ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಡವಾಡಿ ಗ್ರಾಮದಲ್ಲಿ ದುರಂತ: ದೇವರ ದರ್ಶನಕ್ಕೆ ಬಂದವರು ನೀರು ಪಾಲು

3 ಗಂಟೆಗಳ ಕಾರ್ಯಾಚರಣೆ ನಂತರ ಶವ ಪತ್ತೆ
Last Updated 4 ಅಕ್ಟೋಬರ್ 2021, 4:47 IST
ಅಕ್ಷರ ಗಾತ್ರ

ಹುಮನಾಬಾದ್: ಹೈದರಾಬಾದ್‌ನ ಬೊರಾಬಂಡಾ ನಿವಾಸಿಗಳು ತಮ್ಮ ಕುಟುಂಬದ 13 ಸದಸ್ಯರೊಂದಿಗೆ ತಾಲ್ಲೂಕಿನ ಪ್ರಸಿದ್ಧ ಘೋಡವಾಡಿ ಗ್ರಾಮದ ಇಸ್ಮಾಯಿಲ್ ಖಾದ್ರಿ ದರ್ಗಾದ ದರ್ಶನಕ್ಕೆಂದು ಭಾನುವಾರ ನೀಡಿದ ಭೇಟಿ ದುರಂತದಲ್ಲಿ ಅಂತ್ಯಗೊಂಡಿದೆ.

ದೇವರ ದರ್ಶನದ ಮುಂಚಿತವಾಗಿ ಕುಟುಂಬದ ಕೆಲವರು ದರ್ಗಾ ಹತ್ತಿರದಲ್ಲಿರುವ ಕೆರೆಯ ದಡದಲ್ಲಿ ಸ್ನಾನಕ್ಕೆಂದು ತೆರಳಿದ್ದರು. ಅವರೊಡನೆ ಇನ್ನು ನಾಲ್ವರು ಯುವಕರು ಸಹ ಸ್ನಾನಕ್ಕೆಂದು ಹೋಗಿದ್ದರು. ಕೆರೆಯಲ್ಲಿ ಕೆಲ ಹೊತ್ತು ಈಜಾಡುತ್ತಿದ್ದಂತೆ ನಾಲ್ವರು ನೀರು ಪಾಲಾಗಿರುವ ಘಟನೆ ನಡೆದಿದೆ.

ಸೈಯದ್ ಅಕ್ಬರ್ ಸೈಯದ್ ಉಸ್ಮಾನ್ (17), ಮಹಮದ್ ಜುಲೇದ್ ಖಾನ್( 19), ಮಹಮದ್ ಫಾದಖಾನ್ ಸಲೀಂ ಖಾನ್ (18) ಮತ್ತು ಸೈಯದ್ ಜುನೇದ್ ಸೈಯದ್ ಖಾಲೆದ್ (15) ನೀರು ಪಾಲಾದವರು.

ಬಡ ಕುಟುಂಬ: ಹೈದರಾಬಾದ್‌ನ ಬೊರಾಬಂಡಾದ ಬಡ ಕುಟುಂಬ ಇವರದ್ದಾಗಿದ್ದು, ಕುಟುಂಬ ಸದಸ್ಯರು ಸೋಫಾ ವ್ಯಾಪಾರ ಮತ್ತು ದಿನಗೂಲಿ ಕೆಲಸಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದರು. ಇಸ್ಮಾಯಿಲ್ ಖಾದ್ರಿ ದರ್ಗಾದಲ್ಲಿ ದಿನ ಪೂರ್ತಿ ಕುಟುಂದ ಸದಸ್ಯರೊಂದಿಗೆ ಸಂತೋಷದಿಂದ ದಿನ ಕಳೆಯಲು ಬಂದಿದ್ದರು. ಆದರೆ ವಿಧಿ ನಾಲ್ವರು ಯುವಕರ ಜೀವಬಲಿ ಪಡೆಯಿತು.

ಗ್ರಾಮದಲ್ಲಿ ಆಕ್ರಂದನ: ಸುದ್ದಿ ಗ್ರಾಮದಲ್ಲಿ ತಿಳಿಯತ್ತಿದಂತೆ ಕೆರೆಯ ಸುತ್ತಮುತ್ತಲು ನೂರಾರು ಜನರು ಜಮಾಯಿದ್ದರು. ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣಗೊಂಡಿತ್ತು. ಕೆರೆಯ ಹತ್ತಿರ ಬಂದಿದ್ದ ಅನೇಕ ಹೆಣ್ಣು ಮಕ್ಕಳ ಮುಖದಲ್ಲಿ ದುಖ ಉಕ್ಕಿ ಕಣ್ಣೀರು ಬರುತ್ತಿತ್ತು. ‌

ಮೃತರ ಶವ ಪತ್ತೆಗಾಗಿ ಮೊದಲು ಸ್ಥಳೀಯ ನಿವಾಸಿಗಳು ಹುಡುಕಾಟ ನಡೆಸಿದ್ದರು. ಸುದ್ದಿ ತಿಳಿಯುತ್ತಲೇ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 3 ಗಂಟೆ ಕಾಲ ಕಾರ್ಯಾಚರಣೆ ನಡೆಸಿ 4 ಶವ ಪತ್ತೆ ಹಚ್ಚಿದ್ದಾರೆ.

ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ, ಡಿವೈಎಸ್‌ಪಿ ಸೋಮಲಿಂಗ ಕುಂಬಾರ, ಪಿಎಸ್ಐ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಹುಮನಾಬಾದ್ ತಾಲ್ಲೂಕಿನ ಇಸ್ಮಾಯಿಲ್ ಖಾದ್ರಿ ದರ್ಗಾ ಪ್ರಸಿದ್ಧ ದರ್ಗಾವಾಗಿದ್ದು, ಪ್ರತಿ ದಿನ ನೂರಾರು ಭಕ್ತರು ದರ್ಶನಕ್ಕೆ ಬರುತ್ತಾರೆ. ರಾಜ್ಯವೂ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ಸಹ ಇಸ್ಮಾಯಿಲ್ ಖಾದ್ರಿ ದರ್ಶನ ಪಡೆಯಲು ಬರುತ್ತಾರೆ.

ಈಜುಗೊಳದಲ್ಲಿ ಯುವಕ ಸಾವು
ಹುಮನಾಬಾದ್:
ಪಟ್ಟಣದ ಹೊರವಲಯದ ಸಿಂಧನಕೇರಾ ಹತ್ತಿರದಲ್ಲಿ ಇರುವ ಈಜು ಕೊಳದಲ್ಲಿ ಯುವಕ ಮೃತಪಟ್ಟ ಘಟನೆ ಭಾನುವಾರ ಜರುಗಿದೆ.

ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದ ಸುದರ್ಶನ ರಾಜಶೇಖರ (21) ಮೃತ ಯುವಕ. ಈಜು ಕೊಳದಲ್ಲಿ ಈಜು ಬಾರದೆ ನೀರಿಗೆ ಇಳಿದ ಹಿನ್ನೆಲೆಯಲ್ಲಿ ಯುವಕನು ಮೃತ ಪಟ್ಟಿದ್ದಾನೆ. ಈ ಕುರಿತು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT