ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನು ಒತ್ತುವರಿ;ಎರಡು ವರದಿಗಳ ಜಾರಿಗೆ ಸಿದ್ಧತೆ

Last Updated 11 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದ ಎರಡು ವರದಿಗಳ ದೂಳು ಕೊಡವಲು ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ಧತೆ ನಡೆಸಿದ್ದಾರೆ.ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯಲ್ಲಿನ ಸರ್ಕಾರಿ ಜಮೀನುಗಳ ಒತ್ತುವರಿ ಕುರಿತು ಎ.ಟಿ.ರಾಮಸ್ವಾಮಿ ನೇತೃತ್ವದ ವಿಧಾನಮಂಡಲದ ಜಂಟಿ ಸದನ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.

ಹಾಗೆಯೇ ಇಡೀ ರಾಜ್ಯದಲ್ಲಿನ ಸರ್ಕಾರಿ ಜಮೀನು ಒತ್ತುವರಿ ಪತ್ತೆ ಸಲುವಾಗಿ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್ ನೇತೃತ್ವದಲ್ಲಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ ರಚಿಸಲಾಗಿತ್ತು. ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುವುದಕ್ಕೂ ಮೊದಲೇ ಅದು ಬಹಿರಂಗವಾದ ಕಾರಣಕ್ಕೆ ಅದನ್ನು ಸರ್ಕಾರ ಅಧಿಕೃತವಾಗಿ ಸ್ವೀಕರಿಸಿಲ್ಲ.

ಈ ಎರಡೂ ವರದಿಗಳು ಭೂಒತ್ತುವರಿಗೆ ಸಂಬಂಧಿಸಿದ ಅಧಿಕೃತ ವರದಿಗಳಾಗಿದ್ದು, ಅವುಗಳ ಜಾರಿ ಸಾಧ್ಯತೆ ಕುರಿತು ಗಮನಹರಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ. ಕಂದಾಯ ವಿಷಯಗಳಲ್ಲಿ ಅನುಭವ ಇರುವ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ವರದಿಗಳಲ್ಲಿನ ಅಂಶಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ.

ಈ ಕುರಿತು ಅವರು ತಮ್ಮ ಆಪ್ತ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎ.ಕೆ.ಎಂ.ನಾಯಕ್ ನೇತೃತ್ವದಲ್ಲಿ ಸಮಿತಿ ರಚಿಸುವ ಉದ್ದೇಶವನ್ನು ಸಚಿವರು ಹೊಂದಿದ್ದರು. ಆದರೆ, ನಾಯಕ್ ಅವರು ಮಾಹಿತಿ ಆಯುಕ್ತರಾಗಿ ನೇಮಕಗೊಂಡಿರುವ ಕಾರಣ ಅವರ ನೇತೃತ್ವದಲ್ಲಿ ಸಮಿತಿ ರಚಿಸುವುದು ಕಷ್ಟ ಎನ್ನಲಾಗಿದೆ.

ಹೀಗಾಗಿ ಇತ್ತೀಚೆಗಷ್ಟೇ ನಿವೃತ್ತಿಯಾದ ಐಎಎಸ್ ಅಧಿಕಾರಿ ಕೆ.ಜೈರಾಜ್ ನೇತೃತ್ವದಲ್ಲಿ ಸಮಿತಿ ರಚಿಸುವುದಕ್ಕೆ ಈಶ್ವರಪ್ಪ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೈರಾಜ್ ಜತೆಗೆ ವಿ. ಬಾಲಸುಬ್ರಮಣಿಯನ್ ಅವರನ್ನೂ ಸಮಿತಿಯ ಸದಸ್ಯರನ್ನಾಗಿ ನೇಮಿಸುವ ಯೋಚನೆ ಇದೆ.

ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿಯು ಬೆಂಗಳೂರು ನಗರ ಮತ್ತು ನಗರ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಒಟ್ಟು 33,877 ಎಕರೆ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿತ್ತು.
 
ಬಾಲಸುಬ್ರಮಣಿಯನ್ ನೇತೃತ್ವದ ಸಮಿತಿ ರಾಜ್ಯದಲ್ಲಿ ಸುಮಾರು 1.95 ಲಕ್ಷ ಕೋಟಿ ರೂಪಾಯಿ ಮೊತ್ತದ 11 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಈ ಎರಡೂ ವರದಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರಲಿದೆ ಎಂಬುದು ಸಚಿವರ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT