ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಇತಿಹಾಸ ಪುಟ ಸೇರಿದ ಬಹಮನಿ ಸುಲ್ತಾನರ ಕಾಲದ ಆಲದ ಮರ

Last Updated 26 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೀದರ್‌: ಬಹಮನಿ ಸುಲ್ತಾನರ ಕಾಲದ ಕೋಟೆಯೊಳಗೆ ರಂಗಿನ್‌ ಮಹಲ್‌ ಸಮೀಪ ಇದ್ದ ಬೃಹದಾಕಾರದ ಮರವೊಂದು ಮಳೆಗೆ ಉರುಳುವ ಮೂಲಕ ಇತಿಹಾಸದ ಭೂಗರ್ಭ ಸೇರಿದೆ.

ಈ ಆಲದ ಮರ, ಹೈದರಾಬಾದ್ ನಿಜಾಮ್ ನೇಮಕ ಮಾಡಿದ್ದ ನವಾಬ ನಾಸಿರ್ ಉದ್ ದೌಲಾ ಬಹಾದ್ದೂರ್ ಅವಧಿಯದ್ದಾಗಿದೆ ಎನ್ನಲಾಗಿದೆ. ಕೋಟೆ ಆವರಣದಲ್ಲಿ ಅಲೆಯುತ್ತಿದ್ದ ಕೋಡಂಗಿಗಳಿಗಾಗಿಯೇ ಸಿಬ್ಬಂದಿಯನ್ನು ನಿಯೋಜಿಸಿ ಮರದಲ್ಲಿ ಅವುಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿತ್ತು.

ಕೋಡಂಗಿಗಳಿಗೆ ರೊಟ್ಟಿ, ಬೆಲ್ಲ ಹಾಗೂ ಹಣ್ಣುಗಳನ್ನು ಕೊಡುತ್ತಿದ್ದರು. ಎಲ್ಲ ಕೋಡಂಗಿಗಳು ಈ ಮರದ ಮೇಲೆ ಕುಳಿತುಕೊಳ್ಳುತ್ತಿದ್ದವು. ಆಹಾರ ಕೊಡಲು ಬಂದಾಗ ಕೆಳಗೆ ಇಳಿದು ಬರುತ್ತಿದ್ದವು ಎಂದು ಇತಿಹಾಸಕಾರ ಗುಲಾಂ ಯಜ್ದಾನಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

19ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಈ ನೆರವು ಸ್ವಾತಂತ್ರ್ಯದವರೆಗೂ ಮುಂದುವರೆದಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಅಧಿಕಾರಿಗಳು ಈ ಮರವನ್ನು ತೆರವುಗೊಳಿಸಲು ಮುಂದಾದಾಗ ಟೀಮ್‌ ಯುವಾದ ಕಾರ್ಯಕರ್ತರು ಜಾಗೃತಿ ಮೂಡಿಸಿ ಮರ ಕಡಿಯದಂತೆ ನೋಡಿಕೊಂಡಿದ್ದರು. ಕೋಟೆಯೊಳಗೆ ಆಲದ ಮರವೂ ಸ್ಮಾರಕವಾಗಿ ಉಳಿದುಕೊಂಡಿತ್ತು.

‘ಭಾರಿ ಮಳೆಗೆ ಕೋಟೆಯೊಳಗಿನ ಆಲದ ಮರ ಉರುಳಿ ಬಿದ್ದಿದೆ. ಈ ಮೂಲಕ ಇತಿಹಾಸ ಸೇರಿದೆ’ ಎಂದು ಎಎಸ್‌ಐ ಸ್ಮಾರಕ ಸಂರಕ್ಷಣಾಧಿಕಾರಿ ಅನಿರುದ್ಧ ದೇಸಾಯಿ ತಿಳಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಭಾರಿ ಮಳೆ

ಬೀದರ್‌: ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಶನಿವಾರ ಸಾಧಾರಣದಿಂದ ಭಾರಿ ಮಳೆಯಾಗಿದೆ.

ಬೀದರ್‌ ನಗರದ ಉದಗಿರ ರಸ್ತೆಯಲ್ಲಿ ಮರವೊಂದು ಉರುಳಿ ಬಿದ್ದಿದೆ. ನಗರಸಭೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಔರಾದ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಮಳೆಗೆ ರಸ್ತೆ ಕೊಚ್ಚಿಕೊಂಡು ಹೋಗಿವೆ. ಕಮಲನಗರದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಚಿಟಗುಪ್ಪ ತಾಲ್ಲೂಕಿನ ನಾಗನಕೇರಾ- ಮಂಗಲಗಿ ರಸ್ತೆ ಹಾಳಾಗಿದೆ. ಬೀದರ್‌ ತಾಲ್ಲೂಕಿನ ಚಿಲ್ಲರ್ಗಿಯಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಭಾಲ್ಕಿ ಹಾಗೂ ಹುಮನಾಬಾದ್‌ನಲ್ಲಿ ಸಾಧಾರಣ ಮಳೆಯಾಗಿದೆ.

ಕಮಲನಗರ: ಮನೆ ಗೋಡೆ ಕುಸಿತ

ಕಮಲನಗರ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ 36.3 ಮಿ.ಮೀ ಮಳೆ ಸುರಿದಿದೆ. ನಾಲೆಗಳು ತುಂಬಿ ಹರಿದಿವೆ. ನೀರು ಜಮೀನಿಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ.

ತಾಲ್ಲೂಕಿನ 9 ಕೆರೆಗಳು ತುಂಬಿ ಹರಿಯುತ್ತಿವೆ. ವಿವಿಧ ಕೆರೆಗಳಿಂದ ಹರಿಯುವ ನೀರು ಹಾಗೂ ಭಾನುವಾರ ಸುರಿದ ಭಾರಿ ಮಳೆಗೆ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ.

ಬೆಳಕುಣಿ (ಬಿ) ಗ್ರಾಮದ ಸೇತುವೆ ನೀರು ಭೋಪಳಗೇಡ ಗ್ರಾಮದ ಸಮೀಪ ಹರಿದು ಬಂದು ತಳಭಾಗದ ಗ್ರಾಮಗಳಾದ ಬೆಳಕೋಣಿ(ಬಿ), ಮುಧೋಳ (ಬಿ), ಬೆಡಕೊಂದಾ, ನಿಡೋದಾ ಗ್ರಾಮಗಳ ಮೂಲಕ ಮಾಂಜ್ರಾನದಿಗೆ ಸೇರುತ್ತದೆ. ಈ ನೀರಿನಿಂದ ಸುತ್ತಮುತ್ತಲಿನ ಅಂದಾಜು 400 ಎಕರೆಯಷ್ಟು ಜಮೀನಿನಲ್ಲಿನ ಬೆಳೆ ಕೊಚ್ಚಿಕೊಂಡು ಹೋಗಿದೆ ಎಂದು ಗ್ರಾಮಸ್ಥರಾದ ರಾಜೇಂದ್ರ ಮಾಳಿ, ಮುಧೋಳ ಬಿ ಗ್ರಾಮದ ಶಿವಕಾಂತ ಖಂಡೆ, ನಿಡೋದಾದ ಮಾರುತಿ ಬೇಡಕೊಂದಾದ ರಾಜಕುಮಾರ ಠಾಣಾಕುಶನೂರ ಗ್ರಾಮದ ಸತೀಶ ತಿಳಿಸಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ಬೆಳಕೋಣಿ (ಬಿ) ಗ್ರಾಮದ ಸೇತುವೆ ಸ್ಥಿತಿ ಹದಗೆಡುತ್ತದೆ. ಗ್ರಾಮಗಳ ವ್ಯಾಪ್ತಿಯ ಹೊಲಗಳಿಗೆ ನೀರು ನುಗ್ಗಿ ಹಾನಿ ಸಂಭವಿಸುತ್ತದೆ. ಈ ಬಾರಿ ಉದ್ದು, ಹೆಸರು, ಸೋಯಾಬಿನ್‌, ಅರಶಿಣ ಹಾಗೂ ಕಬ್ಬು ಕೊಚ್ಚಿಕೊಂಡು ಹೋಗಿದೆ ಎಂದು ಮುಧೋಳ (ಬಿ) ಗ್ರಾಮದ ರೈತ ಖಂಡೆ ತಿಳಿಸಿದರು.

ಕಮಲನಗರ ಗ್ರಾಮದ ಪರಿಶಿಷ್ಟರ ಓಣಿಯಲ್ಲಿ ನೀರು ಸಂಗ್ರಹಗೊಂಡಿದೆ. ಮನೆಗಳಿಗೆ ತೆರಳಲು ದಾರಿ ಇಲ್ಲದಂತಾಗಿದೆ ಎಂದು ಬಾಲಾಜಿ ತೆಲಂಗೆ ತಿಳಿಸಿದ್ದಾರೆ.

ತಾಲ್ಲೂಕಿನ ಗಡಿಯಿಂದ ಹಾದು ಹೋಗುವ ದೇವಣಿ ನದಿ ಕೂಡ ಧಾರಾಕಾರ ಮಳೆಗೆ ಇದೇ ಪ್ರಥಮ ಬಾರಿ ತುಂಬಿ ಹರಿದಿದೆ.

ಸೋನಾಳ, ಬಾಲೂರ, ಖೇಡ, ಬಳತ, ಬೀಡೋದಾ, ತೋರ್ಣಾ, ಮುಧೋಳ, ಠಾಣಾಕುಶನೂರ ಹಾಗೂ ಬಳತ(ಬಿ) ಸೇತುವೆಗಳ ಮೇಲೆ ನೀರು ಹರಿದಿದ್ದರಿಂದ ರಸ್ತೆ ಸಂಚಾರ ಬಂದ್‌ ಆಗಿತ್ತು. ಬೇಳಕೋಣಿ(ಬಿ) ಗ್ರಾಮದ ರಸ್ತೆಗಳಲ್ಲಿನ ನಾಲೆಗಳು ಕೂಡ ಇಡೀ ದಿನ ತುಂಬಿ ಹರಿದಿವೆ.

ದೇವನದಿ ನಾಲಾ ತುಂಬಿ ಹರಿದ ಪರಿಣಾಮ ತಾಲ್ಲೂಕಿನ ಹೊಳಸಮುದ್ರ ಮತ್ತು ಸಾವಳಿ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ಜನರು ತೊಂದರೆ ಅನುಭವಿಸಿದರು. ಕೆಲ ಮನೆಗಳು ಜಲಾವೃತಗೊಂಡಿವೆ.

ಕಮಲನಗರ ತಾಲ್ಲೂಕಿನ ಕೋಟಗ್ಯಾಳ, ಡಿಗ್ಗಿ ಮತ್ತು ದಾಬಕಾ, ಠಾಣಾಕುಶನೂರು ವಲಯದಲ್ಲಿನ 37 ಮನೆಗಳ ಗೋಡೆ ಕುಸಿದಿವೆ. ಒಂದು ಆಕಳು ಕರು ಮೃತಪಟ್ಟಿದೆ ಎಂದು ತಹಶೀಲ್ಧಾರ್ ರಮೇಶ ಪೆದ್ದೆ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT