ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ ಮೇಲ್ಸೇತುವೆ ವಿಸ್ತರಣಾ ಕಾಮಗಾರಿಗೆ ಚಾಲನೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 1053 ಮೀಟರ್‌ ಮೇಲ್ಸೇತುವೆ ನಿರ್ಮಾಣ
Last Updated 2 ಮೇ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಲಿರುವ ಹೆಬ್ಬಾಳ ಜಂಕ್ಷನ್‌ನಲ್ಲಿ ಏಕಮುಖ ಸಂಚಾರದ ಕೆಳಸೇತುವೆ ಹಾಗೂ ಮೇಲ್ಸೇತುವೆ ವಿಸ್ತರಣೆಯ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಯಲಹಂಕದ ಕಡೆಯಿಂದ ನಗರಕ್ಕೆ ಬರುವ ವಾಹನಗಳ ಸುಗಮ ಸಂಚಾರಕ್ಕಾಗಿ ಪ್ರಾಧಿಕಾರವು ಮೇಲ್ಸೇತುವೆಗೆ ಹೆಚ್ಚುವರಿಯಾಗಿ ಮೂರು ಪಥಗಳನ್ನು ಅಳವಡಿಸಿ ವಿಸ್ತರಿಸಲು ಯೋಜಿಸಿದೆ. ಮೇಲ್ಸೇತುವೆಯ ಉದ್ದ 1053 ಮೀಟರ್‌. ಮುಖ್ಯ ಪಥದ ಅಗಲ 10.50 ಮೀಟರ್‌.

ಜತೆಗೆ ತುಮಕೂರು ರಸ್ತೆ ಕಡೆಯಿಂದ ಕೆ.ಆರ್.ಪುರ ಕಡೆ ಚಲಿಸುವ ವಾಹನ ಸವಾರರ ಅನುಕೂಲಕ್ಕಾಗಿ ಹೊರವರ್ತುಲ ರಸ್ತೆಯಲ್ಲಿ ಏಕಮುಖ ಸಂಚಾರದ ಕೆಳಸೇತುವೆಯನ್ನು ನಿರ್ಮಿಸಲಿದೆ. ಇದರ ಉದ್ದ 320 ಮೀಟರ್‌. ಆರ್‌ಸಿಸಿ ಬಾಕ್ಸ್‌ ಉದ್ದ 47 ಮೀಟರ್‌. ಪ್ರಾರಂಭಿಕ ರ್‍ಯಾಂಪ್‌ನ ಉದ್ದ 140 ಮೀಟರ್‌. ಹೊರಹೋಗುವ ರ್‍ಯಾಂಪ್‌ನ ಉದ್ದ 133 ಮೀಟರ್‌. ಕೆಳಸೇತುವೆಯ ಮುಖ್ಯ ಪಥದ ಅಗಲ 9 ಮೀಟರ್‌. ಇದರ ಜತೆಗೆ 1100 ಮೀಟರ್‌ ಉದ್ದದ ಒಳಚರಂಡಿಯೂ ನಿರ್ಮಾಣವಾಗಲಿದೆ.

‘ವಿಸ್ತರಣಾ ಕಾಮಗಾರಿ ಜೂನ್‌ನಲ್ಲಿ ಆರಂಭವಾಗಲಿದ್ದು, 2018ರ ಮೇ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂಬ ಗಡುವು ವಿಧಿಸಲಾಗಿದೆ’ ಎಂದು ಬಿಡಿಎ ಆಯುಕ್ತ ಟಿ.ಶ್ಯಾಮ್‌ ಭಟ್‌ ತಿಳಿಸಿದರು.

‘ಪ್ರಾಧಿಕಾರವು ಹೈಗ್ರೌಂಡ್ಸ್‌ನಿಂದ ಹೆಬ್ಬಾಳದವರೆಗೆ ಎತ್ತರಿಸಿದ ಮೇಲ್ಸೇತುವೆಯನ್ನು ನಿರ್ಮಿಸಲು ಯೋಜಿಸಿದೆ. ಒಂದೆರಡು ತಿಂಗಳಲ್ಲಿ ಇದರ ಕಾಮಗಾರಿಗೆ ಚಾಲನೆ ನೀಡುತ್ತೇವೆ’ ಎಂದು ಅವರು ತಿಳಿಸಿದರು.

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘42 ಕಿ.ಮೀ. ಉದ್ದದ ಮೆಟ್ರೊ ಮೊದಲನೇ ಹಂತದ ಕಾಮಗಾರಿ ನವೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. 72 ಕಿ.ಮೀ. ಉದ್ದದ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಿದ್ದು, 2020ರಲ್ಲಿ ಪೂರ್ಣಗೊಳಿಸುತ್ತೇವೆ’ ಎಂದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಈ ಮೇಲ್ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಬೇಕಿತ್ತು. ಅಲ್ಲಿ ಅನುಮತಿ ಪಡೆದು ಕಾಮಗಾರಿ ಶುರುವಾಗಲು ಕೆಲವು ವರ್ಷಗಳು ಬೇಕು. ಹೀಗಾಗಿ ಪ್ರಾಧಿಕಾರದ ಅನುಮತಿ ಪಡೆದು ಬಿಡಿಎ ಕಾಮಗಾರಿ ನಡೆಸುತ್ತಿದೆ’ ಎಂದರು.
‘ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಕೆಳಸೇತುವೆಯೊಂದನ್ನು ನಿರ್ಮಿಸಬೇಕು’ ಎಂದು ಮನವಿ ಮಾಡಿದರು.

ಹೆಬ್ಬಾಳ ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ‘ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 5 ಕೋಟಿ ಲೀಟರ್‌ ಕಾವೇರಿ ನೀರಿನ ಅಗತ್ಯ ಇದೆ. ಜಲಮಂಡಳಿ 3 ಕೋಟಿ ಲೀಟರ್‌ ಪೂರೈಕೆ ಮಾಡುವುದಾಗಿ ಭರವಸೆ ನೀಡಿತ್ತು.

ಜಲಸಂಗ್ರಹಾಗಾರಗಳ ಕೊರತೆಯಿಂದ ಪ್ರಸ್ತುತ 1.5 ಕೋಟಿ ಲೀಟರ್‌ ನೀರು ಸರಬರಾಜು ಆಗುತ್ತಿದೆ. ಕೆಲವು ಕಡೆಗಳಲ್ಲಿ ಮೂರು ದಿನಕ್ಕೊಮ್ಮೆ, ಮತ್ತೆ ಕೆಲವು ಕಡೆಗಳಲ್ಲಿ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT