ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

15 ದಿನಗಳಲ್ಲಿ ಎಲ್ಲ ಮನವಿಗಳ ವಿಲೇವಾರಿ: ಜಿಲ್ಲಾಧಿಕಾರಿ

ಔರಾದ್: ಜನಸ್ಪಂದನಕ್ಕೆ ಮನವಿಗಳ ಮಹಾಪೂರ
Published 21 ಜೂನ್ 2024, 16:23 IST
Last Updated 21 ಜೂನ್ 2024, 16:23 IST
ಅಕ್ಷರ ಗಾತ್ರ

ಔರಾದ್: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನದಲ್ಲಿ ಜನರಿಂದ ಮನವಿಗಳ ಮಹಾಪೂರವೇ ಹರಿದು ಬಂತು.

ವಿವಿಧ ಗ್ರಾಮಗಳ ಜನ ಬೆಳಿಗ್ಗೆಯಿಂದಲೇ ತಹಶೀಲ್ದಾರ್ ಕಚೇರಿ ಕಡೆ ಬರ ತೊಡಗಿದರು. ಹೆಸರು ನೊಂದಾಯಿಸಿ ಸಭೆಗೆ ಹಾಜರಾಗಲು ಸಾಲುಗಟ್ಟಿ ನಿಂತರು. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಮಹಿಳೆಯರು, ಅಂಗವಿಕಲರು ಸೇರಿದಂತೆ 89ಕ್ಕೂ ಜಾಸ್ತಿ ಜನ ಲಿಖಿತ ಮನವಿ ಸಲ್ಲಿಸಿದರು.

ಸರ್ಕಾರದ ಆದೇಶದ ಪ್ರಕಾರ ಜುಲೈ 15 ಗೊಳಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಈ ರೀತಿಯ ಜನಸ್ಪಂದನೆ ಸಭೆ ನಡೆಸಬೇಕು. ಔರಾದ್‍ನಿಂದ ಆರಂಭವಾಗಿದೆ. ಇಲ್ಲಿ ಜನ ಬಹಳ ದೂರ ದೂರದ ಊರುಗಳಿಂದ ಬಂದು ಮನವಿ ಸಲ್ಲಿಸಿದ್ದಾರೆ. ಫಾರಂ 10, ಫೋಡಿ ದುರಸ್ತಿ, ಕಾಲು ದಾರಿ ಸೇರಿದಂತೆ ರೈತರಿಗೆ ಸಂಬಂಧಿಸಿದ ಅರ್ಜಿಗಳು ಜಾಸ್ತಿ ಬಂದಿವೆ. ಜೆಜೆಎಂ ಕಾಮಗಾರಿ, ಜೆಸ್ಕಾಂ, ರಸ್ತೆ ಕಾಮಗಾರಿಗೆ ಸಂಬಂಧಪಟ್ಟಂತಹ ಅರ್ಜಿಗಳು ಬಂದಿವೆ. ಎಲ್ಲ ಅರ್ಜಿಗಳು 15 ದಿನಗೊಳಗೆ ಇತ್ಯರ್ಥಪಡಿಸಿ ಸಂಬಂಧಪಟ್ಟ ಅರ್ಜಿದಾರರಿಗೆ ಹಿಂಬರಹ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.

’ಸಂತಪುರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಇನ್ನು ಸಾಕಷ್ಟು ರೈತರಿಗೆ ಬರ ಪರಿಹಾರ ಹಣ ಬಂದಿಲ್ಲ. ಬರ ಘೋಷಣೆ ಇದ್ದರೂ ಬ್ಯಾಂಕುಗಳು ರೈತರಿಗೆ ಸಾಲ ವಸೂಲಿಗೆ ಕಿರುಕುಳ ನೀಡುತ್ತಿವೆ’ ಎಂದು ರೈತ ಮುಖಂಡರು ಜನಸ್ಪಂದನ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.

‘ಸಂತಪುರ ಪರಿಶಿಷ್ಟ ಜಾತಿ ಗಲ್ಲಿಯಲ್ಲಿ ಜೆಜೆಎಂ ಕಾಮಗಾರಿ ಸರಿಯಾಗಿಲ್ಲ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ’ ಎಂದು ತುಕಾರಾಮ ಹಸನ್ಮುಖಿ ದೂರು ನೀಡಿದರು.

‘ಕಂದಗೂಳ-ಗಡಗಾಂವ್ ವರೆಗಿನ ಗಡಿ ರಸ್ತೆ ಕಾಮಗಾರಿ ಕಳೆಪೆಯಾಗುತ್ತಿದೆ. ಸಂಬಂಧಿತರ ವಿರುದ್ಧ ಕ್ರಮ ಜರುಗಿಸಿ’ ಎಂದು ಕಂದಗೂಳ ನಿವಾಸಿ ಭಾನುದಾಸ ಪಾಟೀಲ ದೂರು ನೀಡಿದರು.

‘ಕೊಳವೆ ಬಾವಿಗಾಗಿ 2015ರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಶುಲ್ಕ ಕಟ್ಟಿದರೂ ಇಂದಿಗೂ ನಮ್ಮ ಕೆಲಸ ಆಗಿಲ್ಲ’ ಎಂದು ಔರಾದ್ ನಿವಾಸಿ ಶೋಭಾ ದೇಶಪಾಂಡೆ ಅಧಿಕಾರಿಗಳ ಗಮನಕ್ಕೆ ತಂದರು.

ಬೀದರ್-ಔರಾದ್ ಹೆದ್ದಾರಿ ಕೆಲ ಕಡೆ ರಸ್ತೆ ಅವೈಜ್ಞಾನಿಕವಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಅದನ್ನು ಸರಿಪಡಿಸುವಂತೆ ಅನೇಕರು ಮನವಿ ಸಲ್ಲಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್, ಜಿಲ್ಲಾ ಪಂಚಾಯತ್ ಸಿಇಒ ಗಿರೀಶ್ ಬಾದೋಲೆ, ತಹಶೀಲ್ದಾರ್ ನಾಗಯ್ಯ ಹಿರೇಮಠ, ತಾಲ್ಲೂಕು ಪಂಚಾಯತ್ ಇಒ ಬೀರೇಂದ್ರಸಿಂಗ್ ಠಾಕೂರ್ ಹಾಗೂ ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ಇದ್ದರು.

ಔರಾದ್‍ನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮನವಿ ಸಲ್ಲಿಸಲು ಸಾಲುಗಟ್ಟಿ ನಿಂತ ಜನ
ಔರಾದ್‍ನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮನವಿ ಸಲ್ಲಿಸಲು ಸಾಲುಗಟ್ಟಿ ನಿಂತ ಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT