ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಬಿವಿಬಿ ಕಾರ್ಯಕರ್ತರ ಪ್ರತಿಭಟನೆ

ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರ ಕಡೆಗಣನೆ: ಆರೋಪ
Last Updated 6 ಜುಲೈ 2018, 13:07 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

2018-19ನೇ ಸಾಲಿನ ಬಜೆಟ್ ಬಗ್ಗೆ ಹಲವು ನಿರೀಕ್ಷೆಗಳು ಇದ್ದವು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಡ, ಪ್ರತಿಭಾವಂತ, ಹಿಂದುಳಿದ ಸಮುದಾಯ ಸೇರಿದಂತೆ ಎಲ್ಲ ವಿದ್ಯಾರ್ಥಿಗಳಿಗೆ ನಿರಾಸೆ ಉಂಟು ಮಾಡಿದ್ದಾರೆ. ಸತ್ವಹೀನ ಬಜೆಟ್‌ ಮಂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಡ ವರ್ಗದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ವಿತರಣೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯಗಳ ಉನ್ನತೀಕರಣ, ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ವಿಷಯದಲ್ಲಿ ಬಜೆಟ್ ವಿಫಲವಾಗಿದೆ ಎಂದು ಟೀಕಿಸಿದರು.

‘ರಾಜ್ಯದ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪಾಲಿಗೆ ಇದೊಂದು ನಿರಾಶಾದಾಯಕ ಹಾಗೂ ದೂರದೃಷ್ಟಿ ಇಲ್ಲದ ಬಜೆಟ್ ಆಗಿದೆ’ ಎಂದು ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ದ ಹೇಳಿದರು.

‘ನಗರದ ಮಧ್ಯಭಾಗದಲ್ಲಿರುವ ಮಹಿಳಾ ಕಾಲೇಜಿನಲ್ಲಿ ಸರಿಯಾದ ಕೊಠಡಿಗಳು ಹಾಗೂ ಶೌಚಾಲಯಗಳು ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

‘ಎರಡು ವರ್ಷಗಳ ಹಿಂದೆ ಬೀದರ್‌ಗೆ ಎಂಜಿನಿಯರಿಂಗ್‌ ಕಾಲೇಜು ಘೋಷಣೆಯಾದರೂ ಅದು ಕಾರ್ಯಾರಂಭ ಮಾಡಿಲ್ಲ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಮಟ್ಟಿಗೆ ಕನಸಾಗಿಯೇ ಉಳಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

‘ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಜನವಾಡ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮಹಿಳಾ ಕಾಲೇಜನ್ನು ಸ್ಥಳಾಂತರಿಸಲಾಗುವುದು. ಅಗತ್ಯ ಮೂಲಸೌಕರ್ಯ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದರು.

ಎಬಿವಿಪಿ ನಗರ ಘಟಕದ ಉಪಾಧ್ಯಕ್ಷ ಅರವಿಂದ ಸುಂದಾಳಕರ್ , ನಗರ ಕಾರ್ಯದರ್ಶಿ ಅನಂದ ಡೋಬಾಳೆ, ಸತೀಶ್ ಶ್ರೀರಾಮ, ಉಮೇಶ ತೆಲಂಗ, ಪೂಜಾ ರಾಠೋಡ, ಮೇರಜ್‌ ಬೇಗಂ, ಸಿಮ್ರನ್‌ ಬೇಗಂ, ಸುಮಯ್ಯಾ ನಾಜಿಸ್, ಕಲ್ಪನಾ, ಸಾವಿತ್ರಿ, ಅರುಣಾ, ಕವಿತಾ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT