ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಅನುಭವ ಮಂಟಪ ನಿರ್ಮಾಣ: ಅರವಿಂದ ಜತ್ತಿ ಮಾಹಿತಿ

ಬಸವ ಸಮಿತಿ ಅಧ್ಯಕ್ಷ
Last Updated 31 ಡಿಸೆಂಬರ್ 2018, 17:49 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಅಮೆರಿಕದ ಬಾಸ್ಟನ್ ನಗರದಲ್ಲಿ ಬಸವಣ್ಣನವರ ಅನುಭವ ಮಂಟಪ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ಜಮೀನು ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದೆ' ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ಮಹಾರಾಷ್ಟ್ರ ಬಸವ ಪರಿಷತ್ ವತಿಯಿಂದ ಇಲ್ಲಿ ಸೋಮವಾರ ಆಯೋಜಿಸಿದ್ದ ಶರಣ ಉರಿಲಿಂಗಪೆದ್ದಿಯವರ ಜಯಂತಿ ಅಂಗವಾಗಿ ಕಂಧಾರದಿಂದ ಕಲ್ಯಾಣದವರೆಗೆ ನಡೆಸಿದ ಸಮತಾ ಸಂದೇಶ ಪಾದಯಾತ್ರೆ ಸಮಾರೋಪದಲ್ಲಿ ಅವರು ಮಾತನಾಡಿದರು.

‘ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಸವಜಯಂತಿ ಆಚರಿಸಲಾಗಿದೆ. ಇತರೆ ರಾಜ್ಯ ಹಾಗೂ ಆಸ್ಟ್ರೇಲಿಯಾ ಒಳಗೊಂಡು ವಿದೇಶಗಳಲ್ಲಿಯೂ ಬಸವಜಯಂತಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಬೆಂಗಳೂರಿನ ವಿಧಾನಸೌಧದ ಸಮೀಪದ ಬಸವ ಸಮಿತಿ ಕಚೇರಿಯ ಮೇಲೆ ಬಸವಣ್ಣನವರ ಬೃಹತ್ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಇದಕ್ಕಾಗಿ ಪುಣೆಯಲ್ಲಿ ₹35 ಲಕ್ಷ ವೆಚ್ಚದಲ್ಲಿ ಪಂಚಧಾತುವಿನ ಮೂರ್ತಿ ಸಿದ್ಧವಾಗಿದೆ. ಅಲ್ಲಿಂದ ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು' ಎಂದು ತಿಳಿಸಿದರು.

‘ನಾವು ಬರೀ ಲಿಂಗಾಯತರು ಎಂದು ಹೇಳಿದರೆ ಸಾಲದು. ಕೊರಳಲ್ಲಿ ಇಷ್ಟಲಿಂಗ ಧರಿಸಿ ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಬಸವಾದಿ ಶರಣರ ತತ್ವದ ಆಚರಣೆ ಮಾಡಬೇಕು. ನಡೆನುಡಿ ಒಂದಾಗಿಸಿಕೊಂಡು ಅಂತರಂಗ ಶುದ್ಧಗೊಳಿಸಬೇಕು. ಕಳಬೇಡ, ಕೊಲಬೇಡ ಎಂಬ ಒಂದು ವಚನದ ಪಾಲನೆ ಮಾಡಿದರೆ ಸಾಕು' ಎಂದರು.

ಮಹಾರಾಷ್ಟ್ರ ರಾಜ್ಯ ಬಸವಪರಿಷತ್ ಅಧ್ಯಕ್ಷ ಶಿವಾನಂದ ಹೈಬತಪುರೆ ಮಾತನಾಡಿ, ‘ವೈದಿಕ ಸಂಪ್ರದಾಯದ ವಿರುದ್ಧವಾಗಿಯೇ ಲಿಂಗಾಯತ ಧರ್ಮ ಹುಟ್ಟಿಕೊಂಡಿದೆ. ಬಸವಣ್ಣನವರು ಜನಸಾಮಾನ್ಯರಿಗಾಗಿ ದೇವಸ್ಥಾನಗಳಲ್ಲಿನ ಶೋಷಣೆಯನ್ನು ತಪ್ಪಿಸುವುದಕ್ಕಾಗಿ ಇಷ್ಟಲಿಂಗವನ್ನು ಕೊರಳಲ್ಲಿ ಧರಿಸಲು ಸೂಚಿಸಿದ್ದಾರೆ. ದೇವರು ನಮ್ಮಲ್ಲಿಯೇ ಇದ್ದಾನೆಂದು ಸಾರಿದ್ದಾರೆ. ಅನ್ಯ ದೇವರನ್ನು ಪೂಜಿಸದೆ ನಿಜ ಬಸವತತ್ವದ ಅನುಯಾಯಿಗಳಾಗಬೇಕು' ಎಂದರು.

‘ನಾಂದೇಡ ಜಿಲ್ಲೆಯ ಶರಣ ಉರಿಲಿಂಗ ಪೆದ್ದಿಯವರ ಕಾರ್ಯಕ್ಷೇತ್ರ ಕಂಧಾರದಿಂದ ಪ್ರತಿವರ್ಷ ಸಮತಾ ಸಂದೇಶ ಪಾದಯಾತ್ರೆ ನಡೆಸಲಾಗುತ್ತಿದೆ. ಇದು 6ನೇ ವರ್ಷದ ಯಾತ್ರೆಯಾಗಿದೆ. ಬಸವಾದಿ ಶರಣರ ಕಾರ್ಯಕ್ಷೇತ್ರವಾದ ಬಸವಕಲ್ಯಾಣಕ್ಕೆ ಯಾತ್ರೆ ಕೈಗೊಳ್ಳುವುದರಿಂದ ಯಾವುದೇ ಪುಣ್ಯ ದೊರಕುವುದಿಲ್ಲ. ಶರಣರ ತತ್ವಗಳನ್ನು ಆಚರಣೆಗೆ ತಂದರೆ ಜೀವನ ಪಾವನ ಆಗುವುದು ನಿಶ್ಚಿತ’ ಎಂದರು.

ಸಾಹಿತಿ ರಾಜೀವ ಜುಬರೆ ಭಾಲ್ಕಿ ಮಾತನಾಡಿ, `ಬಸವಣ್ಣನವರು ಜಾತಿ, ಮತಭೇದವಿಲ್ಲದ ಸಮಾನತೆಯ ತಳಹದಿಯ ಧರ್ಮ ನೀಡಿದ್ದಾರೆ. ಮೂಢನಂಬಿಕೆ ತೊಡೆದುಹಾಕಿ ಅರಿವು ಮೂಡಿಸಲು ಪ್ರಯತ್ನಿಸಿದ್ದಾರೆ. ವಚನಗಳನ್ನು ಓದಬೇಕು. ಅವುಗಳನ್ನು ಕಂಠಪಾಠ ಮಾಡಬೇಕು' ಎಂದು ಸಲಹೆ ನೀಡಿದರು.

ಬಸವಲಿಂಗ ದೇವರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ರುದ್ರಮಣಿ ಮಠಪತಿ, ನೀಲಕಂಠ ಪಾಟೀಲ ಮಾತನಾಡಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಅನಿಲಕುಮಾರ ಮೆಟಗೆ, ನಗರಸಭೆ ಸದಸ್ಯ ರವಿ ಕೊಳಕೂರ, ಸಿದ್ರಾಮಪ್ಪ ಗುದಗೆ, ಶಾರದಾ ಜತ್ತಿ, ಭರತ ಕಾಂಬಳೆ, ಪಂಚಯ್ಯಸ್ವಾಮಿ ಉದಗೀರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT