ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಫಿ ವಿಡಿಯೊ ಮಾಡಿಟ್ಟು ಗೃಹಿಣಿ ಆತ್ಮಹತ್ಯೆ

ಫೇಸ್‌ಬುಕ್‌ನಲ್ಲಿ ಪರಿಚಯವಾದವಳ ಹಿಂದೆ ಬಿದ್ದಿದ್ದ ಪತಿ
Last Updated 15 ಅಕ್ಟೋಬರ್ 2018, 18:44 IST
ಅಕ್ಷರ ಗಾತ್ರ

ಬೆಂಗಳೂರು: ಪತಿ ಫೇಸ್‌ಬುಕ್‌ನಲ್ಲಿ ಪರಿಚಯವಾದವಳ ಹಿಂದೆ ಬಿದ್ದು ಮದುವೆಯಾಗಲು ಯತ್ನಿಸುತ್ತಿದ್ದರಿಂದ ನೊಂದ ಅಂಕಿತಾ ಪೂಜಾರ್ (36) ಎಂಬುವರು ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಪಾಳದ ಅಂಕಿತಾ ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ವಿವೇಕನಗರ ಬಳಿಯ ಈಜಿಪುರದಲ್ಲಿ ಎರಡನೇ ಪತಿ ಸೋನಮ್ ಎಂಬುವರ ಜೊತೆ ನೆಲೆಸಿದ್ದರು. ಮನೆಯಲ್ಲೇ ಭಾನುವಾರ ರಾತ್ರಿ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೊ ಚಿತ್ರೀಕರಿಸಿಟ್ಟು, ನಂತರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

‘ಮೃತರ ಮೊಬೈಲ್‌ನಲ್ಲಿ ಸೆರೆಯಾಗಿರುವ ವಿಡಿಯೊ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂಬಂಧಿಕರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ವಿವೇಕನಗರ ಪೊಲೀಸರು ಹೇಳಿದರು.

ಮೊದಲ ಪತಿಯಿಂದ ದೂರ: ‘ಅಂಕಿತಾ ಐದು ವರ್ಷಗಳ ಹಿಂದೆ ತಮ್ಮದೇ ಊರಿನ ಯುವಕನನ್ನು ಮದುವೆಯಾಗಿದ್ದರು. ದಂಪತಿಗೆ ಮಗು ಸಹ ಇದೆ. ಆತ ನಿತ್ಯವೂ ಕುಡಿದು ಬಂದು ಜಗಳ ತೆಗೆದು ಕಿರುಕುಳ ನೀಡುತ್ತಿದ್ದ. ಬೇಸತ್ತ ಅಂಕಿತಾ, ಆತನಿಂದ ದೂರವಾಗಿ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕೆಲಸದ ಸ್ಥಳದಲ್ಲಿ ಅಂಕಿತಾಗೆ ಸೋನಮ್‌ ಪರಿಚಯವಾಗಿತ್ತು. ಅವರೂ ಪತ್ನಿಯಿಂದ ದೂರವಾಗಿದ್ದರು. ಅವರಿಬ್ಬರು ಪ್ರೀತಿಸಿ ಮದುವೆಯಾದರು. ಇತ್ತೀಚೆಗೆ ಸೋನಮ್‌ಗೆ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಜೊತೆಯಲ್ಲೇ ನಿತ್ಯ ಚಾಟಿಂಗ್‌ ಮಾಡುತ್ತಿದ್ದ ಪತಿ, ಆಕೆಯನ್ನು ಮದುವೆಯಾಗಲು ಪ್ರಯತ್ನ ನಡೆಸುತ್ತಿದ್ದ’

‘ಇದು ಗೊತ್ತಾಗುತ್ತಿದ್ದಂತೆ ಅಂಕಿತಾ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದೇ ಕಾರಣಕ್ಕೆ ದಂಪತಿ ನಡುವೆ ಜಗಳ ಶುರುವಾಗಿತ್ತು. ಭಾನುವಾರ ಸಂಜೆ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕೋಪಗೊಂಡ ಅಂಕಿತಾ ಕೊಠಡಿಯೊಳಗೆ ಹೋಗಿ ನೇಣು ಬಿಗಿದುಕೊಂಡಿದ್ದಾರೆ. ಘಟನೆ ಬಗ್ಗೆ ಸೋನಮ್‌ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ವಿಡಿಯೊದಲ್ಲಿ ಮೊದಲ ಪತಿ ನೆನಪು: ಆತ್ಮಹತ್ಯೆಗೂ ಮುನ್ನ ಚಿತ್ರೀಕರಿಸಿರುವ ಸೆಲ್ಫಿ ವಿಡಿಯೊದಲ್ಲಿ ಅಂಕಿತ ನೇಪಾಳಿ ಭಾಷೆಯಲ್ಲಿ ಮಾತನಾಡಿದ್ದಾರೆ. ಮೊದಲ ಗಂಡನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

‘ಅಪ್ಪ– ಅಮ್ಮನ ಮಾತು ಕೇಳದೆ ಮದುವೆಯಾದೆ. ಮೊದಲ ಪತಿ ಕೈಕೊಟ್ಟನೆಂದು ಸೋನಮ್ ಜೊತೆಯಲ್ಲಿ ಎರಡನೇ ಮದುವೆಯಾದೆ. ಈತನೂ ಕೆಟ್ಟವನು ಎಂಬುದು ಈಗ ತಿಳಿಯುತ್ತಿದೆ. ಮೊದಲ ಗಂಡನೇ ಚೆನ್ನಾಗಿದ್ದ ಎಂದು ಅನ್ನಿಸುತ್ತಿದೆ’ ಎಂದು ಅಂಕಿತಾ ಹೇಳಿದ್ದಾರೆ.

‘ಸೋನಮ್‌, ನನಗೆ ಮೋಸ ಮಾಡಿ ಬೇರೆಯವಳ ಜೊತೆ ಹೊರಟಿದ್ದಾನೆ. ಅದನ್ನು ಪ್ರಶ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಒಬ್ಬ ಹೋದನೆಂದು ಇನ್ನೊಬ್ಬನ ಜೊತೆಗೆ ಬಂದೆ. ಈಗ ಈತನೂ ಬಿಟ್ಟು ಹೋಗುತ್ತಿದ್ದಾನೆ. ಮುಂದೆ ನನ್ನ ಗತಿಯೇನು?. ಹೀಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಪ್ಪ–ಅಮ್ಮ ನನ್ನನ್ನು ಕ್ಷಮಿಸಿ...’ ಎಂದು ಅವರು ಹೇಳಿಕೊಂಡಿದ್ದಾರೆ.

ಫೋಟೊ ಕಳುಹಿಸಿ ಕಾಡಿಸುತ್ತಿದ್ದ ಮೊದಲ ಪತಿ

‘ಅಂಕಿತಾರಿಂದ ದೂರವಾದ ಮೊದಲ ಪತಿ, ಮತ್ತೊಂದು ಮದುವೆಯಾಗಿದ್ದ. ಪ‍ತ್ನಿ ಜೊತೆ ತೆಗೆಸಿಕೊಳ್ಳುತ್ತಿದ್ದ ಫೋಟೊಗಳನ್ನು ಅಂಕಿತಾಗೆ ಕಳುಹಿಸಿ ಕಾಡಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ನೀನು ನನ್ನನ್ನು ಬಿಟ್ಟು ಹೋಗಿದ್ದೆ ಒಳ್ಳೆಯದಾಯಿತು. ನನಗೆ ಈಗ ಹೊಸ ಹೆಂಡತಿ ಸಿಕ್ಕಿದ್ದಾಳೆ. ಆಕೆಗೆ ಚಿನ್ನ ಕೊಡಿಸಿದ್ದೇನೆ. ಆಕೆಯನ್ನು ಜೊತೆಗಿನ ನನ್ನ ಫೋಟೊಗಳನ್ನು ನೋಡಿ ನಿನಗೆ ಹೊಟ್ಟೆ ಉರಿಯಬೇಕು’ ಎಂದು ಮೊದಲ ಪತಿ ಹೇಳುತ್ತಿದ್ದ. ಅದರಿಂದಲೂ ಅಂಕಿತಾ ನೊಂದಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT