ಶುಕ್ರವಾರ, ಮೇ 27, 2022
22 °C
ಬಸವೇಶ್ವರ ಜಾತ್ರೆಯ ಸಮಾರೋಪ: 12 ಗಂಟೆಗಳವರೆಗೆ ನಡೆದ ಮೆರವಣಿಗೆ

ಜಯ ಘೋಷದ ನಡುವೆ ಮಹಾ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಮಹಾತ್ಮ ಬಸವೇಶ್ವರ ಮಹಾರಾಜ್ ಕೀ ಜೈ’ ಎಂಬ ಜಯಘೋಷದ ಮಧ್ಯೆ ನಗರದ ತೇರು ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ಬಸವೇಶ್ವರರ ರಥೋತ್ಸವ ನಡೆಯಿತು.

ನಗರದ ಮಧ್ಯದಲ್ಲಿನ ಬಸವೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ 12 ಗಂಟೆಗಳ ನಂತರ ಮುಖ್ಯ ರಸ್ತೆಯ ಮೂಲಕ ತೇರು ಮೈದಾನ ತಲುಪಿತು. ವಿಶೇಷ ವ್ಯವಸ್ಥೆಯ ವಿದ್ಯುತ್ ದೀಪಗಳ ಬೆಳಕಿನಲ್ಲಿ ಪುಷ್ಪಗಳಿಂದ ಅಲಂಕೃತವಾದ ಬೆಳ್ಳಿಯ ಪಲ್ಲಕ್ಕಿ, ತೊಟ್ಟಿಲು, ನುಲಿ ಚಂದಯ್ಯನವರ ಪಲ್ಲಕ್ಕಿಯ ಜತೆಗೆ ನಂದಿಧ್ವಜಗಳು ಮೆರವಣಿಗೆಯಲ್ಲಿ ಸಾಗಿದವು. ಒಂದು ನಂದಿಧ್ವಜಕ್ಕೆ ಬಣ್ಣ ಬಣ್ಣದ ಪತಾಕೆಗಳನ್ನು ಕಟ್ಟಿ ವಿಶೇಷವಾಗಿ ಸಿಂಗರಿಸಲಾಗಿತ್ತು. ಎಲ್ಲ ನಂದಿ ಧ್ವಜಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ಮೊದಲ ದಿನಕ್ಕಿಂತ ಈ ದಿನ ಮೆರವಣಿಗೆಯಲ್ಲಿ ಅತ್ಯಧಿಕ ಜನರು ಪಾಲ್ಗೊಂಡಿದ್ದರು. ಸಾಂಪ್ರದಾಯಿಕ ಬಿಳಿ ಬಟ್ಟೆಗಳನ್ನು ತೊಟ್ಟಿದ್ದ ಯುವಕರು ನಂದಿ ಧ್ವಜಗಳನ್ನು ತಮ್ಮ ಹೊಟ್ಟೆಯ ಮೇಲೆ ಕಟ್ಟಿದ್ದ ಪಟ್ಟಿಗೆ ಸಿಕ್ಕಿಸಿಕೊಂಡು ಒಯ್ಯುತ್ತಿರುವುದನ್ನು ಅನೇಕರು ಬೆರಗಾಗಿ ನೋಡುತ್ತಿದ್ದರು. ವಿವಿಧ ವಾದ್ಯ ಮೇಳಗಳಿದ್ದವು. ಕಲಾ ತಂಡಗಳು ಪಾಲ್ಗೊಂಡಿದ್ದವು. ವಾಡಿಕೆಯಂತೆ ಪಲ್ಲಕ್ಕಿ ಮನೆ ಎದುರು ಬಂದಾಗ ಕುಟುಂಬ ಸಮೇತರಾಗಿ ನೀರೆರೆದು, ಕಾಯಿ, ಕರ್ಪೂರ ಅರ್ಪಿಸಿ ದರ್ಶನ ಪಡೆದರು.

ನಂತರ ರಥೋತ್ಸವ ಜರುಗಿತು. ರಥ ಮುಂದಕ್ಕೆ ಸಾಗುತ್ತಿದ್ದಂತೆಯೇ ಅದರ ಮೇಲೆ ನಾಣ್ಯ, ಹಣ್ಣು ಎಸೆಯಲಾಯಿತು. ಜಯಘೋಷ ಕೂಗಲಾಯಿತು. ದೇವಸ್ಥಾನ ಸಮಿತಿಯವರು ಮಧ್ಯ ರಾತ್ರಿ ರಥೋತ್ಸವ ಜರುಗಲಿದೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದರಿಂದ ರಾತ್ರಿಯಿಂದಲೇ ಭಕ್ತರು ತೇರು ಮೈದಾನದಲ್ಲಿ ಜಮಾಯಿಸಿದ್ದರು. ಆದರೆ, ಮೆರವಣಿಗೆ ತಡವಾಗಿ ಮೈದಾನ ತಲುಪಿತು.

ಶಾಸಕ ಶರಣು ಸಲಗರ, ತಹಶೀಲ್ದಾರ್ ಸಾವಿತ್ರಿ ಸಲಗರ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಅಶೋಕ ನಾಗರಾಳೆ ಹಾಗೂ ಪ್ರಮುಖರಾದ ರೇವಣಪ್ಪ ರಾಯವಾಡೆ, ಬಸವರಾಜ ಬಾಲಿಕಿಲೆ, ಸುಭಾಷ ಹೊಳಕುಂದೆ, ಬಸವರಾಜ ಕೋರಕೆ, ಮಲ್ಲಿಕಾರ್ಜುನ ಕುರಕೋಟೆ, ಅನಿಲಕುಮಾರ ಮೆಟಗೆ, ಕಾಶಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ಮಲ್ಲಿಕಾರ್ಜುನ ಚಿರಡೆ, ಬದ್ರಿನಾಥ ಪಾಟೀಲ, ಬಸವರಾಜ ತೊಂಡಾರೆ, ವಿಜಯಲಕ್ಷ್ಮಿ ಗಡ್ಡೆ ಪಾಲ್ಗೊಂಡಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಸಹ ಆಯೋಜಿಸಲಾಗಿತ್ತು. ಸಂಗೀತಗಾರರಾದ ರಾಧಾ ಇವಳೆ, ನವಲಿಂಗಕುಮಾರ ಪಾಟೀಲ ಸಂಗೀತ ಪ್ರಸ್ತುತಪಡಿಸಿದರು. ತುಮಕೂರಿನ ಸಾಗರ ಕಲಾ ತಂಡದವರು ವಚನ ರೂಪಕ ಪ್ರಸ್ತುತಪಡಿಸಿದರು.

ಮೆರವಣಿಗೆಯ ಮಾರ್ಗದಲ್ಲಿ ಅಲ್ಲಲ್ಲಿ ಮುಸ್ಲಿಂ ಸಂಘಟನೆಗಳ ಯುವಕರು ಕುಡಿಯುವ ನೀರು ಹಾಗೂ ಪಾನೀಯದ ವ್ಯವಸ್ಥೆ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು