ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ಕೋಚಿಂಗ್ ಕೇಂದ್ರಗಳಿಗೆ ಬಿಇಒ ನೋಟಿಸ್

ಬಸವಕಲ್ಯಾಣ: 6 ಕೇಂದ್ರಗಳಿಗೆ ದಿಢೀರ್‌ ಭೇಟಿ, ಪರಿಶೀಲನೆ
Published 26 ಜೂನ್ 2024, 16:13 IST
Last Updated 26 ಜೂನ್ 2024, 16:13 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದಲ್ಲಿನ ಅನಧಿಕೃತ 6 ಕೋಚಿಂಗ್ ಕೇಂದ್ರಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರು ಅವರು ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ತಕ್ಷಣವೇ ಕೇಂದ್ರ ಮುಚ್ಚುವಂತೆ ಸೂಚಿಸಿದ್ದಾರೆ.

ನಗರದ ಹಿರೇಮಠ ಓಣಿಯಲ್ಲಿನ ಮೂರು, ಜೈಶಂಕರ ಓಣಿಯಲ್ಲಿನ ಒಂದು, ಶಿವಪುರ ರಸ್ತೆಯಲ್ಲಿನ ಎರಡು ಕೇಂದ್ರಗಳಿಗೆ ಅವರು ಭೇಟಿ ನೀಡಿ ನೋಟಿಸ್ ಜಾರಿಗೊಳಿಸಿದರು. ಬಸವಪ್ರಿಯಾ, ಜ್ಞಾನಸುಧಾ, ವಿನಾಯಕ, ರವೀಂದ್ರನಾಥ, ಚಾಣಕ್ಯ, ಸರಸ್ವತಿ ಎಂಬ ಕೋಚಿಂಗ್ ಕೇಂದ್ರಗಳಿಗೆ ಹೋಗಿ ಪರಿಶೀಲಿಸಿದರು. ಇದರಲ್ಲಿ ಒಂದರ ಬಾಗಿಲು ಮುಚ್ಚಿತ್ತು ಎಂದು ತಿಳಿದು ಬಂದಿದೆ.

ಕೇಂದ್ರಗಳ ಮುಖ್ಯಸ್ಥರಿಗೆ ಸ್ಥಳದಲ್ಲಿಯೇ ನೀಡಿದ ನೋಟಿಸ್‌ನಲ್ಲಿ ‘ತಾವು ಅನಧಿಕೃತ ಶಾಲೆ ಮತ್ತು ಕೊಚಿಂಗ್ ಸೆಂಟರ್‌ ನಡೆಸುತ್ತಿರುವುದು ಇಂದು ದಾಳಿ ಮಾಡಿದ ಸಂದರ್ಭದಲ್ಲಿ ತಿಳಿದು ಬಂದಿದೆ. ಸರ್ಕಾರದ ಅನುಮತಿ ಇಲ್ಲದೆ ನಿಯಮ ಬಾಹಿರವಾಗಿ ಶಾಲಾ ಮಕ್ಕಳನ್ನು ಕೂಡಿಸಿಕೊಂಡು ಕೋಚಿಂಗ್ ಅಥವಾ ಅನಧಿಕೃತ ಶಾಲೆ ನಡೆಸುವುದು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಗೆ ವಿರುದ್ಧವಾಗಿದೆ‘ ಎಂದು ಹೇಳಲಾಗಿದೆ.

‘ಇದಲ್ಲದೇ ಮಕ್ಕಳಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸದೇ ಒಂದೇ ಕೊಠಡಿಯಲ್ಲಿ ಮಕ್ಕಳನ್ನು ಕೂಡಿ ಹಾಕಿರುವುದು ಕಂಡುಬಂದಿದೆ. ಈ ತಮ್ಮ ಉದ್ಧಟತನಕ್ಕೆ ಏಕೆ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬಾರದು. ನಾಳೆಯಿಂದ ಕೊಚಿಂಗ್‌ ಅಥವಾ ಅನಧಿಕೃತ ಶಾಲೆ ಮುಚ್ಚದಿದ್ದರೆ ನಿಮ್ಮ ಮೇಲೆ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು‘ ಎಂದು ಸಹ ಬಿಇಒ ಅವರು ಎಚ್ಚರಿಕೆ ನೀಡಿದ್ದಾರೆ. ಸಂಪನ್ಮೂಲ್ ವ್ಯಕ್ತಿಗಳಾದ ನಾಸೇರ್ ಪಟೇಲ್, ಗಿರಿಧರ ಧಾನೂರೆ, ಸೂರ್ಯಕಾಂತ ಬೇಲೂರೆ ಇದ್ದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ಅವರು ಪತ್ರಕರ್ತರೊಂದಿಗೆ ಮಾತನಾಡಿ, `ಶಾಲಾ ಅವಧಿಯಲ್ಲಿ ಕೋಚಿಂಗ್ ನಡೆಸುವುದಕ್ಕೆ ಆಸ್ಪದವಿಲ್ಲ. ಅನುಮತಿ ಪಡೆದರೂ ಮೂಲಸೌಲಭ್ಯ ಒದಗಿಸಬೇಕಾಗುತ್ತದೆ' ಎಂದರು.

ಬಸವಕಲ್ಯಾಣ ನಗರದಲ್ಲಿನ ಕೋಚಿಂಗ್ ಕೇಂದ್ರವೊಂದಕ್ಕೆ ಬಿಇಒ ಸಿದ್ದವೀರಯ್ಯ ಬುಧವಾರ ಭೇಟಿ ನೀಡಿದರು
ಬಸವಕಲ್ಯಾಣ ನಗರದಲ್ಲಿನ ಕೋಚಿಂಗ್ ಕೇಂದ್ರವೊಂದಕ್ಕೆ ಬಿಇಒ ಸಿದ್ದವೀರಯ್ಯ ಬುಧವಾರ ಭೇಟಿ ನೀಡಿದರು

ಸರ್ಕಾರಿ ಶಾಲಾ ಶಿಕ್ಷಕರು ಯಾರೂ ಕೋಚಿಂಗ್ ನಡೆಸುತ್ತಿಲ್ಲ. ಖಾಸಗಿಯವರು ಇದಕ್ಕಾಗಿ ಡಿಡಿಪಿಐ ಅವರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸಿದ್ದವೀರಯ್ಯ ರುದನೂರು ಬಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT