ಸೋಮವಾರ, ಏಪ್ರಿಲ್ 12, 2021
22 °C
ಮಹಾರಾಷ್ಟ್ರದಿಂದ ಬೀದರ್‌ ಜಿಲ್ಲೆಗೆ ಬಂದ 2,530 ಜನ

ಒಂದೇ ದಿನದಲ್ಲಿ 38 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಬೀದರ್‌ ಜಿಲ್ಲೆಯಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ 38 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 11 ದಿನಗಳಲ್ಲಿ 178 ಪ್ರಕರಣಗಳು ಬೆಳಕಿಗೆ ಬಂದಿವೆ.

ಬ್ರಿಮ್ಸ್‌ ಆಸ್ಪತ್ರೆಯಲ್ಲಿ 130 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಇದ್ದಾರೆ. ತೀವ್ರ ಬಿಸಿಲು ಇದ್ದರೂ ಕೋವಿಡ್ ಎರಡನೇ ಅಲೆ ತೀವ್ರ ಸ್ವರೂಪ ಪಡೆದು ಕೊಳ್ಳಲಾರಂಭಿಸಿದೆ.

ರೋಗ ಲಕ್ಷಣಗಳು ಕಂಡು ಬರದಿದ್ದರೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಸಂಸದರ ಪತ್ನಿ ಹಾಗೂ ಮಗಳಿಗೂ ಸೋಂಕು ತಗುಲಿದೆ. ಮೂವರು ವಕೀಲರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಮವಾರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಭಾಂಗಣದಲ್ಲಿ ವಕೀಲರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರಲ್ಲಿ ಆತಂಕ ಮನೆ ಮಾಡಿದೆ. ಎರಡನೇ ಅಲೆಯಿಂದ ಭೀತಿಗೊಳಗಾಗಿ ಅನೇಕ ಜನ ಸರ್ಕಾರಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯಲಾರಂಭಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಕೊಡಲಾಗುತ್ತಿದೆ.

* * *
ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ

ಮಹಾರಾಷ್ಟ್ರದ ಊರುಗಳಿಗೆ ಬೀದರ್‌ ಜಿಲ್ಲೆಗೆ ಬರುವವರ ಸಂಖ್ಯೆಯಲ್ಲಿ ಒಂದೇ ದಿನದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರದ ಚೆಕ್‌ಪೋಸ್‌ವೊಂದರಲ್ಲೇ 2.282 ಜನರ ತಪಾಸಣೆ ಮಾಡಲಾಗಿದೆ. ವೈದಕೀಯ ವರದಿ ಇಲ್ಲದೆ ಬಂದ 259 ಮಂದಿಯನ್ನು ಮರಳಿ ಕಳಿಸಲಾಗಿದೆ. 49 ಜನರ ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಮಾಡಲಾಗಿದೆ.

ಕಮಲನಗರದಲ್ಲಿ ಸೋಮವಾರ 250 ಜನರ ತಪಾಸಣೆ ಮಾತ್ರ ನಡೆಸಲಾಗಿದೆ. ಹೆದ್ದಾರಿಯಲ್ಲಿ ನೆತ್ತಿಸುಡುವ ಬಿಸಿಲಲ್ಲಿ ದಿನವೀಡಿ ನಿಂತು ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲು ಕಷ್ಟವಾಗುತ್ತಿದೆ. ಒಂದು ತಗಡಿನ ಶೆಡ್‌ ಇದ್ದರೂ ಅದರಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಿಸಿಲಿನ ಝಳ ತಾಳಲಾಗದೆ ನೆರಳು ಅರಸಿಕೊಂಡು ಹೋಗುವಷ್ಟರಲ್ಲಿ ಮಹಾರಾಷ್ಟ್ರದಿಂದ ಬರುತ್ತಿರುವ ವಾಹನಗಳು ವೇಗವಾಗಿ ದಾಟಿ ಹೋಗುತ್ತಿವೆ. ಅಂಥವರ ತಪಾಸಣೆ ಸಾಧ್ಯವಾಗುತ್ತಿಲ್ಲ.

ಜಿಲ್ಲಾಡಳಿತಕ್ಕೆ ಈ ವಿಷಯ ಗೊತ್ತಿದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಒಂದು ಟೆಂಟ್‌ ಹಾಕಿಸಿಕೊಡುವ ವ್ಯವಸ್ಥೆಯನ್ನೂ ಮಾಡಿಲ್ಲ. ಔರಾದ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶರಣಯ್ಯ ಮಠಪತಿ ಅವರು ಸಂಬಂಧಪಟ್ಟ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಬಿಸಿಲಲ್ಲಿ ತೊಂದರೆ ಅನುಭವಿಸಬೇಕಾಗಿದೆ.

ಚೆಕ್‌ಪೋಸ್ಟ್‌ನಲ್ಲಿ ಪೆಂಡಾಲ್‌ ನಿರ್ಮಿಸಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಬೇಕು ಎಂದು ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ ಮನವಿ ಮಾಡಿದ್ದಾರೆ.

* * *
ಲಾತೂರ್‌ನಲ್ಲಿ ರಾತ್ರಿ ಕರ್ಫ್ಯೂ

ನಾಗಪೂರದಲ್ಲಿ ಮಾರ್ಚ್ 31ರ ವರೆಗೆ ಲಾಕ್‌ಡೌನ್‌ ಇದ್ದರೆ, ಲಾತೂರ್‌ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಮಹಾರಾಷ್ಟ್ರದಿಂದ ಬೀದರ್‌ ಜಿಲ್ಲೆಗೆ ಬರುವ ಹಾಗೂ ಬೀದರ್, ಕಮಲನಗರ, ಔರಾದ್‌ನಿಂದ ಉದಗಿರ, ಲಾತೂರ್‌ ನಗರಕ್ಕೆ ಹೋಗುವ ಬಸ್‌ಗಳ ಸಂಚಾರ ಮುಂದುವರಿದಿದೆ.
ಲಾತೂರ್‌ ಜಿಲ್ಲಾಧಿಕಾರಿ ಪೃಥ್ವಿರಾಜ್‌ ಅವರು ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿ ಭಾನುವಾರ ಆದೇಶ ಹೊರಡಿಸಿದ್ದಾರೆ.

ಲಾತೂರ್‌ ಜಿಲ್ಲೆಯಲ್ಲಿ ವಾರದ ಸಂತೆಯನ್ನು ನಿಷೇಧಿಸಲಾಗಿದೆ. ಆದರೆ, ಕೈಗಾಡಿ ಮೇಲೆ ತರಕಾರಿ ಮಾರುವರಿಗೆ ಅವಕಾಶ ಕಲ್ಪಿಸಲಾಗಿದೆ. ಧಾರ್ಮಿಕ ಸ್ಥಳ ಹಾಗೂ ಪ್ರಾರ್ಥನಾ ಮಂದಿರಗಳಲ್ಲಿ ಐದಕ್ಕಿಂತ ಹೆಚ್ಚು ಜನ ಸೇರದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಜಿಮ್‌, ವ್ಯಾಮಮಶಾಲೆ. ಈಜುಕೊಳ ಬಂದ್‌ ಮಾಡಲು ಸೂಚನೆ ನೀಡಲಾಗಿದೆ. ರಾಜಕೀಯ, ಧಾರ್ಮಿಕ, ಜಾತಿ ಸಮಾವೇಶ, ಜಾತ್ರೆ ಹಾಗೂ ಉರುಸು ನಿಷೇಧಿಸಲಾಗಿದೆ. ಈಗಾಗಲೇ ನಿಗದಿ ಪಡಿಸಿದ ಮದುವೆ ಸಮಾರಂಭಧಲ್ಲಿ 50ಕ್ಕಿಂತ ಹೆಚ್ಚು ಜನ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗಿದೆ. ನಿತ್ಯ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡೆಸಲಿರುವ ಸ್ಪರ್ಧಾತ್ಮಕ ಹಾಗೂ ನೇಮಕಾತಿ ಪರೀಕ್ಷೆಗಳು ನಿಗದಿಪಡಿಸಿದ ದಿನಾಂಕದಂದು ಪರೀಕ್ಷೆಗಳು ನಡೆಯಲಿವೆ. ಅವುಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ ಎಂದು ಲಾತೂರ್‌ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.