ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲಿಸದ ಆಟೊಚಾಲಕರು; ವೃತ್ತಗಳಲ್ಲೇ ವಾಹನ ಸಂಚಾರಕ್ಕೆ ಅಡೆತಡೆ

Last Updated 28 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಬೀದರ್: ನಗರದ ಪ್ರಮುಖ ವೃತ್ತಗಳ ಬಳಿ ಸಂಚಾರ ನಿಯಮವನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಲು ಹಾಗೂ ದಟ್ಟಣೆ ತಡೆಯಲು ಜಾರಿಗೆ ತರಲಾಗಿದ್ದ ಆಟೊ ಲೇನ್‌ ಬಳಸಲು ನಗರದ ಆಟೊ ಚಾಲಕರು ಹಿಂದೇಟು ಹಾಕುತ್ತಿದ್ದಾರೆ.

ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಹರಳಯ್ಯ ವೃತ್ತ, ರೋಟರಿ ವೃತ್ತ ಹಾಗೂ ಮಡಿವಾಳ ವೃತ್ತದಲ್ಲಿ ಮನಬಂದಂತೆ ಆಟೊಗಳ ನಿಲುಗಡೆ ಮಾಡಿ ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಿಯೋಜಿಸಲಾಗಿರವ ಗೃಹರಕ್ಷಕ ಸಿಬ್ಬಂದಿಗೆ ಆಟೊಚಾಲಕರು ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ.

ಅಂಬೇಡ್ಕರ್‌ ವೃತ್ತದ ಬಳಿ ಬಸ್‌ ತಂಗುದಾಣಕ್ಕೆ ಹೊಂದಿಕೊಂಡು ಆಟೊ ಲೇನ್‌ ನಿರ್ಮಿಸಲಾಗಿದೆ. ಆಟೊಗಳು ಸರತಿ ಸಾಲಿನಿಂದ ಹೊರಗೆ ಬರದಂತೆ ಎರಡೂ ಬದಿಗೆ ಕಬ್ಬಿಣದ ಗ್ರಿಲ್‌ ನಿರ್ಮಿಸಿ ಸಿಮೆಂಟ್‌ ಟೈಲ್ಸ್‌ ಹಾಕಲಾಗಿದೆ. ಪಕ್ಕದಲ್ಲಿ ಒಂದು ಫಲಕವನ್ನೂ ಅಳವಡಿಸಲಾಗಿದೆ. ಯಾರೊಬ್ಬರು ನಿಯಮ ಪಾಲಿಸುತ್ತಿಲ್ಲ.

ಪೊಲೀಸ್‌ ಇನ್‌ಸ್ಪೆಕ್ಟರ್‌ ಬರುವುದು ಕಂಡರೆ ಮಾತ್ರ ತೋರಿಕೆಗೆ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅವರು ಹೋದ ಮೇಲೆ ಪೊಲೀಸ್‌ ಕಾನ್‌ಸ್ಟೆಬಲ್‌ ಎಷ್ಟೇ ವಿಸಿಲ್‌ ಹಾಕಿದರೂ ಆಟೊಗಳನ್ನು ಆಟೊಲೇನ್‌ನಲ್ಲಿ ನಿಲುಗಡೆ ಮಾಡುವುದಿಲ್ಲ.

ನಗರಸಾರಿಗೆ ಬಸ್, ಶಾಲಾ ವಾಹನಗಳು, ಕಾರು ಹಾಗೂ ಬೈಕ್‌ಗಳು ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ರೋಟರಿ ವೃತ್ತದ ಕಡೆಗೆ ಹೋಗುತ್ತವೆ. ಚಾಲಕರು ನಿತ್ಯ ಬೆಳಿಗ್ಗೆ ನಡು ರಸ್ತೆಯಲ್ಲೇ ಆಟೊಗಳನ್ನು ನಿಲ್ಲಿಸಿ ಪ್ರಯಾಣಿಕರು ಹತ್ತಿಸಿಕೊಳ್ಳಲು ಪೈಪೋಟಿ ನಡೆಸುತ್ತಾರೆ. ಸಂಚಾರ ಪೊಲೀಸರು ಕಣ್ಣಿಗೆ ಕಂಡರೆ ಮಾತ್ರ ಆಟೊ ಲೇನ್‌ಗಳ ಒಳಗೆ ನುಸುಳುತ್ತಾರೆ.

ನಿಯಮ ಉಲ್ಲಂಘಿಸಿದ ಚಾಲಕರಿಗೆ ₹ 100 ದಂಡ ವಿಧಿಸಲಾಗುತ್ತಿದೆ. ಹಳೆಯ ಚಾಳಿ ಮುಂದುವರಿಸಿದರೆ ಲೈಸನ್ಸ್‌ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರೂ ಚಾಲಕರು ತಮ್ಮ ಚಾಳಿ ಮುಂದುವರಿಸಿದ್ದಾರೆ.

‘ಈಗಾಗಲೇ ಬೀದರ್‌ನಲ್ಲಿ ಆಟೊಚಾಲಕರಿಗೆ ಅತಿ ಹೆಚ್ಚು ದಂಡ ವಿಧಿಸಲಾಗಿದೆ. ಸಂಚಾರ ಸುರಕ್ಷತೆಯ ದೃಷ್ಟಿಯಿಂದ ಕಠಿಣ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಹೇಳುತ್ತಾರೆ.

‘ಚಾಲಕರು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಆಟೊ ಲೇನ್‌ಗಳಲ್ಲೇ ವಾಹನ ನಿಲುಗಡೆ ಮಾಡಬೇಕು. ರಸ್ತೆ ಮಧ್ಯೆ ನಿಂತು ಪ್ರಯಾಣಿಕರನ್ನು ತುಂಬಿಸಿಕೊಳ್ಳುವ ಚಾಲಕರ ವಿರುದ್ಧ ಇನ್ನು ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT