯನ್ನು ಲಿಫ್ಟ್‌ನೊಳಗೆ ಬಿಟ್ಟಿದ್ದರಿಂದ ಅದು ಕೆಟ್ಟು ನಿಂತು ನಾವು ಅದರೊಳಗೆ ಸಿಲುಕುವಂತಾಯಿತು~ ಎಂದು ಜಾರ್ಜ್ ಜಾನ್ `ಪ್ರಜಾವಾಣಿ~ಗೆ ತಿಳಿಸಿದರು.

ತಮ್ಮ ಮಾವ, ತಾಯಿ, ಪತ್ನಿ ಹಾಗೂ ತನ್ನ ಮೂರು ತಿಂಗಳ ಮಗುವಿನೊಂದಿಗೆ ಲಿಫ್ಟ್‌ನಲ್ಲಿ ಸಿಲುಕಿ ತೊಂದರೆ ಅನುಭವಿಸಿ ಹೊರ ಬಂದ ನಂತರ ಜಾನ್, ಈ ಸಂಬಂಧ ನಿಲ್ದಾಣದ ಮೆಟ್ರೊ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮಧ್ಯಾಹ್ನ 12.43-12.45ರ ನಡುವಣ ಲಿಫ್ಟ್ ಪ್ರವೇಶಿಸಿದ ನಾವು 1.39ರಿಂದ 1.46ರವರೆಗೆ ಅದರೊಳಗೆ ಸಿಲುಕಿ ತೊಂದರೆ ಅನುಭವಿಸಿದೆವು ಎಂದು ಜಾನ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೊ ರೈಲು ನಿಗಮದ ಬೈಯಪ್ಪನಹಳ್ಳಿ ನಿಲ್ದಾಣದ ಅಧಿಕಾರಿಗಳು, `ನಾವು ಈ ಘಟನೆ ಸಂಭವಿಸಿದ ನಿಮಿಷಗಳ ಅಂತರದಲ್ಲಿಯೇ ಅದನ್ನು ತೆರೆಯಲು ಪ್ರಯತ್ನಿಸಿದೆವು. ಆದರೆ, ನಮ್ಮ ಬಳಿ ಲಿಫ್ಟ್ ತೆರೆಯುವಂತಹ ತುರ್ತು ಕೀಗಳ ಜತೆಗೆ, ಅದಕ್ಕೆ ಸಂಬಂಧಿಸಿದ ಉಪಕರಣಗಳಿಲ್ಲದ ಕಾರಣ ಏನೂ ಮಾಡಲು ಸಾಧ್ಯವಾಗಲಿಲ್ಲ~ ಎಂದು ಹೇಳಿದರು.

`ಎಂ.ಜಿ. ರಸ್ತೆಯಿಂದ ಬೈಯಪ್ಪಯನಹಳ್ಳಿವರೆಗಿನ ರೀಚ್-1ರ ಮಾರ್ಗದಲ್ಲಿ ನಮ್ಮ ಮೆಟ್ರೊ ರೈಲು ಉದ್ಘಾಟನೆಗೂ ಮುನ್ನವೇ ಸ್ನೈಡರ್ಸ್‌ ಎಲೆಕ್ಟ್ರಾನಿಕ್ಸ್ ಎಂಬ ಕಂಪೆನಿಯು ಲಿಫ್ಟ್‌ಗಳನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಿದೆ. ಆದರೆ, ಅದಕ್ಕೆ ಸಂಬಂಧಿಸಿದ ಅಗತ್ಯತೆಗಳನ್ನು ಇನ್ನೂ ಪೂರೈಸಿಲ್ಲ~ ಎಂದು ಮತ್ತೊಬ್ಬ ಅಧಿಕಾರಿ ದೂರಿದರು.
`ಇಂತಹ ಅನಾಹುತ ಸಂಭವಿಸುವಂತಹ ಸಂದರ್ಭಗಳಲ್ಲಿ ಕಂಪೆನಿಯ ಸಿಬ್ಬಂದಿ ಇಂದಿರಾನಗರದ ಕಚೇರಿಯಿಂದ ಬಂದು ತುರ್ತು ಕೀಗಳ ಮೂಲಕ ಲಿಫ್ಟ್ ತೆರೆಯುವಷ್ಟರ ಹೊತ್ತಿಗೆ ಸಾಕಷ್ಟು ಸಮಯ ಹಿಡಿಯಲಿದೆ. ನಮಗೂ ಇದು ಹೊಸ ಅನುಭವ~ ಎಂದು ಅವರು ಪ್ರತಿಕ್ರಿಯಿಸಿದರು.

ಬಿಎಂಆರ್‌ಸಿಎಲ್ ಸ್ಪಷ್ಟನೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್ ವಕ್ತಾರ ಬಿ.ಎಲ್. ಚವ್ಹಾಣ್, `ಈ ಅವಘಡ ಸಂಭವಿಸಿದ ಸಂದರ್ಭದಲ್ಲಿ ಲಿಫ್ಟ್‌ಗಳನ್ನು ನಿರ್ವಹಿಸುತ್ತಿರುವ ಸ್ನೈಡರ್ ಕಂಪೆನಿಯ ಸಿಬ್ಬಂದಿ ನಿಲ್ದಾಣದಲ್ಲಿಯೇ ಇದ್ದರು. ಐದರಿಂದ ಏಳು ನಿಮಿಷಗಳೊಳಗಾಗಿ ಅದನ್ನು ತೆರೆಯಲಾಯಿತು~ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಜಾನ್ ಅವರು `ನಾನು ಮತ್ತು ನನ್ನ ಕುಟುಂಬ ಸುಮಾರು ಒಂದು ಗಂಟೆ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದೆವು. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಈ ಪ್ರಕರಣವನ್ನು ಗಮಭೀರವಾಗಿ ಪರಿಗಣಿಸಬೇಕು~ ಎಂದು ಆಗ್ರಹಿಸಿದ್ದಾರೆ.

 ಈ ನಡುವೆ `ಪ್ರಜಾವಾಣಿ~ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ದಾಖಲಾದ ದೂರುಗಳನ್ನು ಪರಿಶೀಲನೆ ನಡೆಸಿದಾಗ, ಈ ತಿಂಗಳ 20ರಂದು `ನಮ್ಮ ಮೆಟ್ರೊ~ ರೀಚ್-1ರ ಉದ್ಘಾಟನೆ ನಂತರ ಅಲ್ಲಿ ದಾಖಲಾದ ಎರಡನೇ ಪ್ರಕರಣ ಇದು ಎಂಬುದು ಸ್ಪಷ್ಟವಾಯಿತು. ಮೊಬೈಲ್ ಕಳವಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಮೊದಲ ಪ್ರಕರಣ ದಾಖಲಿಸಿದ್ದಾರೆ.

45 ನಿಮಿಷ ಉಸಿರು ಬಿಗಿಹಿಡಿದರು...

ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗೆ ಬಸ್ಸಿನಲ್ಲಿ ಅರ್ಧ ಗಂಟೆ ಪ್ರಯಾಣಿಸುವ ಬದಲು `ನಮ್ಮ ಮೆಟ್ರೊ~ ರೈಲಿನಲ್ಲಿ ಕೇವಲ 14 ನಿಮಿಷಗಳಲ್ಲಿ ತಲುಪಬಹುದು ಎಂಬ ದೃಷ್ಟಿಯಿಂದ ಖುಷಿಯಿಂದ ಬಂದ ಈ ಪ್ರಯಾಣಿಕರು 45 ನಿಮಿಷಗಳ ಕಾಲ ಲಿಫ್ಟ್‌ನಲ್ಲಿ ಸಿಕ್ಕಿಕೊಂಡು ಅಕ್ಷರಶಃ ಉಸಿರು ಬಿಗಿ ಹಿಡಿದು ಪರಿತಪಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT