ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮಾಚಾರಕ್ಕೆ 3 ವರ್ಷದ ಕಂದಮ್ಮ ಬಲಿ?

Last Updated 28 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಹುಣಸಮಾರನಹಳ್ಳಿಯಲ್ಲಿ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಮೂರು ವರ್ಷದ ಹೆಣ್ಣು ಮಗು ಚಿಕ್ಕಜಾಲ ಸಮೀಪದ ಕೋಡಗಲ್ಲಹಟ್ಟಿ ಕೆರೆಯಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದೆ.

ವಾಮಾಚಾರದ ಕಾರಣಕ್ಕೆ ಮಗುವನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೂಲತಃ ಗೌರಿಬಿದನೂರಿನ ಚೀಕಟಗೆರೆಯ ತಮ್ಮಣ್ಣ ಮತ್ತು ಅನಿತಾ ದಂಪತಿಯ ಪುತ್ರಿ ಹರ್ಷಿತಾ ಮೃತಪಟ್ಟಿದ್ದಾಳೆ. ಅನಿತಾ ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಆರು ತಿಂಗಳ ಹಿಂದೆ ಹುಣಸಮಾರನಹಳ್ಳಿಯಲ್ಲಿರುವ ತಾಯಿ ಮನೆಗೆ ಬಂದಿದ್ದರು. ಅವರಿಗೆ ನಾಲ್ಕು ತಿಂಗಳ ಬಾಬು ಎಂಬ ಗಂಡು ಮಗುವಿದೆ.

ಸೋಮವಾರ (ಜೂ 25) ಬೆಳಿಗ್ಗೆ ಮನೆ ಮುಂದೆ ಆಟವಾಡುತ್ತಿದ್ದ ಹರ್ಷಿತಾ ನಾಪತ್ತೆಯಾಗಿದ್ದಳು. ಮಧ್ಯಾಹ್ನದವರೆಗೂ ಮಗುವಿಗಾಗಿ ತೀವ್ರ ಶೋಧ ನಡೆಸಿ ವಿಫಲರಾದ ಸಂಬಂಧಿಕರು, ಹರ್ಷಿತಾ ಕಾಣೆಯಾಗಿರುವ ಬಗ್ಗೆ ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದರು. ಗುರುವಾರ ಬೆಳಿಗ್ಗೆ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಮೃತ ಮಗುವಿನ ತಂದೆ ತಮ್ಮಣ್ಣ ಮತ್ತು ತಾಯಿ ಅನಿತಾ ದುಃಖತಪ್ತರಾಗಿದ್ದ ದೃಶ್ಯ

ವಾಮಾಚಾರಕ್ಕೆ ಮಗು ಬಲಿ? `ಗುರುತು ಸಿಗದ ಸ್ಥಿತಿಯಲ್ಲಿದ್ದ ಶವವನ್ನು, ಮಗು ತೊಟ್ಟಿದ್ದ ಬಟ್ಟೆಯಿಂದ ಪೋಷಕರು ಗುರುತಿಸಿದರು. ಮಗುವಿನ ಬಲಗೈ ಹೆಬ್ಬೆರಳು ಮತ್ತು ಎಡಗೈನ ಎರಡು ಬೆರಳುಗಳನ್ನು ಕತ್ತರಿಸಲಾಗಿದ್ದು, ವಾಮಾಚಾರಕ್ಕಾಗಿ ಈ ಕೊಲೆ ನಡೆದಿರಬಹುದು~ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

`ಮಗಳು ಕಾಣೆಯಾದ ದಿನ ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಳಿ ಬಂದ ಬುಡಬುಡಕಿಯವನೊಬ್ಬ ಹಳೆಯ ವಸ್ತ್ರಗಳನ್ನು ನೀಡುವಂತೆ ಕೇಳಿದ. ಅಪ್ಪ ಆತನನ್ನು ಬೈದು ಕಳುಹಿಸಿದ್ದರು. ಮತ್ತೆ ಹನ್ನೊಂದು ಗಂಟೆ ಸುಮಾರಿಗೆ ಬಂದ ಆತ, ನಡುಮನೆಯಲ್ಲಿ ಆಟವಾಡುತ್ತಿದ್ದ ಹರ್ಷಿತಾಳನ್ನು ಕಂಡು, ಇವಳು ಲಕ್ಷ್ಮೀಪುತ್ರಿ, ಇವಳಿಂದ ಮನೆಗೆ ಒಳ್ಳೆಯದಾಗುತ್ತದೆ.
 
ಆಕೆಯ ಹಳೆ ಬಟ್ಟೆಗಳನ್ನು ಕೊಡಿ ಎಂದು ಒತ್ತಾಯಿಸಿದ್ದ. ಅಪ್ಪ ಆತನೊಂದಿಗೆ ಜಗಳವಾಡಿ ಕಳುಹಿಸಿದ್ದರು. ನಂತರ ಆಟವಾಡಲು ಮನೆಯಿಂದ ಹೊರಗೆ ಹೋದ ಮಗಳು ಮತ್ತೆ ಬರಲಿಲ್ಲ. ಆತನೇ ಅಪಹರಿಸಿರಬಹುದು~ ಎಂದು ಹರ್ಷಿತಾ ತಾಯಿ ಅನಿತಾ ಹೇಳಿದರು.

`ಗಂಡು ಮಗು ಜನಿಸಿದ್ದ ಖುಷಿಯ ನಡುವೆಯೇ ಮುದ್ದು ಮಗಳನ್ನು ಕಳೆದುಕೊಂಡೆ. ಮನೆ ತುಂಬಾ ಓಡಾಡಿಕೊಂಡಿದ್ದ ಮಗಳಿಲ್ಲದೇ ಮೂರು ದಿನ ಮನೆ ಬರಿದಾದಂತೆ ಕಾಣುತ್ತಿತ್ತು. ಕಾಣೆಯಾಗಿರುವ ಮಗಳು ಸಿಗಬಹುದು ಎಂಬ ನಂಬಿಕೆ ಇತ್ತು. ಆದರೆ, ಈಗ ಶವವಾಗಿ ಸಿಕ್ಕಿದ್ದಾಳೆ~ ಎಂದು ತಮ್ಮಣ್ಣ ಕಣ್ಣೀರು ಹಾಕಿದರು.

`ಅಂದು ಚಿನ್ನು (ಹರ್ಷಿತಾ) ಆಟವಾಡುತ್ತಿದ್ದ ಜಾಗದಲ್ಲಿ ಒಂದು ಆಟೊ ನಿಂತಿತ್ತು. ಸ್ವಲ್ಪ ಸಮಯದ ನಂತರ ಆ ಆಟೊ ಅಲ್ಲಿರಲಿಲ್ಲ. ಚಿನ್ನು ಕೂಡ ಕಾಣಲಿಲ್ಲ. ಆಟೊದಲ್ಲೇ ಮಗುವನ್ನು ಅಪಹರಿಸಿರಬಹುದು. ಮೂರು ವರ್ಷದ ಮಗುವಿನ ಮೇಲೆ ಪಾಪಿಗಳಿಗೆ ಅದ್ಯಾವ ದ್ವೇಷವಿತ್ತೊ~ ಎಂದು ಮಗುವಿನ ಅಜ್ಜಿ ಗಂಗರತ್ನಮ್ಮ ರೋದಿಸಿದರು.

`ಬೆಳಿಗ್ಗೆ ಮಗುವಿನ ಶವ ಕಂಡ ದನ ಕಾಯುವ ಹುಡುಗನೊಬ್ಬ ಠಾಣೆಗೆ ಮಾಹಿತಿ ನೀಡಿದ. ಸ್ಥಳದಲ್ಲಿ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ. ಮಗುವನ್ನು ಬೇರೆಡೆ ಕೊಲೆ ಮಾಡಿ, ಶವವನ್ನು ಕೆರೆಗೆ ಎಸೆದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ~ ಎಂದು ಎಸಿಪಿ ಎಸ್.ಗಚ್ಚಿನಕಟ್ಟಿ ಪಿರಪ್ಪ ಮಾಹಿತಿ ನೀಡಿದರು.

ಪೊಲೀಸರು, ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಶವವನ್ನು ಅವರ ಕುಟುಂಬಕ್ಕೆ ಒಪ್ಪಿಸಿದ್ದಾರೆ. ಚೀಕಟಗೆರೆಯಲ್ಲಿ ಮಗುವಿನ ಅಂತ್ಯಕ್ರಿಯೆ ನಡೆಯಿತು.

ಆಘಾತಕಾರಿ ಬೆಳವಣಿಗೆ: ನೀನಾ ನಾಯಕ್
`ಚಿಕ್ಕಜಾಲದಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಸಾವಿನ ಪ್ರಕರಣ ಆಘಾತ ತಂದಿದೆ~ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ನೀನಾ ನಾಯಕ್ ಪ್ರತಿಕ್ರಿಯಿಸಿದ್ದಾರೆ.

`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ಮಗು ವಾಮಾಚಾರದ ಕಾರಣದಿಂದ ಸಾವಿಗೀಡಾಗಿರಬಹುದು ಎಂದು ಹೇಳಲಾಗುತ್ತಿದೆ. ಮುಗ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆ ಮಾಡುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಸಮಾಜದಲ್ಲಿ ಮೌಢ್ಯ ಹಾಗೂ ಅಪರಾಧಿ ಮನೋಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ಆತಂಕ ತಂದಿದೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.

` ಮಕ್ಕಳ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಮಕ್ಕಳ ನ್ಯಾಯಾಲಯಗಳ ಸ್ಥಾಪನೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ ರಾಜ್ಯ ಸರ್ಕಾರ ಮಕ್ಕಳ ನ್ಯಾಯಾಲಯಗಳ ಸ್ಥಾಪನೆಗೆ ಮುಂದಾಗದಿರುವುದು ಶೋಚನೀಯ. ಚಿಕ್ಕಜಾಲದಲ್ಲಿ ನಡೆದಿರುವ ಘಟನೆಯ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಆಯೋಗದಿಂದ ತನಿಖೆ ನಡೆಸಲಾಗುವುದು~ ಎಂದರು.

ಕಠಿಣ ಶಿಕ್ಷೆಯಾಗಬೇಕು : `ಮಕ್ಕಳ ಮೇಲೆ ದೌರ್ಜನ್ಯ ನಡೆಸಿಯೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹದು ಎಂಬ ಮನೋಭಾವದಿಂದ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮಕ್ಕಳ ಮೇಲೆ ನಡೆಯುವ ಬಹುಪಾಲು ದೌರ್ಜನ್ಯಗಳು ವಿವಿಧ ಕಾರಣಗಳಿಂದಾಗಿ ಬೆಳಕಿಗೆ ಬರುವುದೇ ಇಲ್ಲ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆಯಾಗಬೇಕು. ಶಿಕ್ಷೆಯ ಭಯದಿಂದಾದರೂ ಇಂತಹ ಪ್ರಕರಣಗಳು ಕಡಿಮೆಯಾಗಬಹುದು~ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಅಧ್ಯಕ್ಷ ವಾಸುದೇವ ಶರ್ಮ ಅಭಿಪ್ರಾಯಪಟ್ಟರು.

`ಮಕ್ಕಳ ಬಗ್ಗೆ ಆತ್ಮೀಯ ಭಾವವೇ ಜನರಲ್ಲಿ ಮರೆಯಾಗುತ್ತಿದೆ. ಹೀಗಾಗಿ ಮನೆಗಳೊಳಗೇ ಮಕ್ಕಳ ಮೇಲೆ ಶೋಷಣೆಗಳು ನಡೆಯುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಬಗ್ಗೆ ನ್ಯಾಯಾಂಗ ವ್ಯವಸ್ಥೆ ಕಠಿಣ ನಿಲುವು ತಳೆಯಬೇಕಾದ ಅಗತ್ಯವಿದೆ~ ಎಂದು ಅವರು ಹೇಳಿದರು.

ನಮ್ಮ ಮಕ್ಕಳೆಷ್ಟು ಸುರಕ್ಷಿತ...?
ನಗರದ ಸುತ್ತಮುತ್ತ ಚಿಕ್ಕವಯಸ್ಸಿನ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಮಕ್ಕಳೆಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದುರಾಗಿದೆ. ಎರಡು ತಿಂಗಳಲ್ಲಿ ನಗರವೂ ಸೇರಿದಂತೆ ಹೊಸಕೋಟೆ, ಆನೇಕಲ್, ತುಮಕೂರಿನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆದಿವೆ.

ನಗರದಲ್ಲಿರುವ ಫ್ರಾನ್ಸ್ ಕಾನ್ಸುಲ್ ಜನರಲ್ ಕಚೇರಿಯ ಅಧಿಕಾರಿ ಪಾಸ್ಕಲ್ ಮುಜುರಿಯರ್ ಮೂರೂವರೆ ವರ್ಷದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂಬ ಆಘಾತಕಾರಿ ವಿಷಯ ಇತ್ತೀಚೆಗೆ ಬೆಳಕಿಗೆ ಬಂತು.

ನಾಗರಾಜ್ ಎಂಬಾತ ಜೂ.16ರಂದು ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯನ್ನು ನಗರದ ವೈಟ್‌ಫೀಲ್ಡ್ ಸಮೀಪದ ನೆಲ್ಲೂರಹಳ್ಳಿ ಕೆರೆಗೆ ಎಸೆದಿದ್ದ.  ಹೆಣ್ಣು ಮಗು ಎಂಬ ಕಾರಣಕ್ಕೆ ಇತ್ತೀಚೆಗೆ ತಂದೆಯೆ ಮೂರು ತಿಂಗಳ ನೇಹಾ ಆಫ್ರಿನ್‌ಳನ್ನು ಕೊಲೆ ಮಾಡಿದ್ದ. ಮಲಗಿದ್ದ ಹಸೂಗೂಸನ್ನು ಬಟ್ಟೆಯಲ್ಲಿ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದ ಉಮರ್ ಫಾರೂಕ್, ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ರಕ್ತ ಬರುವಂತೆ ಕಚ್ಚಿದ್ದನು. ಸಾವು ಬದುಕಿನ ನಡುವೆ ಒಂದು ವಾರ ಹೋರಾಟ ನಡೆಸಿ ನೇಹಾ ಕೊನೆಯುಸಿರೆಳೆದಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT