ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಕೃಷಿ ಪರಿಕರ ಅಂಗಡಿಗಳ ಬಂದ್

ಮುಖ್ಯಮಂತ್ರಿಗೆ ಮನವಿ
Last Updated 20 ಡಿಸೆಂಬರ್ 2018, 13:24 IST
ಅಕ್ಷರ ಗಾತ್ರ

ಬೀದರ್: ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ನೀಡಲಾಗುವ ಕೃಷಿ ಪರಿಕರಗಳನ್ನು ನೆರೆಯ ಮಹಾರಾಷ್ಟ್ರ ಮಾದರಿಯಲ್ಲಿ ಪರವಾನಗಿ ಹೊಂದಿದ ಕೃಷಿ ಪರಿಕರ ಮಾರಾಟ ವ್ಯಾಪಾರಿಗಳ ಮೂಲಕವೇ ವಿತರಿಸಬೇಕು ಎಂದು ಒತ್ತಾಯಿಸಿ ಕೃಷಿ ಪರಿಕರ ಅಂಗಡಿಗಳ ಮಾಲೀಕರು ಜಿಲ್ಲೆಯಲ್ಲಿ ಗುರುವಾರ ಅಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಆಗ್ರೊ ಟ್ರೇಡರ್ಸ್ ಅಸೋಸಿಯೇಶನ್ ಕರೆಯ ಮೇರೆಗೆ ಬೀದರ್, ಭಾಲ್ಕಿ, ಔರಾದ್, ಬಸವಕಲ್ಯಾಣ, ಹುಮನಾಬಾದ್, ಚಿಟಗುಪ್ಪ, ಹುಲಸೂರು, ಕಮಲನಗರ ತಾಲ್ಲೂಕು ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲೆಡೆ ಬೆಳಿಗ್ಗೆಯಿಂದ ಸಂಜೆ ವರೆಗೆ ಅಂಗಡಿ ಬಂದ್ ಮಾಡಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು.

ಬೀದರ್ ನಗರದಲ್ಲಿ ಬೀದರ್ ಆಗ್ರೊ ಇನ್‌ಪುಟ್‌ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಮಡಿವಾಳಪ್ಪ ಗಂಗಶೆಟ್ಟಿ ಅವರ ನೇತೃತ್ವದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಕೃಷಿ ಪರಿಕರ (ರಾಸಾಯನಿಕ ಗೊಬ್ಬರ, ಸಸ್ಯ ಸಂರಕ್ಷಕ ಹಾಗೂ ಬೀಜ) ಮಾರಾಟಗಾರರು ಇದ್ದಾರೆ. ಸಹಾಯಧನದಲ್ಲಿ ಬೀಜ ಕೊಡಲು ಆರಂಭಿಸಿದಾಗಿನಿಂದ ಬೀಜ ವ್ಯಾಪಾರ ಅರ್ಧಕ್ಕೂ ಹೆಚ್ಚು ಕುಸಿದಿದೆ ಎಂದು ಹೇಳಿದರು.

ಈಗ ಗೊಬ್ಬರ, ಸಸ್ಯ ಸಂರಕ್ಷಕ ಹಾಗೂ ಅಲ್ಪ ಪೋಷಕಾಂಶಗಳನ್ನು ಸಹಾಯಧನದೊಂದಿಗೆ ರೈತ ಸಂಪರ್ಕ ಕೇಂದ್ರದಿಂದ ಮಾರಾಟ ಮಾಡಲಾಗುತ್ತಿರುವ ಕಾರಣ ಖಾಸಗಿ ವ್ಯಾಪಾರಸ್ಥರ ಗೊಬ್ಬರ, ಬೀಜ ಹಾಗೂ ಸಸ್ಯ ಸಂರಕ್ಷಕ ಔಷಧಗಳ ವ್ಯಾಪಾರ ತೀರಾ ಕುಸಿದಿದೆ. ಇದರಿಂದ ವಿತರಕರು ಆರ್ಥಿಕ ಸಂಕಷ್ಟದಲ್ಲಿದ್ದು, ದಿನನಿತ್ಯದ ವೆಚ್ಚ ಸರಿದೂಗಿಸುವುದು ಕೂಡ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಸರ್ಕಾರದ ವತಿಯಿಂದ ರಿಯಾಯಿತಿ ದರದಲ್ಲಿ ಕೊಡಲಾಗುವ ಕೃಷಿ ಪರಿಕರಗಳನ್ನು ಪರವಾನಗಿ ಹೊಂದಿದ ಕೃಷಿ ಪರಿಕರ ಮಾರಾಟ ವ್ಯಾಪಾರಿಗಳ ಮೂಲಕವೇ ವಿತರಿಸಬೇಕು. ಸದ್ಯದ ಬ್ಯಾಂಕ್ ಬಡ್ಡಿ ದರ ಹೆಚ್ಚಾಗಿರುವ ಕಾರಣ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕು. ಈಗಿನ ಪರವಾನಗಿ ನವೀಕರಣ ಪ್ರಕ್ರಿಯೆ ಜಟಿಲವಾಗಿದ್ದು, ಅದನ್ನು ಸರಳೀಕರಿಸಬೇಕು. ಪರವಾನಗಿ ನವೀಕರಣ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಅಸೋಸಿಯೇಶನ್ ಪದಾಧಿಕಾರಿಗಳಾದ ಕಂಟೆಪ್ಪ ಪಾಟೀಲ, ಬಾಬುರಾವ್ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ ಗಾದಗಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT