ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶಾಲ್‌ನ ಕಾರು ಶೋಕಿಗೆ ಐಟಿ ಅಧಿಕಾರಿ ಪುತ್ರ ಬಲಿ!

* ಐಟಿ ಅಧಿಕಾರಿ ಪುತ್ರನ ಹತ್ಯೆ ಪ್ರಕರಣ * ಕೆರೆ, ಕ್ವಾರಿ ಬಳಿ ಮಹಜರು * ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಬಹಿರಂಗ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐಟಿ ಅಧಿಕಾರಿ ನಿರಂಜನ್ ಕುಮಾರ್ ಅವರ ಪುತ್ರ ಶರತ್ ಹತ್ಯೆಯ ಆರೋಪಿಗಳನ್ನು ಜ್ಞಾನಭಾರತಿ ಪೊಲೀಸರು ಭಾನುವಾರ ತಾವರೆಕೆರೆ ಹೋಬಳಿಯ ನರಸಿಂಹಯ್ಯ ಕೆರೆ ಹಾಗೂ ಕುರುಬನಪಾಳ್ಯದ ಕಲ್ಲು ಕ್ವಾರಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಹಜರು ಕಾರ್ಯ ಪೂರ್ಣಗೊಳಿಸಿದರು.

‘ಸೆ.12ರ ಸಂಜೆ ಕುತ್ತಿಗೆ ಬಿಗಿದು ಶರತ್ ಅವರನ್ನು ಕೊಂದಿದ್ದ ಆರೋಪಿಗಳು, ಶವವನ್ನು ನರಸಿಂಹಯ್ಯನ ಕೆರೆಗೆ ಎಸೆದಿದ್ದರು. ಸೆ.20ರಂದು ನೀರಿನಲ್ಲಿ ತೇಲಲಾರಂಭಿಸಿದ ದೇಹವನ್ನು ಚೀಲದೊಳಗೆ ಹಾಕಿಕೊಂಡು ಕುರುಬನಪಾಳ್ಯದ ಕ್ವಾರಿಯಲ್ಲಿ ಹೂತಿದ್ದರು. ಹೀಗಾಗಿ, ಆ ಎರಡೂ ಸ್ಥಳಗಳಿಗೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದೇವೆ. ಇದೇ ವೇಳೆ ಆರೋಪಿಗಳು ಹತ್ಯೆ ಕಾರ್ಯಾಚರಣೆಯ ಪೂರ್ಣ ವಿವರಗಳನ್ನು ವಿವರಿಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಾರು ಕೊಡಿಸುವ ಆಮಿಷ: ‘ಸುಲಭವಾಗಿ ಹಣ ಸಂಪಾದನೆ ಮಾಡಬೇಕು. ನಿನ್ನ ಗೆಳೆಯರ ಬಳಗದಲ್ಲಿ ಶ್ರೀಮಂತ ಮನೆತನದವರಿದ್ದರೆ ಹೇಳು. ಆತನನ್ನೇ ಅಪಹರಿಸಿ ಕುಟುಂಬ ಸದಸ್ಯರಿಗೆ ಹಣಕ್ಕೆ ಬೇಡಿಕೆ ಇಡೋಣ. ಈ ಕೆಲಸ ಯಶಸ್ವಿಯಾದರೆ ನಿನಗೆ ಇಷ್ಟವಿರುವ ‘ಹೋಂಡಾ ಸಿಟಿ’ ಕಾರನ್ನು ಕೊಡಿಸುತ್ತೇನೆ’ ಎಂದು ವಿನಯ್‌ಪ್ರಸಾದ್ ತನಗೆ ಆಮಿಷವೊಡ್ಡಿದ್ದಾಗಿ ಆರೋಪಿ ವಿಶಾಲ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

‘ಕಾರು ಸಿಗುತ್ತದೆ ಎಂಬ ಆಸೆಯಲ್ಲಿ ಶರತ್‌ನ ಹೆಸರನ್ನು ವಿನಯ್‌ಗೆ ತಿಳಿಸಿದೆ. ಅಲ್ಲದೆ, ಆತನ ಅಕ್ಕ ತನ್ನ ಗೆಳತಿ ಎಂಬ ವಿಚಾರವನ್ನೂ ಹೇಳಿದೆ. ‘ಹಾಗಾದರೆ, ಅವನನ್ನೇ ಅಪಹರಣ ಮಾಡಿ ₹ 50 ಲಕ್ಷ ಕೇಳೋಣ’ ಎಂದ ವಿನಯ್, ಆ.25ರಂದು ದೊಡ್ಡ ಆಲದಮರದ ಬಾರ್‌ವೊಂದರಲ್ಲಿ ನನ್ನನ್ನು ಕೂರಿಸಿಕೊಂಡು ಸಂಚಿನ ಬಗ್ಗೆ ಚರ್ಚಿಸಿದ್ದ. ಆಗಲೇ ಕರಣ್ ಹಾಗೂ ಶಾಂತಕುಮಾರ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದ’ ಎಂದು ವಿಶಾಲ್ ಹೇಳಿಕೆ ಕೊಟ್ಟಿದ್ದಾನೆ.

***

ಕೊಮ್ಮಘಟ್ಟದಲ್ಲಿ ಚಾಕು, ಹಗ್ಗ ಖರೀದಿ

‘ಶರತ್‌ ಕೈಕಾಲುಗಳನ್ನು ಕಟ್ಟಲು ಹಾಗೂ ಅವರನ್ನು ಬೆದರಿಸಲು ಬೇಕಿದ್ದ ಹಗ್ಗ ಮತ್ತು ಚಾಕುವನ್ನು ಆರೋಪಿಗಳು ಕೊಮ್ಮಘಟ್ಟದ ಅಂಗಡಿಯೊಂದರಲ್ಲಿ ಖರೀದಿ ಮಾಡಿದ್ದರು. ಆ ಅಂಗಡಿ ಮಾಲೀಕನ ಹೇಳಿಕೆಯನ್ನೂ ಪಡೆದಿದ್ದೇವೆ. ಆರೋಪಿಯನ್ನು ಬಂಧಿಸಿದ ದಿನವೇ ಜಪ್ತಿಯಾದ ಕಾರಿನಲ್ಲೇ ಅವು ಪತ್ತೆಯಾದವು’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT