ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಭಾರತೀಯರ ಅಭಿಮಾನದ ಸಂಕೇತ ಬಸವಣ್ಣ

ಕಿಕ್ಕಿರಿದು ನೆರೆದಿದ್ದ ಬಸವಭಕ್ತರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೂಮಳೆಗರೆದು ಅಭಿನಂದನೆ
Published 8 ಮಾರ್ಚ್ 2024, 15:58 IST
Last Updated 8 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಬಸವಕಲ್ಯಾಣ: ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಲ್ಲಿನ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಅದ್ದೂರಿ ಸಮಾರಂಭದಲ್ಲಿ ಸತ್ಕರಿಸಲಾಯಿತು.

ಸುಡು ಬಿಸಿಲಲ್ಲಿ ಥೇರ ಮೈದಾನದಲ್ಲಿ ಕಿಕ್ಕಿರಿದು ನೆರೆದಿದ್ದ ಅಪಾರ ಸಂಖ್ಯೆಯ ಬಸವ ಭಕ್ತರ ನಡುವೆ ನಾಡಿನ ವಿವಿಧ ಮಠಾಧಿಪತಿಗಳು ಸಿದ್ದರಾಮಯ್ಯನವರಿಗೆ ಹೂಮಳೆಗರೆದು ಗೌರವಿಸಿದರು.

ಸಿದ್ದರಾಮಯ್ಯ ಅವರ ಮೇಲೆ ಹೂಮಳೆಗರೆದು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಎನ್.ಎಸ್.ಯು.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರ ಖಂಡ್ರೆ ಸನ್ಮಾನ ಪತ್ರ ಓದಿದರು. ಬಸವಕಲ್ಯಾಣದ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಪ್ರಾರ್ಥನಾ ಗೀತೆ ಹಾಡಿದರು. ಬೀದರ್ ನೂಪುರ ಕಲಾತಂಡದ ಉಷಾ ಪ್ರಭಾಕರ ತಂಡದವರು ವಚನ ನೃತ್ಯ ಪ್ರಸ್ತುತಪಡಿಸಿದರು.

ಬಸವಕಲ್ಯಾಣ ಅನುಭವ ಮಂಟಪ ವಿಶ್ವಬಸವಧರ್ಮ ಟ್ರಸ್ಟ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ನನಗೆ ಸಿಕ್ಕ ಈ ಚಿರಸ್ಮರಣೀಯ ಸನ್ಮಾನವನ್ನು ಏಳು ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ. ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕರಾಗಿ ಘೋಷಿಸಲಾಗಿದೆ ಎಂದು ಹೇಳಿದಾಗ ಕರತಾಡನ ಮುಗಿಲು ಮುಟ್ಟಿತು.

ಜಾತಿ, ವರ್ಗ, ಅಸಮಾನತೆ ಇಲ್ಲದ ಮನುಷ್ಯತ್ವದ ಸಮಾಜ ನಿರ್ಮಾಣ ಬಸವಣ್ಣನವರ ಗುರಿಯಾಗಿತ್ತು. ಹೀಗಾಗಿ ಬುದ್ದ, ಬಸವ, ಅಂಬೇಡ್ಕರ್ ನನಗೆ ಮಾರ್ಗದರ್ಶಕರು. ಇವರ ವಿಚಾರಗಳು ಹಿಂದೆ, ಈಗ ಹಾಗೂ ಭವಿಷ್ಯದಲ್ಲೂ ಪ್ರಸ್ತುತ ಎಂದರು.

ಕಾಯಕ, ದಾಸೋಹ ಬಸವಾದಿ ಶರಣರ ಆಶಯ. ಈ ಮೂಲಕ ಸಮಬಾಳು, ಸಮಪಾಲು ಎನ್ನುವುದನ್ನು 12 ನೇ ಶತಮಾನದಲ್ಲೇ ಸಾರಿದ್ದಾರೆ. ಬಸವಣ್ಣ ಈ ಮಣ್ಣಿನ ಸಾಂಸ್ಕೃತಿಕ ನಾಯಕ, ಸ್ಫೂರ್ತಿ ಆಗಿರುವುದರಿಂದ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದು ಕಡ್ಡಾಯಗೊಳಿಸಿದೆ ಎಂದು ಹೇಳಿದರು.

ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ಇವತ್ತಿನ ವಿದ್ಯಾವಂತರು ಕಂದಾಚಾರಗಳನ್ನು ಆಚರಿಸುತ್ತಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎನ್ನುವುದು ವಚನಗಳ ಆಶಯ. ‘ಎಲವೋ ಎಂದರೆ ನರಕ. ಅಯ್ಯಾ ಎಂದರೆ ಸ್ವರ್ಗ’ ಎಂದು ಶರಣರು ಹೇಳಿದ್ದಾರೆ. ‘ದಯೆ ಇಲ್ಲದ ಧರ್ಮ ಯಾವುದಯ್ಯ’ ಎನ್ನುವ ಮೂಲಕ ನಿಜವಾದ ಧರ್ಮ ಎಂದರೆ ಏನು ಎನ್ನುವುದನ್ನು ತಿಳಿಸಿದ್ದಾರೆ. ಶರಣರು ಸಂಸ್ಕೃತವನ್ನು ಸಾರಾಸಗಟಾಗಿ ತಿರಸ್ಕರಿಸಿ ಮೊದಲ ಬಾರಿಗೆ ಜನರ ಭಾಷೆಯಲ್ಲಿ, ಜನರಾಡುವ ಭಾಷೆಯಲ್ಲಿ ಧರ್ಮದ ಮೌಲ್ಯಗಳನ್ನು ಸಾರಿದರು. ದಯೆಯೇ ಧರ್ಮದ ಮೂಲ ಎನ್ನುವ ಮಾತು ಎಷ್ಟು ಸರಳವಾಗಿದೆ. ಇದೇ ಜನರ ಭಾಷೆ. ‘ಇವನಮ್ಮವ ಇವನಮ್ಮವ’ ಎಂದು ಎಲ್ಲರೂ ನಮ್ಮವರು ಎಂಬ ಶ್ರೇಷ್ಠ ತತ್ವವನ್ನು ಜಗತ್ತಿಗೆ ಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.

ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಬಸವ ಭಕ್ತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಬಸವ ಭಕ್ತರು
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಬಸವ ಭಕ್ತರು

ಕುರ್ಚಿ ಸಿಗದೆ ತೆರಳಿದ ಸಿ.ಎಂ

ರಾಜಕೀಯ ಕಾರ್ಯದರ್ಶಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಕಾರ್ಯದರ್ಶಿಯೂ ಆದ ಆಳಂದ ಶಾಸಕ ಬಿ.ಆರ್‌. ಪಾಟೀಲ ಅವರಿಗೆ ವೇದಿಕೆಯಲ್ಲಿ ಕುರ್ಚಿ ಮೀಸಲಿರಲಿಲ್ಲ. ಇದರಿಂದ ಅವರು ಅಲ್ಲಿಂದ ನಿರ್ಗಮಿಸಿದರು.

ಸಿ.ಎಂ. ಬರುವ ಮುಂಚೆಯೇ ವೇದಿಕೆಗೆ ಬಂದಿದ್ದ ಅವರು ಕುರ್ಚಿಗಳ ಮೇಲೆ ಬರೆದಿದ್ದ ಹೆಸರುಗಳನ್ನು ಓದುತ್ತ ಹೆಜ್ಜೆ ಹಾಕಿದರು. ಎಲ್ಲೂ ಅವರ ಹೆಸರಿನ ಕುರ್ಚಿ ಇರಲಿಲ್ಲ. ಆಯೋಜಕರು ಸಚಿವ ಈಶ್ವರ ಬಿ. ಖಂಡ್ರೆಯವರ ಮಗ ಸಾಗರ್‌ ಖಂಡ್ರೆಯವರ ಹೆಸರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ಆದರೆ ಅದಕ್ಕೊಪ್ಪದ ಅವರು ಅಲ್ಲಿಂದ ನಿರ್ಗಮಿಸಿದರು. ಸಿ.ಎಂ. ತಮ್ಮ ಭಾಷಣದಲ್ಲಿ ಬಿ.ಆರ್‌.ಪಾಟೀಲ ಹೆಸರು ಉಲ್ಲೇಖಿಸಿದಾಗ ಅವರು ಅದಾಗಲೇ ಅಲ್ಲಿಂದ ತೆರಳಿದ್ದರು.

ಬಸವಕಲ್ಯಾಣದ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸ್ಥಳದಲ್ಲಿ ಬಸವಣ್ಣನವರು ಹಾಗೂ ಸಿದ್ದರಾಮಯ್ಯನವರ ಎತ್ತರದ ಕಟೌಟ್‌ ಹಾಕಲಾಗಿತ್ತು
–ಪ್ರಜಾವಾಣಿ ಚಿತ್ರಗಳು
ಬಸವಕಲ್ಯಾಣದ ಥೇರ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸ್ಥಳದಲ್ಲಿ ಬಸವಣ್ಣನವರು ಹಾಗೂ ಸಿದ್ದರಾಮಯ್ಯನವರ ಎತ್ತರದ ಕಟೌಟ್‌ ಹಾಕಲಾಗಿತ್ತು –ಪ್ರಜಾವಾಣಿ ಚಿತ್ರಗಳು

ಬಸವಣ್ಣನ ಸರಿಸಮನಾಗಿ ಸಿದ್ದರಾಮಯ್ಯ ಕಟೌಟ್‌

ಕಾರ್ಯಕ್ರಮ ಏರ್ಪಡಿಸಿದ್ದ ಥೇರ ಮೈದಾನದಲ್ಲಿ ಬಸವಣ್ಣನವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೃಹತ್‌ ಕಟೌಟ್‌ ಪ್ರತಿಷ್ಠಾಪಿಸಲಾಗಿತ್ತು. ಎರಡೂ ಕಟೌಟ್‌ಗಳು ಸರಿಸಮಾನವಾಗಿದ್ದವು. ಕಾರ್ಯಕ್ರಮ ಸ್ಥಳದ ಕೇಂದ್ರ ಬಿಂದು ಅದಾಗಿತ್ತು. ಅದಕ್ಕೆ ಟೀಕೆ ವ್ಯಕ್ತವಾಗಿತು.

'ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಬಸವಣ್ಣನವರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹೋಲಿಕೆ ಮಾಡಿ ಬಿಂಬಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಖಂಡ್ರೆ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನು ಮೆಚ್ಚಿಸುವ ಭರಾಟೆಯಲ್ಲಿ ಮಹಾತ್ಮ ಬಸವಣ್ಣನವರ ಕಟೌಟ್ ಜೊತೆಗೆ ಸಿದ್ಧರಾಮಯ್ಯ ಅವರ ಕಟೌಟ್ ನಿಲ್ಲಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಟೀಕಿಸಿದ್ದಾರೆ.

ಭಾಷಣ ಮೊಟಕುಗೊಳಿಸಿದ ಗೊ.ರು.ಚ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭದ ನಂತರ ಅಭಿನಂದನಾ ನುಡಿಗಳನ್ನಾಡಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಮುಂದಾದರು. ಈ ಸಂದರ್ಭದಲ್ಲಿ ಕೆಲ ಮಠಾಧೀಶರು ಸಿದ್ದರಾಮಯ್ಯನವರು ಕುಳಿತಿದ್ದ ಸ್ಥಳದ ಸುತ್ತ ನೆರೆದು ಅವರನ್ನು ಸನ್ಮಾನಿಸಲು ಮುಂದಾದರು.

ಇದಕ್ಕೆ ಬೇಸರಗೊಂಡು ‘ಸ್ವಾಮೀಜಿಗಳು ದಯವಿಟ್ಟು ಆನಂತರ ಸನ್ಮಾನಿಸಬೇಕು’ ಎಂದು ಎತ್ತರದ ದನಿಯಲ್ಲಿ ಹೇಳಿದರು. ಅದಕ್ಕೆ ಯಾರೂ ಕಿವಿಗೊಡದಾಗ ಭಾಷಣ ಮೊಟಕುಗೊಳಿಸಿ ತೆರಳಿದರು. ಅವರಿಗೆ ಅಕ್ಕ ಗಂಗಾಂಬಿಕೆ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಮಾಧಾನಪಡಿಸಿದರು. ಮತ್ತೆ ಬಂದು ಭಾಷಣ ಮಾಡಿದರು. ಸಿದ್ದರಾಮಯ್ಯನವರ ಸನ್ಮಾನ ಸಮಾರಂಭದ ಸಂದರ್ಭದಲ್ಲಿ ಎಲ್ಲರೂ ಅವರ ಸತ್ಕಾರಕ್ಕಿಂತ ಅವರೊಂದಿಗೆ ಚಿತ್ರ ತೆಗೆಸಿಕೊಳ್ಳುವ ಪೈಪೋಟಿಗೆ ಇಳಿದಿದ್ದರು. ಇದು ಬಸವ ಭಕ್ತರ ಬೇಸರಕ್ಕೆ ಕಾರಣವಾಗಿತ್ತು.

‘ಐದು ವರ್ಷ ಗ್ಯಾರಂಟಿ ಮುಂದುವರೆಯುತ್ತವೆ’

‘ಬಸವಾದಿ ಶರಣರು ನುಡಿದಂತೆ ನಡೆದಿದ್ದರು. ಇದೇ ನಮ್ಮ ಸರ್ಕಾರಕ್ಕೆ ಮಾದರಿ. ನಾವು ಚುನಾವಣೆ ವೇಳೆಯಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಈಡೇರಿಸಿ ನಿಮ್ಮ ಮತಕ್ಕೆ ಗೌರವ ನೀಡಿ ಮತ್ತೆ ನಿಮ್ಮ ಮುಂದೆ ಬಂದು ನಿಂತಿದ್ದೇವೆ. ಕೆಲವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಮುಂದಿನ ವರ್ಷಕ್ಕಾಗಿ ₹54 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಹಣ ತೆಗೆದಿರಿಸಿದ್ದೇವೆ. ಐದೂ ವರ್ಷ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಅಭಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT