ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಅಂಗನವಾಡಿ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ

Published 25 ಜೂನ್ 2024, 14:04 IST
Last Updated 25 ಜೂನ್ 2024, 14:04 IST
ಅಕ್ಷರ ಗಾತ್ರ

ಬೀದರ್‌: ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಅಂಗನವಾಡಿ ಕಾರ್ಯಕರ್ತೆಯರನ್ನೇ ಶಿಕ್ಷಕಿಯರಾಗಿ ನೇಮಿಸಿಕೊಳ್ಳುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರ ಸಂಘಟನೆಯವರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರ ಕಚೇರಿ ಎದುರು ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು.

ರಾಜ್ಯದಲ್ಲಿ ಏಕರೂಪ ಆಹಾರ ಎಂದು ಗೋಧಿ ಉಪ್ಪಿಟನ್ನು 3ರಿಂದ 6 ವರ್ಷದ ಮಕ್ಕಳಿಗೆ ನೀಡುತ್ತಿರುವುದನ್ನು ನಿಲ್ಲಿಸಬೇಕು. ಅದನ್ನು ಮಕ್ಕಳು ಸೇವಿಸುತ್ತಿಲ್ಲ. ಮೊದಲಿನಂತೆ ಅನ್ನ-ಸಾರು-ಮೊಳಕೆ-ಕಾಳುಗಳನ್ನು ಪ್ರತಿ ದಿನದ ಹಾಲಿನೊಂದಿಗೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.ಒಂದು ಅಂಗನವಾಡಿ ಕೇಂದ್ರಕ್ಕೆ ಪ್ರಭಾರ ಹೋಗಲು ಪಕ್ಕದ ಕಾರ್ಯಕರ್ತೆಯರಿಗೆ ದಿನಕ್ಕೆ ₹100 ಬೇಕು. ಆದರೆ, ಸರ್ಕಾರ 1 ತಿಂಗಳಿಗೆ ₹50 ನೀಡುತ್ತಿದೆ. ಕಾರ್ಯಕರ್ತೆ ಮಿಕ್ಕುಳಿದ ಹಣ ಭರಿಸುವ ಪರಿಸ್ಥಿತಿ ಇದೆ ಎಂದು ಗೋಳು ತೋಡಿಕೊಂಡರು.

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಐದು ವರ್ಷ ಸೇವೆ ಸಲ್ಲಿಸಿದರೆ ಪದೋನ್ನತಿ ನೀಡಬೇಕು. ನಿವೃತ್ತ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಎನ್.ಪಿ.ಎಸ್. ಹಣ ನಾಲ್ಕು ವರ್ಷವಾದರೂ ಬಂದಿರುವುದಿಲ್ಲ. ಅದರಲ್ಲಿ ತುಂಬಾ ಜನ ಮರಣ ಹೊಂದುತ್ತಿದ್ದಾರೆ. ಅವರು ಬದುಕಿರುವಾಗಲೇ ಆ ಹಣವನ್ನು ನೀಡಬೇಕು. ಪ್ರತಿ 3 ತಿಂಗಳಿಗೆ ಒಮ್ಮೆಯಾದರೂ ಅರ್ಜಿಗಳನ್ನು ಪರಿಶೀಲನೆ ಮಾಡಿ, ತಕ್ಷಣ ಹಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗೌರವಧನ ನೀಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಬರುವ ದಿನಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ಲಕ್ಷ್ಮಿ ದಂಡಿ, ಜಿಲ್ಲಾ ಗೌರವಾಧ್ಯಕ್ಷೆ ಶಿವರಾಜ ಕಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಲೋಚನಾ ಪೂಜಾರಿ, ಔರಾದ್‌ ತಾಲ್ಲೂಕು ಅಧ್ಯಕ್ಷೆ ಶಾರದಾ ವಡಗಾಂವ್‌, ಶಕುಂತಲಾ ಅಮಲಾಪೂರ, ರೇಣುಕಾ, ವಿಶಾಲಾಕ್ಷಿ, ಭಾರತಿ ಕಾಡವಾದ, ರೇಣುಕಾ ವಡಗಾಂವ್‌, ಸಂಗೀತಾ ಬರಗೆನ್, ಪಂಚಶೀಲ ಸೋರಳ್ಳಿ, ಮನೋರಂಜಿನಿ, ಸಂಪತ್ತಿ ಅಮಲಾಪೂರ, ಕವಿತಾ ಮನ್ನಳ್ಳಿ, ಅಂಬಿಕಾ ಹೊಕ್ರಾಣಿ, ಅನಿತಾ ಲಾಲಬಾಗ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT