ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಬಾಸಾಹೇಬ ಜ್ಞಾನದ ಭಂಡಾರ

ಸಾಹಿತಿ ಶಿವಕುಮಾರ ಕಟ್ಟೆ ಅಭಿಮತ
Last Updated 23 ಸೆಪ್ಟೆಂಬರ್ 2021, 15:07 IST
ಅಕ್ಷರ ಗಾತ್ರ

ಬೀದರ್: ‘ಜಡ್ಡುಗಟ್ಟಿದ ಜಾತಿ ವ್ಯವಸ್ಥೆ ಸಂದರ್ಭದಲ್ಲಿ ಬಿ.ಆರ್‌.ಅಂಬೇಡ್ಕರ್‌ ಅಪಮಾನ ಸಹಿಸಿಕೊಂಡು ಮೇಲಕ್ಕೆ ಬಂದರು. ಕಠಿಣ ಪರಿಸ್ಥಿತಿಯಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಮನುಕುಲಕ್ಕೆ ಮಾದರಿಯಾಗಿ ಬದುಕಿದರು’ ಎಂದು ಸಾಹಿತಿ ಶಿವಕುಮಾರ ಕಟ್ಟೆ ಹೇಳಿದರು.

ಇಲ್ಲಿಯ ಜೀಜಾಮಾತಾ ಕನ್ಯಾ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ‘ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಓದು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

‘10 ಸಾವಿರ ಪುಸ್ತಕ ಅಧ್ಯಯನ ಮಾಡಿದ್ದ ಬಾಬಾಸಾಹೇಬರು ಜ್ಞಾನದ ಭಂಡಾರ ಆಗಿದ್ದರು. ಶೋಷಿತ ಸಮುದಾಯದ ಏಳಿಗೆಗಾಗಿ ಅವರು ಸಾಗಿಸಿದ ಬದುಕು ಹಾಗೂ ಅವರ ಸಾಧನೆ ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

ಚಿಂತಕ ಎಂ.ಚಂದ್ರಕಾಂತ ಮಾತನಾಡಿ, ‘ಜ್ಞಾನದ ಇನ್ನೊಂದು ಹೆಸರೇ ಅಂಬೇಡ್ಕರ್. ತಳ ಸಮುದಾಯದ ಕಲ್ಯಾಣಕ್ಕಾಗಿ ಬದುಕಿನುದ್ದಕ್ಕೂ ಸಂಘರ್ಷ ಮಾಡಿದ ಮಹಾನ್‌ ನಾಯಕ ಬಾಬಾಸಾಹೇಬರು ವಿದೇಶದ ಮೂರು ವಿಶ್ವವಿದ್ಯಾಲಯಗಳ ಡಾಕ್ಟರೇಟ್‌ ಪದವಿ ಪಡೆದಿದ್ದರು. ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸಿದ ಮಹಾ ಮಾನವತಾವಾದಿ ಆಗಿದ್ದಾರೆ’ ಎಂದು ಬಣ್ಣಿಸಿದರು.

‘ಬಾಬಾಸಾಹೇಬರು ಪರಿಶಿಷ್ಟರಿಗೆ ಮಾತ್ರ ಮೀಸಲಾತಿ ಕಲ್ಪಿಸಿಲ್ಲ. ಬಹುಸಂಖ್ಯಾತ ಹಿಂದುಳಿದ ವರ್ಗಗಳಿಗೂ ಶೇಕಡ 32ರಷ್ಟು ಮೀಸಲಾತಿ ಕಲ್ಪಿಸಿದ್ದಾರೆ. ಮೀಸಲಾತಿ ಅನುಭವಿಸುತ್ತಿರುವ ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಹಿರಿಯ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿ, ‘ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಎಲ್ಲ ಸಮುದಾಯದವರಿಗೂ ಸಮಾನತೆ ಕಲ್ಪಿಸಿದ್ದಾರೆ. ಅವರ ಹೋರಾಟದ ಹಿಂದಿನ ಉದ್ದೇಶವನ್ನು ಅರ್ಥೈಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಿವ ಛತ್ರಪತಿ ಸ್ಮಾರಕ ಸಮಿತಿ ಸಂಚಾಲಕ ಸತೀಶ ಮುಳೆ ಮಾತನಾಡಿ, ‘ಮಹಾನ್‌ ನಾಯಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಸಂವಿಧಾನ ಶಿಲ್ಪಿಅಂಬೇಡ್ಕರ್‌, ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ ಮಹಾಪುರುಷರ ಜಯಂತಿಗಳನ್ನು ಎಲ್ಲ ಸಮುದಾಯದವರೂ ಪ್ರೀತಿಯಿಂದ ಆಚರಿಸುವಂತೆ ಆಗಬೇಕು. ಅಂದಾಗ ಮಾತ್ರ ಸಮುದಾಯಗಳ ನಡುವಿನ ಅಂತರ ಕಡಿಮೆ ಮಾಡಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಡಯಟ್‌ ನಿವೃತ್ತ ಉಪನ್ಯಾಸಕ ಟಿ.ಜೆ.ಹಾದಿಮನಿ ಅವರು ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ಸಾಧನೆ‘ ಕುರಿತು ಮಾತನಾಡಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿಕಾರ್ಜುನ ಸ್ವಾಮಿ ಭಾವಗೀತೆ ಹಾಡಿದರು. ಮಲ್ಲಿಕಾರ್ಜುನ ಐಹೊಳೆ ತಬಲಾ ಸಾಥ್‌ ನೀಡಿದರು. ಜೀಜಾಮಾತಾ ಕನ್ಯಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಸ್ವಾಗತಿಸಿದರು. ಸುಧಾಕರ ಎಲ್ಲಾನೋರ್‌ ಕಾರ್ಯಕ್ರಮ ನಿರೂಪಿಸಿದರು.

ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಜಕುಮಾರ ಗಾದಗೆ, ಆನಂದ ಜಾಧವ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೀಜಾಮಾತಾ ಕನ್ಯಾ ಪ್ರೌಢ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್‌ ಸೋಷಿಯಲ್‌ ಆ್ಯಂಡ್ ಎಕಾನಾಮಿಕ್ ಡೆವೆಲಪ್‌ಮೆಂಟ್‌ ಸೊಸೈಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT