ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಳೆ ಹಾನಿ: ಶೀಘ್ರ ವರದಿ ಸಲ್ಲಿಸಿ’

ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ತುರ್ತು ಸಭೆ
Last Updated 1 ಸೆಪ್ಟೆಂಬರ್ 2021, 3:58 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನಲ್ಲಿ ವ್ಯಾಪಕ ಮಳೆ ಆಗಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ ಸೇರಿ ಮತ್ತಿತರ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಮೂರು ದಿನದೊಳಗೆ ಜಿಲ್ಲಾಡಳಿತ, ಸರ್ಕಾರಕ್ಕೆ ಹಾನಿಯಾದ ಸಮಗ್ರ ವರದಿ ಸಲ್ಲಿಸುವಂತೆ ಶಾಸಕ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆಯಿಂದ ಸುಮಾರು 5 ಸಾವಿರಕ್ಕೂ ಅಧಿಕ ಹೇಕ್ಟರ್ ಬೆಳೆ ಹಾನಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಕಟಾವಿಗೆ ಬಂದಿದ್ದ ಹೆಸರು ಬೆಳೆ ಕೊಚ್ಚಿ ಹೋಗಿದೆ. ಸೋಯಾ ಅವರೆ, ಉದ್ದು, ತೊಗರಿ ಬೆಳೆ ಹಾಗೂ ತೋಟಗಾರಿಕೆಯ ಪಪ್ಪಾಯಿ, ಬಾಳೆಹಣ್ಣು, ತರಕಾರಿ ಬೆಳೆಗಳು ಹಾನಿ ಸಂಭವಿಸಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾವದಗಿ, ಏಣಕೂರ, ಮಾವಿನಹಳ್ಳಿ ಸೇರಿ ಮುಂತಾದ ಕಡೆಗಳಲ್ಲಿ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಮನೆಗಳು ಶಿಥಿಲಗೊಂಡಿವೆ. ಸುಮಾರು 200-300 ಮನೆ ಮತ್ತು ಗೋಡೆಗಳು ಕುಸಿತ ಕಂಡು ವಾಸಕ್ಕೆ ಸೂರು ಇಲ್ಲದೇ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಶಾಲಾ ಮತ್ತು ಅಂಗನವಾಡಿ ಕೋಣೆಗಳಿಗೆ ಮಳೆ ನೀರು ನುಗ್ಗಿ ಹಾನಿ ಆಗಿರುವ ಬಗ್ಗೆ ಮಾಹಿತಿ ಇದೆ. ಖಟಕ್ ಚಿಂಚೋಳಿ, ಏಣಕೂರ, ಬರ್ದಾಪೂರ, ಜಮಖಂಡಿ ಸೇರಿ ಮುಂತಾದ ಕಡೆಗಳಲ್ಲಿ ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಹಲವು ಕಡೆಗಳಲ್ಲಿ ಕಾಲುವೆಗಳು ಬಿರುಕು ಬಿಟ್ಟಿವೆ. ಜಾನುವಾರು, ಕುರಿ, ಮೇಕೆಗಳು ಹರಿದು ಕೊಂಡು ಹೋಗಿವೆ. ಹಲವು ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳು ಸುಟ್ಟು ವಿದ್ಯುತ್ ಕಡಿತಗೊಂಡು ಜನರು ಕತ್ತಲಲ್ಲೇ ದಿನ ಕಳೆಯುವಂತಾಗಿದೆ ಎಂದರು.

ತಕ್ಷಣವೇ ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ, ತಾಲ್ಲೂಕು ಪಂಚಾಯಿತಿ, ಲೋಕೋಪಯೋಗಿ, ಪಂಚಾಯತ್ ರಾಜ್, ಶಿಶು ಅಭಿವೃದ್ಧಿ, ಜೆಸ್ಕಾಂ, ಸಣ್ಣ ನೀರಾವರಿ, ಶಿಕ್ಷಣ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಮೂರು ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಗಡವು ನೀಡಿದರು. ಅಧಿಕಾರಿಗಳು ಯಾವುದಕ್ಕೂ ವಿಳಂಬ ಮಾಡದೇ ಜನರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಬೇಕು. ಏನೇ ಸಮಸ್ಯೆ ಇದ್ದರೂ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ತಹಶೀಲ್ದಾರ್‌ ಕೀರ್ತಿ ಚಾಲಕ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT