ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೂಳು ತೆಗೆಯಲಿಲ್ಲ: ಒತ್ತುವರಿ ತಡೆಯಲಿಲ್ಲ ’

ಮಳೆ ಅನಾಹುತಕ್ಕೆ ಅಧಿಕಾರಿಗಳೇ ಕಾರಣ: ಬಿಬಿಎಂಪಿ ಸದಸ್ಯರ ಆಕ್ರೋಶ
Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಮಗಾರಿಗಳ ಹೆಸರಿನಲ್ಲಿ ಕೋಟಿ, ಕೋಟಿ ರೂಪಾಯಿ ಖರ್ಚು ಮಾಡಿದರೂ ಅಧಿಕಾರಿಗಳು ರಾಜಕಾಲುವೆಗಳ ಹೂಳು ತೆಗೆಯಲಿಲ್ಲ. ಖಾಸಗಿ ಸಂಸ್ಥೆಗಳು ಅವುಗಳನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸಿದರೂ ತಡೆಯಲಿಲ್ಲ. ಕಳೆದ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಉಂಟಾದ ಅನಾಹುತಗಳಿಗೆ ಅಧಿಕಾರಿಗಳ ಈ ಧೋರಣೆಯೇ ನೇರ ಕಾರಣ’

ಸೋಮವಾರ ನಡೆದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್‌ ಸಭೆಯಲ್ಲಿ ಸದಸ್ಯರು ಹೀಗೆ ಪಕ್ಷಭೇದ ಮರೆತು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಮಳೆಗಾಲ ಆರಂಭವಾಗುವ ಮುನ್ನ ಅವರು ಯಾವುದೇ ಪೂರ್ವ ತಯಾರಿಯನ್ನೂ ಮಾಡಿಕೊಳ್ಳುವುದಿಲ್ಲ. ಮಳೆ ಸುರಿದು ಪ್ರವಾಹದ ಪರಿಸ್ಥಿತಿ ಉಂಟಾದಾಗ ಜನರ ರಕ್ಷಣೆಗೂ ಧಾವಿಸುವುದಿಲ್ಲ’ ಎಂದು ಅವರು ಹರಿಹಾಯ್ದರು.

ನಿಲುವಳಿ ಮಂಡಿಸಿದ ಜಯಮಹಲ್‌ ವಾರ್ಡ್‌ ಸದಸ್ಯ ಎಂ.ಕೆ ಗುಣಶೇಖರ್‌, ‘ಪ್ರವಾಹದ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಯಾವ ಮುಂಜಾಗ್ರತಾ ಕ್ರಮ ಕೈಗೊಂಡ ಕುರುಹೂ ಕಾಣುವುದಿಲ್ಲ’ ಎಂದು ಹೇಳಿದರು. ‘ವಿಪತ್ತು ಸನ್ನಿವೇಶ ನಿರ್ವಹಿಸಲು ನಮ್ಮ ಅಧಿಕಾರಿಗಳಿಗೆ ತರಬೇತಿ­ಯನ್ನೂ ನೀಡಿಲ್ಲ. ಬಿಬಿಎಂಪಿ ಬಳಿ ಸೌಲಭ್ಯಗಳೂ ಇಲ್ಲ’ ಎಂದು ದೂರಿದರು.

ನಾಗಪುರ ವಾರ್ಡ್‌ ಸದಸ್ಯ ಎಸ್‌. ಹರೀಶ್‌, ‘ರಾಜ­ಕಾಲುವೆ­­ಗಳ ಹೂಳು ತೆಗೆಯಲು ರೂ 18 ಕೋಟಿ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿದ ಮಾಹಿತಿ ಇದೆ. ಅದರಲ್ಲಿ ಈಗಾ­ಗಲೇ ಎಷ್ಟು ಖರ್ಚಾಗಿದೆಯೋ ಗೊತ್ತಿಲ್ಲ. ಆದರೆ, ಯಾವ ಕಾಲುವೆಗಳ ಹೂಳನ್ನೂ ಇದುವರೆಗೆ ತೆಗೆಯಲಾಗಿಲ್ಲ’ ಎಂದು ಹೇಳಿದರು.

ಬೃಹತ್‌ ನೀರುಗಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಎಚ್‌.ಸಿ. ಅನಂತಸ್ವಾಮಿ, ‘ನಗರದ 63 ಕಡೆಗಳಲ್ಲಿ ರಾಜ­ಕಾಲುವೆ ಹೂಳನ್ನು ತೆಗೆಯಲು ರೂ 8 ಕೋಟಿ ಮೊತ್ತದ ಕಾಮಗಾರಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು. ‘ಸ್ಥಾಯಿ ಸಮಿತಿ ಇಲ್ಲವೆ ಕೌನ್ಸಿಲ್‌ ಸಭೆ ಗಮನಕ್ಕೆ ತರದೆ ಇಷ್ಟೊಂದು ದೊಡ್ಡ ಮೊತ್ತದ ಕಾಮಗಾರಿ ನಡೆಸಿದ್ದು ಹೇಗೆ’ ಎಂದು ಸದಸ್ಯರು ಆಕ್ರೋಶದಿಂದ ಪ್ರಶ್ನಿಸಿದರು.

‘ರೂ 50 ಲಕ್ಷದೊಳಗಿನ ಕಾಮಗಾರಿಗಳಿಗೆ ಆಯುಕ್ತರೇ ನೇರವಾಗಿ ಅನುಮತಿ ನೀಡಲು ಅವಕಾಶ ಇದೆ. ಎಲ್ಲ ಕಾಮಗಾರಿಗಳು ರೂ 20 ಲಕ್ಷಕ್ಕಿಂತ ಕಡಿಮೆ ಇದ್ದುದರಿಂದ ಅವರ ಅನುಮತಿ ಪಡೆದು ಕಾಮಗಾರಿ ನಡೆಸಲಾಗಿದೆ’ ಎಂದು ಅನಂತಸ್ವಾಮಿ ಸ್ಪಷ್ಟನೆ ನೀಡಿದರು.
‘ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮತ್ತೆ ಮತ್ತೆ ಪ್ರವಾಹ ಉಂಟಾಗುತ್ತಿದ್ದರೂ ಅಲ್ಲಿನ ಹೂಳನ್ನು ಏಕೆ ತೆಗೆಯ­ಲಿಲ್ಲ’ ಎಂದು ಹಂಪಿನಗರ ವಾರ್ಡ್‌ ಸದಸ್ಯ ಆರ್‌. ಚಂದ್ರಶೇಖ­ರಯ್ಯ ಕೇಳಿದರು.

‘ಆ ಪ್ರದೇಶದಲ್ಲೂ ಹೂಳನ್ನು ತೆಗೆಯಲಾ­ಗಿತ್ತು. ಮತ್ತೆ ಸೇರಿಕೊಂಡಿದೆ’ ಎಂದು ಅನಂತ­ಸ್ವಾಮಿ ಉತ್ತರಿಸಿ­ದರು. ಉತ್ತರಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಹೇಳುವ ಪ್ರಕಾರ 63 ರಾಜಕಾಲುವೆಗಳ ಹೂಳು ತೆಗೆದಿದ್ದರೆ ಅದು ಬೆಟ್ಟದಂತೆ ಬಿದ್ದಿರಬೇಕಿತ್ತು. ಮಂಡೂರಿನ ಕಸದ ರಾಶಿಗಿಂತ ಅದು ದೊಡ್ಡದಾಗಿ ಕಾಣುತ್ತಿತ್ತು. ರಾಜಕಾಲುವೆಯಿಂದ ತೆಗೆದ ಹೂಳನ್ನು ಎಲ್ಲಿ ಹಾಕಲಾಗಿದೆ ಎಂಬುದನ್ನು ತೋರಿಸಬೇಕು’ ಎಂದು ಹರೀಶ್‌ ಮತ್ತಿತರರು ಪಟ್ಟು ಹಿಡಿದರು.

ಕಾಚರಕನಹಳ್ಳಿ ವಾರ್ಡ್‌ ಸದಸ್ಯ ಪದ್ಮನಾಭ ರೆಡ್ಡಿ, ‘ಮಾನ್ಯತಾ ಟೆಕ್‌ ಪಾರ್ಕ್‌ ಹತ್ತಿರ ಖಾಸಗಿ ಸಂಸ್ಥೆಯೊಂದು ಬೃಹತ್‌ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ರಾಜಕಾಲುವೆ­ಯನ್ನೇ ಒತ್ತುವರಿ ಮಾಡಲಾಗಿದೆ. 31 ಗುಂಟೆಯಷ್ಟು ವಿಸ್ತೀ­ರ್ಣದ ಕಾಲುವೆ ಮೇಲೆಯೇ ಕಟ್ಟಡ ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು. ‘ರಾಜಕಾಲುವೆಯನ್ನೇ ಮುಚ್ಚಿದ ಮೇಲೆ ಮಳೆನೀರು ಎಲ್ಲಿ ಹರಿಯಬೇಕು’ ಎಂದು ಪ್ರಶ್ನಿಸಿದರು.

ವಿರೋಧಪಕ್ಷದ ನಾಯಕ ಮಂಜುನಾಥ್‌ ರೆಡ್ಡಿ, ‘ಪ್ರತಿಸಲ ಮಳೆ ಬಂದಾಗಲೂ ನಗರದ 7–8 ಪ್ರದೇಶಗಳಲ್ಲಿ ಮಾತ್ರ ಪ್ರವಾಹದ ವಾತಾವರಣ ನಿರ್ಮಾಣ ಉಂಟಾಗುತ್ತದೆ. ಅಷ್ಟು ಗೊತ್ತಿದ್ದೂ ಪರಿಹಾರ ರೂಪಿಸದಿರಲು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಲ್ಲದೆ ಬೇರೇನೂ ಕಾರಣ ಇಲ್ಲ’ ಎಂದು ದೂರಿದರು. ಆಡಳಿತ ಪಕ್ಷದ ನಾಯಕ ಅಶ್ವತ್ಥನಾರಾಯಣ ಗೌಡ, ಜೆಡಿಎಸ್‌ ಪಕ್ಷದ ನಾಯಕ ಆರ್‌. ಪ್ರಕಾಶ್‌ ಸಹ ಅವರ ಮಾತಿಗೆ ದನಿಗೂಡಿಸಿದರು.

ಉತ್ತರ ನೀಡಿದ ಆಯುಕ್ತ ಎಂ. ಲಕ್ಷ್ಮೀನಾರಾಯಣ, ‘132 ಮಿ.ಮೀ. ಮಳೆ ಸುರಿದಿದ್ದರಿಂದ ಪರಿಸ್ಥಿತಿ ನಿರ್ವಹಣೆ ಮಾಡಲು ಕಷ್ಟವಾಯಿತು. ಆನೇಪಾಳ್ಯದಲ್ಲಿ ಬಿಬಿಎಂಪಿ ಎಂಜಿನಿಯರ್‌­ಗಳು ನಿರ್ಲಕ್ಷ್ಯದಿಂದ ನಿರ್ಮಿಸಿದ ತಾತ್ಕಾಲಿಕ ಸೇತುವೆಯೇ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣವಾಯಿತು’ ಎಂದರು.

‘ಕಿನೊ ಚಿತ್ರಮಂದಿರದ ಬಳಿ ಸಹ 5–6 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಅಲ್ಲಿ ಮಳೆನೀರು ಸರಾಗವಾಗಿ ಹರಿದು­ಹೋಗಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ನಾಯಂಡಹಳ್ಳಿ­ಯಲ್ಲಿ ಬಿಡಿಎ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಸೇತುವೆಯಿಂದ ಸಮಸ್ಯೆಯಾಗಿದೆ’ ಎಂದು ವಿವರಿಸಿದರು.

‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಪುನರ್ ರಚಿಸಬೇಕು ಮತ್ತು ಅದರ ನೇತೃತ್ವವನ್ನು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೆ ಮೇಯರ್ ಅವರಿಗೆ ವಹಿಸಿಕೊಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗುವುದು’ ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT