ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ಸಮೀಕ್ಷೆಯಲ್ಲಿ ಉತ್ತಮ ಜಿಲ್ಲೆಯಾಗಲಿ

ಜಿಲ್ಲಾಧಿಕಾರಿ ರಾಮಚಂದ್ರನ್ ಅಧಿಕಾರಿಗಳಿಗೆ ನಿರ್ದೇಶನ
Last Updated 12 ಆಗಸ್ಟ್ 2020, 15:17 IST
ಅಕ್ಷರ ಗಾತ್ರ

ಬೀದರ್: ‘ಬೆಳೆ ಸಮೀಕ್ಷೆಯಲ್ಲಿ ಬೀದರ್‌ ಅತ್ಯುತ್ತಮ ಜಿಲ್ಲೆಯಾಗಿ ಗುರುತಿಸಿಕೊಳ್ಳಬೇಕು. ಈ ದಿಸೆಯಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಮೇಲ್ಚಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪ್ರಸ್ತಕ ಸಾಲಿನಲ್ಲಿ ಕೂಡ ಬೆಳೆ ಸಮೀಕ್ಷೆ ಗುರಿ ಸಾಧನೆಗೆ ಒತ್ತುಕೊಡಬೇಕು. ರೈತರಿಲ್ಲದೆ ನಾವಿಲ್ಲ. ಆಹಾರ ಸಂರಕ್ಷಣೆ ಮುಖ್ಯವಾದ ಕೆಲಸ. ಮಣ್ಣೇ ನಮಗೆ ಜೀವನಾಧಾರ. ಮೊದಲು ರೈತರಿಗೆ ಆದ್ಯತೆ ಕೊಡೋಣ. ಅವರ ಅಳಲು ಕೇಳೋಣ. ಅವರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಸಹಾಯ ಮಾಡೋಣ’ ಎಂದು ತಿಳಿಸಿದರು.

‘ರೈತರು ನಡೆಸುವ ಬೆಳೆ ಸಮೀಕ್ಷೆಯನ್ನು ಇಲಾಖೆಯ ಮೇಲ್ವಿಚಾರಕರು ಸರಿಯಾಗಿ ಪರಿಶೀಲಿಸಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶೀಘ್ರ ಕ್ವಾಲಿಟಿ ಅಸೂರೆನ್ಸ್ ಆಫೀಸರ್ ನೇಮಕವಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಆಗಸ್ಟ್ 24ರ ವರೆಗೆ ಬೆಳೆ ಸಮೀಕ್ಷೆ ಮಾಡಲು ಅವಕಾಶವಿದೆ. ಆದ್ದರಿಂದ ರೈತರು ಪ್ಲೇಸ್ಟೋರ್ ಮೂಲಕ ಬೆಳೆ ಸಮೀಕ್ಷೆ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ತಮ್ಮ ಹೊಲದಲ್ಲಿ ಸಮೀಕ್ಷೆ ನಡೆಸಬೇಕು’ ಎಂದು ಸಭೆಯ ಮೂಲಕ ಜಿಲ್ಲಾಧಿಕಾರಿ ಜಿಲ್ಲೆಯ ರೈತರಿಗೆ ಮನವಿ ಮಾಡಿದರು.

‘ರೈತರು ಮಾಡಿದ ಬೆಳೆ ಸಮೀಕ್ಷೆ ದತ್ತಾಂಶವು ಮುಂಬರುವ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಬೆಂಬಲ ಬೆಲೆ, ಬೆಳೆವಿಮೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಸೌಲಭ್ಯ ಪಡೆಯಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಉತ್ಪಾದಕ ಸಂಸ್ಥೆಗಳ ರಚನೆ ಹಾಗೂ ವ್ಯಾಪಾರ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಘಟಿತರಾಗಿ ರೈತ ಉತ್ಪಾದಕ ಸಂಸ್ಥೆಗಳನ್ನು ರಚನೆ ಮಾಡಿಕೊಳ್ಳಬೇಕು. ಈ ಮೂಲಕ ಹೆಚ್ಚಿನ ಬೆಲೆ ಪಡೆಯಲು ಪ್ರಯತ್ನಿಸಬೇಕು. ಇದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆ ಮಾಡಬಹುದು’ ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

‘ಯಾವುದೇ ಸಹಾಯವನ್ನು ನಾವು ಸಕಾಲಕ್ಕೆ ಮಾಡಿದರೆ ಮಾತ್ರ ಅದನ್ನು ಜನರು ನೆನಪಿನಲ್ಲಿಡುತ್ತಾರೆ. ಸಕಾಲಕ್ಕೆ ಸಿಗದ ನ್ಯಾಯದಿಂದ ಯಾವ ಪ್ರಯೋಜನವೂ ಆಗದು. ಇಂತಹ ಸೂಕ್ಷ್ಮ ವಿಷಯಗಳನ್ನು ಅಧಿಕಾರಿಗಳೆಲ್ಲರೂ ಅರಿಯಬೇಕು’ ಎಂದು ಹೇಳಿದರು.

ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ ಬಿರಾದಾರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ, ಕೃಷಿ ಇಲಾಖೆಯ ಅಧಿಕಾರಿಗಳಾದ ವಿಜಯಕುಮಾರ, ಗಿರೀಶ, ಕೃಷಿ ಮಾರುಕಟ್ಟೆಯ ಅಧಿಕಾರಿ ತುಳಸಿರಾಮ ಲಾಖೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT