ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿತಾ ಕೊಲೆ; ಆರೋಪಿ ಖುಲಾಸೆ

Last Updated 24 ಏಪ್ರಿಲ್ 2018, 19:22 IST
ಅಕ್ಷರ ಗಾತ್ರ

ಬೆಂಗಳೂರು: ರೇಸ್‌ಕೋರ್ಸ್‌ ಪ್ರವೇಶದ್ವಾರದಲ್ಲಿ 2014ರ ಮಾರ್ಚ್ 20ರಂದು ನಡೆದಿದ್ದ ಸುನಿತಾ (27) ಕೊಲೆ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ 65ನೇ ಸೆಷನ್ಸ್ ನ್ಯಾಯಾಲಯ, ಆರೋಪಿ ಧನರಾಜ್‌ ಅವರನ್ನು ದೋಷಮುಕ್ತಗೊಳಿಸಿ ಮಂಗಳವಾರ ಆದೇಶ ಹೊರಡಿಸಿತು.

ತಾವರೆಕೆರೆ ನಿವಾಸಿಯಾಗಿದ್ದ ಸುನಿತಾ ಬೆಂಗಳೂರು ಟರ್ಫ್‌ ಕ್ಲಬ್‌ನ ಟಿಕೆಟ್‌ ಕೌಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆವಲಹಳ್ಳಿಯ ಧನರಾಜ್, ಕಾರು ಚಾಲಕರಾಗಿದ್ದರು.

ಆ ದಿನ ಮಧ್ಯಾಹ್ನ 1.45ರ ಸುಮಾರಿಗೆ ಸುನಿತಾ ಬಸ್ ಇಳಿದು ರೇಸ್‌ಕೋರ್ಸ್‌ ಪ್ರವೇಶ ದ್ವಾರದ ಕಡೆಗೆ ನಡೆದು ಬರುತ್ತಿದ್ದಾಗ ಅವರ ಹತ್ಯೆ ನಡೆದಿತ್ತು. ಸಂಚಾರ ವಿಭಾಗದ ಹೆಡ್‌ ಕಾನ್‌ಸ್ಟೆಬಲ್‌ವೊಬ್ಬರು ನೀಡಿದ ದೂರಿನ ಅನ್ವಯ ಧನರಾಜ್ ಅವರನ್ನು ಬಂಧಿಸಿದ್ದ ಹೈಗ್ರೌಂಡ್ಸ್‌ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು.

‘ವಿವಾಹಿತರಾಗಿದ್ದ ಧನರಾಜ್, ಪ್ರೀತಿಸುವಂತೆ ಸುನಿತಾರ ಹಿಂದೆ ಬಿದ್ದಿದ್ದರು. ಅದಕ್ಕೆ ಅವರು ಒಪ್ಪಿರಲಿಲ್ಲ. ಇದೇ ಸಿಟ್ಟಿನಲ್ಲಿ ಧನರಾಜ್ ಹೊಟ್ಟೆ, ಎದೆ ಹಾಗೂ ಕುತ್ತಿಗೆಗೆ 12 ಬಾರಿ ಇರಿದು ಹತ್ಯೆಗೈದಿದ್ದಾರೆ’ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಹೇಳಿದ್ದರು.

ಆರೋಪಿ ಪರ ವಾದ ಮಂಡಿಸಿದ ಸಿ.ಎಚ್.ಹನುಮಂತರಾಯ ಹಾಗೂ ಆರ್‌.ಪಿ.ಚಂದ್ರಶೇಖರ್, ‘ತಾವು ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡಿರುವ ಹೆಡ್‌ ಕಾನ್‌ಸ್ಟೆಬಲ್, ಹತ್ಯೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಇರಲಿಲ್ಲ. ಅವರು ಸಂಚಾರ ನಿರ್ವಹಿಸುತ್ತಿದ್ದ ಸ್ಥಳ, ಕೊಲೆ ನಡೆದ ಸ್ಥಳದಿಂದ ತುಂಬ ದೂರವಿತ್ತು. ಹೀಗಾಗಿ, ಅವರನ್ನು ಪ್ರತ್ಯಕ್ಷದರ್ಶಿ ಎನ್ನಲು ಆಗುವುದಿಲ್ಲ. ಕೊಲೆ ನಡೆದ ಸ್ವಲ್ಪ ಸಮಯದ ನಂತರ ಅಲ್ಲಿಗೆ ಹೋಗಿ, ಧನರಾಜ್‌ ಅವರನ್ನು ಹಿಡಿದುಕೊಂಡಿದ್ದರು. ಕೃತ್ಯದ ಸ್ಥಳದಲ್ಲೇ ಆರೋಪಿಯನ್ನು ಹಿಡಿದ ಬಗ್ಗೆ ಹೆಡ್‌ಕಾನ್‌ಸ್ಟೆಬಲ್ ಮೆಮೊ ಕೂಡ ಮಾಡಿಲ್ಲ. ತಮ್ಮ ಕರ್ತವ್ಯದ ಡೈರಿಯಲ್ಲೂ ಈ ಅಂಶಗಳನ್ನು ಉಲ್ಲೇಖಿಸಿಲ್ಲ’ ಎಂದರು.

ವಾದ ಆಲಿಸಿದ ನ್ಯಾಯಾಧೀಶರು, ‘ದೂರುದಾರರು ಪ್ರತ್ಯಕ್ಷದರ್ಶಿ ಅಲ್ಲ. ಹೀಗಾಗಿ, ಸಾಕ್ಷಿಯನ್ನು ನಂಬಲು ಆಗುವುದಿಲ್ಲ. ಧನರಾಜ್ ಅವರನ್ನು ಅಪರಾಧಿ ಎನ್ನಲು ಯಾವುದೇ ಸಾಕ್ಷ್ಯಗಳು ಇಲ್ಲ. ಹೀಗಾಗಿ, ಅವರನ್ನು ದೋಷಮುಕ್ತಗೊಳಿಸಲಾಗಿದೆ’ ಎಂದು ಆದೇಶ ಹೊರಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT