ಚಾರಿತ್ರ್ಯವಂತ ಸಾಧಕರು ಅಜರಾಮರ: ಸಚಿವ ಬಂಡೆಪ್ಪ ಕಾಶೆಂಪೂರ

7
ಯುವ ಸಮ್ಮೇಳನ

ಚಾರಿತ್ರ್ಯವಂತ ಸಾಧಕರು ಅಜರಾಮರ: ಸಚಿವ ಬಂಡೆಪ್ಪ ಕಾಶೆಂಪೂರ

Published:
Updated:
Deccan Herald

 ಬೀದರ್‌: ‘ಚಾರಿತ್ರ್ಯವಂತ ಸಾಧಕರ ಹೆಸರು ಮಾತ್ರ ಇತಿಹಾಸದಲ್ಲಿ ಉಳಿಯಲು ಸಾಧ್ಯ. ಅಂಥವರ ಸಾಲಿನಲ್ಲಿ ಸ್ವಾಮಿ ವಿವೇಕಾನಂದರಿಗೆ ಅಗ್ರ ಸ್ಥಾನ ಇದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ನುಡಿದರು.

ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವರ್ಷಾಚರಣೆ ಪ್ರಯುಕ್ತ ನಗರದ ಶಿವನಗರದ ಪಾಪನಾಶ ರಸ್ತೆಯಲ್ಲಿ ಇರುವ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಸಮಾಜ, ದೇಶಕ್ಕೆ ಏನೇನು ಕೊಡುಗೆಗಳನ್ನು ನೀಡಿದ್ದೇವೆ ಎನ್ನುವುದು ಮುಖ್ಯ. ಸ್ವಾಮಿ ವಿವೇಕಾನಂದರು 39 ವರ್ಷ ಮಾತ್ರ ಬಾಳಿ ಜಗಕ್ಕೆ ಬೆಳಕಾದರು. 29ನೇ ವಯಸ್ಸಿನಲ್ಲೇ ಶಿಕಾಗೋದಲ್ಲಿ ಭಾಷಣ ಮಾಡಿ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ ಹಾರಿಸಿದರು’ ಎಂದು ಹೇಳಿದರು.

‘ಅಂದಿನ ಅನಾನುಕೂಲದ ಪರಿಸ್ಥಿತಿ ನಡುವೆಯೂ ಅವರು ಅಷ್ಟೊಂದು ಸಾಧನೆ ಮಾಡಿರುವಾಗ, ಈಗ ಎಲ್ಲ ತಂತ್ರಜ್ಞಾನ, ಸಾಧನ-ಸೌಕರ್ಯಗಳು ಸಿಗುತ್ತಿರುವಾಗ ನಾವೇಕೆ ಶ್ರೇಷ್ಠ ಸಾಧನೆ ಮಾಡಬಾರದು ಎನ್ನುವ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿ, ಯುವಕರು ಚಿಂತನೆ ಮಾಡಬೇಕು. ವಿವೇಕ ಚಿಂತನೆಗಳಿಂದ ಪ್ರೇರಣೆ ಪಡೆಯಬೇಕು’ ಎಂದು ತಿಳಿಸಿದರು.

‘ಸ್ವಾಮಿ ವಿವೇಕಾನಂದರ ಶ್ರೇಷ್ಠ ಚಿಂತನೆ, ಆದರ್ಶ ತತ್ವಗಳು ಜಾತ್ಯತೀತ, ಧರ್ಮಾತೀತ ಹಾಗೂ ಸೀಮಾತೀತವಾಗಿವೆ. ಅವರ ಚಿಂತನೆಗಳ ಪಾಲನೆಯಿಂದ ಸದೃಢ ಸಮಾಜದ ನಿರ್ಮಾಣ ಸಾಧ್ಯವಿದೆ’ ಎಂದು ಪ್ರತಿಪಾದಿಸಿದರು.

‘ವಿವೇಕ ಚಿಂತನೆಗಳು ಜಾಗತಿಕ ಮೌಲ್ಯ ಹೊಂದಿವೆ. ಭಾರತ ಮಾತ್ರವಲ್ಲ, ವಿಶ್ವದ ಯಾವುದೇ ರಾಷ್ಟ್ರದಲ್ಲಿ ಯುವಕರ ಬಗ್ಗೆ ಚಿಂತನೆ, ಸಮಾವೇಶ ನಡೆಯುತ್ತಿದ್ದರೆ ಅಲ್ಲಿ ಸ್ವಾಮಿ ವಿವೇಕಾನಂದರ ಸ್ಮರಣೆ ಆಗುತ್ತದೆ. ಇದು ಅವರ ವಿಚಾರಗಳಲ್ಲಿ ಇರುವಂಥ ಅಗಾಧ ಶಕ್ತಿಗೆ ಉತ್ತಮ ನಿದರ್ಶನವಾಗಿದೆ’ ಎಂದು ವರ್ಣಿಸಿದರು.
‘ರಾಮಕೃಷ್ಣ ವಿವೇಕಾನಂದ ಆಶ್ರಮ ಕಳೆದ 15 ವರ್ಷಗಳಿಂದ ಆದರ್ಶ ವ್ಯಕ್ತಿ ನಿರ್ಮಾಣದ ದಿಸೆಯಲ್ಲಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಮಾದರಿಯಾಗಿವೆ’ ಎಂದು ಶ್ಲಾಘಿಸಿದರು.

ಸಾನ್ನಿಧ್ಯ ವಹಿಸಿದ್ದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ವ್ಯಕ್ತಿಯನ್ನು ಮಹಾನ್ ಶಕ್ತಿಯನ್ನಾಗಿ ಮಾಡುವ, ಬದುಕು ಶ್ರೀಮಂತಗೊಳಿಸುವ ಸರಳ ಸೂತ್ರಗಳು ಸ್ವಾಮಿ ವಿವೇಕಾನಂದರ ಚಿಂತನೆಗಳಲ್ಲಿ ಇವೆ’ ಎಂದು ಹೇಳಿದರು.

‘ಭಾರತ ಮಾತ್ರವಲ್ಲ, ಇಡೀ ವಿಶ್ವದ ಧರ್ಮ, ಸಂಸ್ಕೃತಿ, ಪರಂಪರೆ ಅರಿಯಬೇಕಾದರೆ ಮೊದಲು ಸ್ವಾಮಿ ವಿವೇಕಾನಂದರನ್ನು ಅರಿಯಬೇಕು. ದೇಶಕ್ಕೆ ಇಂದು ಹಿಂದೆಂದಿಗಿಂತಲೂ ವಿವೇಕ ಚಿಂತನೆ ಹೆಚ್ಚು ಪ್ರಸ್ತುತವಾಗಿವೆ’ ಎಂದು ತಿಳಿಸಿದರು.

ಕಲಬುರ್ಗಿಯ ತಾಡತೇಗನೂರಿನ ವಿದ್ಯಾರ್ಥಿಗಳು ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ್ದ ಭಾಷಣ ಮಾಡಿ ಗಮನ ಸೆಳೆದರು.

ಸಂಸದ ಭಗವಂತ ಖೂಬಾ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಸತೀಶಚಂದ್ರ, ಬಗದಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ, ವೀರಶೆಟ್ಟಿ ಮಣಗೆ ಮಾತನಾಡಿದರು. ಆಶ್ರಮ ನಿರ್ಮಾಣ ದಾನಿ ಕಾಶೀನಾಥ ವಿಶ್ವಕರ್ಮ, ಉದ್ಯಮಿ ಗುರುನಾಥ ಕೊಳ್ಳೂರ ಇದ್ದರು. ವಿಜಯಕುಮಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !