ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಕಾಲುವೆ ಒಡೆದು ಕೊಚ್ಚಿಕೊಂಡು ಹೋದ ಬೆಳೆ

ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ, ಜಮೀನುಗಳು ಜಲಾವೃತ: 12 ಮನೆಗಳ ಗೋಡೆ ಕುಸಿತ
Last Updated 11 ಸೆಪ್ಟೆಂಬರ್ 2022, 2:34 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ಬೀದರ್‌, ಭಾಲ್ಕಿ, ಹುಲಸೂರು ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಔರಾದ್‌ ತಾಲ್ಲೂಕಿನ ಮಾನೂರ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಬೀದರ್‌ ತಾಲ್ಲೂಕಿನಲ್ಲಿ ಎರಡು, ಹುಮನಾಬಾದ್ ತಾಲ್ಲೂಕಿನಲ್ಲಿ ಮೂರು ಹಾಗೂ ಏಳು ಮನೆಗಳು ಭಾಗಶಃ ಕುಸಿದಿವೆ.

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಸಮೀಪದ ದಾಡಗಿ ಗ್ರಾಮದಲ್ಲಿ ಕಾರಂಜಾ ಜಲಾಶಯದ ಚಿಕ್ಕ ಕಾಲುವೆ ಒಡೆದು ಹೊಲಗಳಿಗೆ ನೀರು ನುಗ್ಗಿ ಬೆಳೆ ಕೊಚ್ಚಿಕೊಂಡು ಹೋಗಿದೆ.

ಬೀದರ್ ತಾಲ್ಲೂಕಿನ ವಿಳಾಸಪುರ ಸಮೀಪದ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಮರಕಲ್‌ ಹಾಗೂ ಚಿಕ್ಕಪೇಟೆಯಲ್ಲಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ಆಹಾರಧಾನ್ಯಗಳು ನೀರು ಪಾಲಾಗಿವೆ.

ಮನೆಗಳಲ್ಲಿ ಒಂದೂವರೆ ಅಡಿ ನೀರು ನಿಂತಿರುವ ಕಾರಣ ಕುಟುಂಬಗಳು ಕಂಗಾಲಾಗಿವೆ. ನೀರು ಹೊರಗೆ ತೆಗೆಯಲು ಕುಟುಂಬಗಳು ಭಾರಿ ಪ್ರಯಾಸ ಪಡಬೇಕಾಯಿತು.

ಅಲಿಯಾಬಾದ್‌ನಲ್ಲಿ ಮಳೆಯ ಅಬ್ಬರಕ್ಕೆ ಎರಡು ಮನೆಗಳು ಭಾಗಶಃ ಕುಸಿದಿವೆ.

ಶಾಸಕ ರಹೀಂ ಖಾನ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೀದರ್‌ನ ಓಲ್ಡ್‌ಸಿಟಿಯಲ್ಲಿ ಮಳೆಗೆ ಗಟಾರಗಳು ಉಕ್ಕಿ ಹರಿದವು. ಕೆಲವು ಓಣಿಗಳ ರಸ್ತೆಗಳ ಮೇಲೆ ಮಳೆ ನೀರು ಹಳ್ಳದಂತೆ ಹರಿಯಿತು. ಚೌಬಾರಾದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ.

ಓಲ್ಡ್‌ಸಿಟಿಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೆಇಬಿ ಮುಂಭಾಗದ ರಸ್ತೆ, ತಾಯಿ–ಮಗು ವೃತ್ತದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು.

ಶುಕ್ರವಾರ ರಾತ್ರಿಯಿಂದ ಸುರಿದಿರುವ ಮಳೆ ಶನಿವಾರ ಬೆಳಿಗ್ಗೆ ಎರಡು ತಾಸು ಬಿಡುವು ನೀಡಿತ್ತು. ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಧಾರಾಕಾರವಾಗಿ ಸುರಿಯಿತು. ಬೀದರ್‌, ಭಾಲ್ಕಿ, ಹುಲಸೂರು ಹಾಗೂ ಹುಮನಾಬಾದ್ ತಾಲ್ಲೂಕಿನ ಹೊಲಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ.

ಮೂರು ಮನೆ ಕುಸಿತ

ಹುಮನಾಬಾದ್: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶನಿವಾರ ಸಾಧಾರಣ ಮಳೆ ಸುರಿಯಿತು.

ಪಟ್ಟಣದಲ್ಲಿ 3.5 ಮಿ.ಮೀ, ದುಂಬಾಲುಗುಂಡಿ 4 ಹಾಗೂ ಹಳ್ಳಿಖೇಡ್ ಬಿ ಪಟ್ಟಣದಲ್ಲಿ 4.6 ಮಿ.ಮೀ ಮಳೆ ದಾಖಲಾಗಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ಸುಲ್ತಾನಬಾದ್‌ ಹಾಗೂ ಹಳ್ಳಿಖೇಡ್ (ಕೆ) ಗ್ರಾಮಗಳಲ್ಲಿ ತಲಾ ಒಂದು ಮನೆಯ ಗೋಡೆ ಕುಸಿದಿದೆ ಎಂದು ತಹಶೀಲ್ದಾರ್ ಡಾ.ಪ್ರದೀಕುಮಾರ್ ಹಿರೇಮಠ ಅವರು ತಿಳಿಸಿದರು.

ಪರಿಹಾರ ವಿತರಣೆ

ಚಿಟಗುಪ್ಪ: ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟ ದತ್ತು ಕುಟುಂಬಕ್ಕೆ ಶಾಸಕ ರಾಜಶೇಖರ ಪಾಟೀಲ ಅವರು ₹5 ಲಕ್ಷದ ಪರಿಹಾರದ ಚೆಕ್‌ ವಿತರಿಸಿದರು.

ನಂತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮಾತನಾಡಿ,‘ನೈಸರ್ಗಿಕ ವಿಕೋಪಗಳು ಮಾನವನ ಬದುಕನ್ನು ನಾಶ ಮಾಡುತ್ತವೆ. ಇಂಥ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆ ಅಗತ್ಯ. ನಾಗರಿಕರು ಎಚ್ಚರ ವಹಿಸಬೇಕು’ ಎಂದರು.

ತಹಶೀಲ್ದಾರ್‌ ರವೀಂದ್ರ ದಾಮಾ, ಕಂದಾಯ ನಿರೀಕ್ಷಕ ಮಹಾರುದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಣಿಕಪ್ಪ ಹಾಗೂ ಗ್ರಾಮದ ಗಣ್ಯರು ಇದ್ದರು.

ಖಟಕಚಿಂಚೋಳಿ: ರೈತರಿಗೆ ಸಂಕಷ್ಟ

ಖಟಕಚಿಂಚೋಳಿ: ಹೋಬಳಿಯ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾಳಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಶನಿವಾರವೂ ಮಳೆ ಮುಂದುವರಿಯಿತು.

ಸಮೀಪದ ದಾಡಗಿ ಗ್ರಾಮದಲ್ಲಿರುವ ಕಾರಂಜಾ ಜಲಾಶಯದ ಕಾಲುವೆ ಸಂಪೂರ್ಣವಾಗಿ ಒಡೆದು ಹೋಗಿದೆ. ಇದರಿಂದ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿ ರಾಶಿಗೆ ಬಂದಿದ್ದ ಬೆಳೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ.

‘ಎರಡು ವರ್ಷಗಳಿಂದ ಈ ಕಾಲುವೆ ಹಾಳಾಗಿದೆ. ಆದರೆ ಯಾವೊಬ್ಬ ಅಧಿಕಾರಿಯೂ ಇದರ ಬಗ್ಗೆ ಯೋಚಿಸದೇ ಗಾಢ ನಿದ್ರೆಗೆ ಜಾರಿದ್ದಾರೆ. ಇದರಿಂದ ಪ್ರತಿ ಬಾರಿ ಮಳೆ ಸುರಿದಾಗ ಸುತ್ತ ಮುತ್ತಲಿನ ಹೊಲದವರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ನಾಗಣ್ಣ ವಾಲೆ ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ಕಟ್ಟಿತುಗಾಂವ್ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಗೆ ಕೆಲ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಮನೆಗಳಲ್ಲಿನ ಆಹಾರ ಸಾಮಗ್ರಿ, ಬಟ್ಟೆ ಎಲ್ಲವೂ ಹಾಳಾಗಿವೆ ಎಂದು ಗ್ರಾಮದ ಪರಮೇಶ್ವರ ಚಟ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೋಬಳಿಯ ದಾಡಗಿ, ಮದಕಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮುಂಗಾರಿನ ಬೆಳೆಗಳಾದ ಹೆಸರು, ಉದ್ದು ಕಟಾವಿಗೆ ಬಂದಿವೆ.

ಆದರೆ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಹೊಲದಲ್ಲಿಯೇ ಬೆಳೆಗಳು ಕೊಳೆಯು ತ್ತಿವೆ ಎಂದು ರೈತ ಅನಿಲ ಜಾಧವ ತಿಳಿಸುತ್ತಾರೆ.

ಮಳೆಯಿಂದ ಜಿಲ್ಲೆಯ ರೈತರು ಮತ್ತು ನಾಗರಿಕರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೇ ಮಳೆ ಹಾನಿ ಸಮೀಕ್ಷೆ ನಡೆಸಿ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ಮಳೆ ಹಾನಿ: ಶಾಸಕರಿಂದ ಪರಿಶೀಲನೆ

ಜನವಾಡ: ಬೀದರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ರಹೀಂಖಾನ್ ಭೇಟಿ ನೀಡಿ ಪರಿಶೀಲಿಸಿದರು.

ಅಲಿಯಾಬಾದ್ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ಬಿದ್ದ ಶರಣಮ್ಮ ತಿಪ್ಪಣ್ಣ, ಸಿಮೊನ್ ಬಾಬು ಅವರ ಮನೆಗೆ ಭೇಟಿ ನೀಡಿದರು. ವಿಳಾಸಪುರ ಸಮೀಪ ಮಳೆ ನೀರಿನಲ್ಲಿ ಮುಳುಗಿದ ಸೇತುವೆಯನ್ನು ವೀಕ್ಷಿಸಿದರು.

ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ವಿಳಾಸಪುರ ಸೇತುವೆಗೆ ಹಾನಿ ಉಂಟಾಗಿದೆ. ನೀರು ಸೇತುವೆ ಮೇಲಿಂದ ಹರಿಯುತ್ತಿರುವುದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ ಎಂದು ಶಾಸಕ ರಹೀಂಖಾನ್ ಸುದ್ದಿಗಾರರಿಗೆ ತಿಳಿಸಿದರು.

ಹೊಸ ಸೇತುವೆ ನಿರ್ಮಾಣಕ್ಕೆ ₹1.5 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ವರ್ಕ್ ಆರ್ಡರ್‌ಗೆ ಸ್ವಲ್ಪ ಸಮಯ ಹಿಡಿಯಲಿದೆ ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ, ಮಳೆಯಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲಿದ್ದೇನೆ. ಜನರ ನೋವಿಗೆ ಸ್ಪಂದಿಸಲಿದ್ದೇನೆ. ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ತಿಳಿಸಿದರು.

ಸಿಡಿಲು ಬಡಿದು ಎತ್ತು ಸಾವು

ಔರಾದ್: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆಯಿಂದ ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ.

‘ಬೋರಾಳದಲ್ಲಿ ಕವಿತಾ ಧನರಾಜ ಮೇತ್ರೆ ಎಂಬುವರ ಮನೆ ಗೋಡೆ ಕುಸಿದಿದೆ. ಗ್ರಾಮ ಲೆಕ್ಕಿಗರು ಅಲ್ಲಿಗೆ ಹೋಗಿ ಮಾಹಿತಿ ಪಡೆದಿದ್ದಾರೆ. ಶನಿವಾರ ಸಿಡಿಲು ಬಡಿದು ಮಾನೂರ (ಕೆ) ಗ್ರಾಮದ ಮಾರುತಿ ರಾಮಚಂದ್ರ ಪಾಂಡ್ರೆ ಅವರ ಎತ್ತು ಮೃತಪಟ್ಟಿದೆ’ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ ತಾಲ್ಲೂಕಿನ ದಾಬಕಾದಲ್ಲಿ 41.2 ಮಿ.ಮೀ ಅತಿ ಹೆಚ್ಚು ಮಳೆ ದಾಖಲಾಗಿದೆ. ಉಳಿದಂತೆ ಔರಾದ್-22.5, ಚಿಂತಾಕಿ-13, ಸಂತಪುರ-8, ಕಮಲನಗರ-21, ಠಾಣಾಕುಶನೂರ-9.2 ಮಿ.ಮೀ ಮಳೆ ದಾಖಲಾಗಿದೆ.

ಹಾಳಾದ ರಸ್ತೆ: ಔರಾದ್-ಸದಾಶಿವಗಢ ರಾಜ್ಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಔರಾದ್-ಬೆಳಕುಣಿ ನಡುವಿನ ರಸ್ತೆ ಮಳೆಗೆ ಕಿತ್ತು ಹೋಗಿದೆ. ಮೊದಲೇ ಈ ರಸ್ತೆ ಹಾಳಾಗಿದೆ. ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಈ ರಸ್ತೆ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಮುಂಗನಾಳ, ಬೆಳಕುಣಿ, ಹೆಡಗಾಪುರ, ಠಾಣಾಕುಶನೂರ ಸೇರಿದಂತೆ ವಿವಿಧ ಊರಿಗೆ ತೆರಳುವ ಜನ ಸಂಕಷ್ಟ ಎದುರಿಸುತ್ತಿದ್ದಾರೆ.

‘ನಿನ್ನೆ ರಾತ್ರಿ ಇಬ್ಬರು ರಸ್ತೆ ಮೇಲಿನ ಹೊಂಡದಲ್ಲಿ ಬಿದ್ದು ಕೈ–ಕಾಲು ಮುರಿದುಕೊಂಡಿದ್ದಾರೆ. ಈ ರಸ್ತೆ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಬೆಳಕುಣಿ ನಿವಾಸಿ ಜಾವಿದ್, ಅರವಿಂದ ಮಲ್ಲಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT