ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಬ್ಗಯೊರ್‌ ಶಾಲೆ ಪುನರಾರಂಭ

Last Updated 28 ಜುಲೈ 2014, 20:15 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿನಿ ಮೇಲಿನ ಅತ್ಯಾ­ಚಾರ ಪ್ರಕರ­ಣದ ನಂತರ 13 ದಿನಗಳಿಂದ ಮುಚ್ಚಿದ್ದ ಮಾರತ್‌­ಹಳ್ಳಿಯ ವಿಬ್ಗಯೊರ್‌ ಶಾಲೆಯು ಸೋಮ­­­ವಾರ ಪುನರಾರಂಭ­ವಾ­ಯಿತು.

ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಮೇಲಿನ ಅತ್ಯಾಚಾರ ಪ್ರಕ­ರಣ ಸಂಬಂಧ ಇತರೆ ಮಕ್ಕಳ ಪೋಷಕ­ರಿಂದ ಹಾಗೂ ಸಾರ್ವಜನಿಕರಿಂದ ತೀವ್ರ ಪ್ರತಿ­ಭಟನೆ ವ್ಯಕ್ತವಾಗಿದ್ದರಿಂದ ಶಾಲೆ­ಯನ್ನು ಮುಚ್ಚಲಾಗಿತ್ತು.

ಐದರಿಂದ 10ನೇ ತರಗತಿಗಳು ಸೋಮ­­ವಾರದಿಂದ ಆರಂಭವಾದವು.  ಒಂದರಿಂದ ನಾಲ್ಕನೇ  ತರಗತಿಗಳು ಜುಲೈ 30ರಿಂದ ಆರಂಭವಾಗಲಿದ್ದು, ಪ್ರಿ ­ನರ್ಸರಿ ತರಗತಿಗಳು ಆಗಸ್ಟ್‌ 1ರಿಂದ ಆರಂಭವಾಗಲಿವೆ.

ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಮತ್ತು ಶಿಕ್ಷಣ ಇಲಾ­ಖೆಯು ವಿಬ್ಗಯೊರ್‌ ಶಾಲೆಗೆ  ವಿಶೇಷ ಮಾರ್ಗ­ಸೂಚಿ  ರೂಪಿಸಲಾಗಿತ್ತು.  ಪೋಷ­ಕರ 11 ಬೇಡಿಕೆಗಳ ಸಂಬಂಧ  ಶಾಲಾ ಆಡಳಿತ ಮಂಡಳಿಯು ಜುಲೈ 25ರಂದು ಸಭೆ ನಡೆಸಿ ಅವುಗಳನ್ನು ಈಡೇರಿಸುವ ಭರವಸೆ ಕೊಟ್ಟಿತ್ತು.

ಐದರಿಂದ 10ನೇ ತರಗತಿವರೆಗಿನ ಶೇ 70ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಶಾಲೆಗೆ ಬಂದಿದ್ದ ಪೋಷಕರಲ್ಲಿ ಮಕ್ಕಳ ಸುರಕ್ಷತೆ ಬಗೆಗಿನ ಆತಂಕ ಇನ್ನೂ ದೂರವಾದಂತೆ ಕಾಣ­ಲಿಲ್ಲ. ಶಾಲೆಯ ಸುತ್ತ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ವರ್ತೂರು ಪೊಲೀಸರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ಶಾಲಾ ಆವರಣದಲ್ಲಿ 100ಕ್ಕೂ ಹೆಚ್ಚಿನ ಸಿ.ಸಿ ಟಿ.ವಿ ಕ್ಯಾಮೆರಾ­ಗ­ಳನ್ನು ಅಳವಡಿಸಲಾಗಿದೆ ಮತ್ತು ಭದ್ರತಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದುವರಿದ ಪೋಷಕರ ಆತಂಕ: ಮಕ್ಕಳ ಸುರಕ್ಷತೆಗಾಗಿ  ಆಡಳಿತ ಮಂಡಳಿ ಭದ್ರತಾ ಕ್ರಮಗಳನ್ನು ಕೈಗೊಂಡಿ­­ದ್ದರೂ  ಶಿಕ್ಷಕರನ್ನು ಬದ­ಲಿ­ಸದೇ ಇರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅಭಿ­ಪ್ರಾಯ ಹಂಚಿಕೊಂಡ  ಪೋಷಕರೊ­ಬ್ಬರು, ‘ಬಾಲಕಿ ಮೇಲೆ ಅತ್ಯಾಚಾರ ನಡೆ­ದಿದ್ದರೂ ಅದನ್ನು ಮುಚ್ಚಿಟ್ಟ ಶಾಲಾ ಸಿಬ್ಬಂದಿ ಜವಾಬ್ದಾರಿಯಿಂದ ನಡೆದು­ಕೊಂಡಿಲ್ಲ. ಶಾಲೆ ಬಗ್ಗೆ ನನಗೆ ಗೌರವ­ವಿದೆ. ಆದ್ದರಿಂದ ಮಗುವನ್ನು ಮತ್ತೆ ಶಾಲೆಗೆ ಕಳಿಸುತ್ತಿದ್ದೇನೆ. ಈ ಪ್ರಕರಣಕ್ಕೆ ಸಂಬಂ­ಧಿಸಿದ ಎಲ್ಲ ಆರೋಪಿಗಳಿಗೂ ಶಿಕ್ಷೆಯಾಗಬೇಕು’ ಎಂದರು.

‘ವಿದ್ಯಾರ್ಥಿಗಳಿಗೆ ಸುರಕ್ಷತೆ ಒದ­ಗಿ­ಸಲು ಶಾಲಾ ಆಡಳಿತ ಮಂಡಳಿ ವಿಫಲ­ವಾ­ಗಿದೆ. ಆದ್ದರಿಂದ ಮಗುವನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ.  ರೂ.1 ಲಕ್ಷ ಡೊನೆಷನ್‌ ಕೊಟ್ಟು ವಿಬ್ಗಯೊರ್‌ ಶಾಲೆಗೆ ಮಗುವನ್ನು ಸೇರಿಸಿದ್ದೆ. ಆಡಳಿತ ಮಂಡಳಿ ಆ ಹಣವನ್ನು ಹಿಂದಿರುಗಿಸುವ ಬಗ್ಗೆ ಅನುಮಾನವಿದೆ. ಈಗ ರೂ. 80 ಸಾವಿರ ಡೊನೆಷನ್ ಕೊಟ್ಟು ವರ್ತೂ­ರಿನ ಕ್ರಿಸಾಲಿಸ್‌ ಶಾಲೆಗೆ ಮಗುವನ್ನು ಸೇರಿಸಿ­ದ್ದೇನೆ’ ಎಂದು ಮತ್ತೊಬ್ಬ ಪೋಷ­ಕರು ಹೇಳಿದರು.

‘ಶಾಲಾ ಆವರಣದಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವುದರಿಂದ ಮಕ್ಕಳ ಸುರಕ್ಷತೆ ಸಾಧ್ಯವಿಲ್ಲ. ಮಕ್ಕಳನ್ನು ಪೋಷ­ಕ­ರಂತೆ ನೋಡಿಕೊಳ್ಳಬೇಕಾಗಿದ್ದ ಶಾಲೆಯ ಸಿಬ್ಬಂದಿ ಆ ರೀತಿ ನಡೆದು­ಕೊಂಡಿಲ್ಲ’ ಎಂದರು. ‘ಮಗಳು ನಾಲ್ಕನೇ ತರಗತಿಯಲ್ಲಿ ಓದು­ತ್ತಿದ್ದಾಳೆ. ಅದೇ ಪ್ರಾಂಶುಪಾಲರು, ಶಿಕ್ಷಕ­ರು ಶಾಲೆಯಲ್ಲಿದ್ದಾರೆ. ಆದ್ದರಿಂದ  ಮಗ­ಳನ್ನು ವೈಟ್‌ಫೀಲ್ಡ್‌ನ ಗೋಪಾ­ಲನ್‌ ಇಂಟರ್‌ನ್ಯಾಷನಲ್‌ ಶಾಲೆ ಅಥವಾ ವರ್ತೂರಿನ ಕ್ರಿಸಾಲಿಸ್‌ ಶಾಲೆಗೆ ಸೇರಿಸುತ್ತೇನೆ’ ಎಂದು ಹೇಳಿದರು.

ಶಾಲೆಗೆ ಶಿಕ್ಷಣಾಧಿಕಾರಿಗಳ ಭೇಟಿ
ವಲಯ ಶಿಕ್ಷಣಾಧಿಕಾರಿ (ಬಿಇಒ) ಎಸ್‌.ಎಂ.ರಮೇಶ್‌ ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸುರಕ್ಷತೆಗೆ ಶಾಲಾ ಆಡಳಿತ ಮಂಡಳಿ ತೆಗೆದು­ಕೊಂಡಿ­ರುವ ಕ್ರಮಗಳನ್ನು ಪರಿಶೀಲಿ­ಸಿ­ದರು. ‘ಶಾಲೆಯ 574 ವಿದ್ಯಾರ್ಥಿ­ಗಳಲ್ಲಿ 404 ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿ­ದ್ದಾರೆ. ಒಂಬತ್ತನೇ ತರಗತಿ­ಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಐದನೇ ತರ­ಗತಿ­ಯಲ್ಲಿ ಕಡಿಮೆ ವಿದ್ಯಾ­ರ್ಥಿ­ಗಳು ಬಂದಿದ್ದಾರೆ’ ಎಂದು ಹೇಳಿದರು.

‘ಐದನೇ ತರಗತಿಯಲ್ಲಿ 209 ವಿದ್ಯಾ­ರ್ಥಿ­ಗಳಿದ್ದು ಅವರಲ್ಲಿ 128, ಆರನೇ ತರಗತಿಯ 133 ವಿದ್ಯಾರ್ಥಿಗಳಲ್ಲಿ 98, ಏಳನೇ ತರಗತಿಯ  92 ವಿದ್ಯಾ­ರ್ಥಿ­­ಗ­ಳಲ್ಲಿ 62, ಎಂಟನೇ ತರಗತಿಯ 65 ವಿದ್ಯಾ­ರ್ಥಿ­ಗಳಲ್ಲಿ 53, ಒಂಬತ್ತನೇ ತರ­ಗತಿಯ 32 ವಿದ್ಯಾರ್ಥಿಗಳಲ್ಲಿ 30, ಹತ್ತನೇ ತರಗತಿಯ 43 ವಿದ್ಯಾರ್ಥಿ­ಗ­ಳಲ್ಲಿ 36 ವಿದ್ಯಾರ್ಥಿಗಳು ತರಗತಿಗೆ ಹಾಜ­ರಾಗಿದ್ದರು. ಶಾಲೆಯ  422 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಲ್ಲಿ 366 ಮಂದಿ ಬಂದಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT