ಶನಿವಾರ, ಜುಲೈ 31, 2021
27 °C
ಎರಡೂವರೆ ತಿಂಗಳ ನಂತರ ಮಸೀದಿಗಳಲ್ಲಿ ಪ್ರಾರ್ಥನೆ

ಬೀದರ್: ಪುಣ್ಯಕ್ಷೇತ್ರಗಳಿಗೆ ಬಾರದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಧಾರ್ಮಿಕ ತಾಣಗಳಿಗೆ ವಿಧಿಸಿದ್ದ ಲಾಕ್‌ಡೌನ್‌ ಸಂಪೂರ್ಣ ತೆರವುಗೊಳಿಸಿ ಸೋಮವಾರ ಜಿಲ್ಲೆಯ ಎಲ್ಲ ಪುಣ್ಯ ಕ್ಷೇತ್ರ, ಐತಿಹಾಸಿಕ ಮಂದಿರ, ಮಠ, ಗುರುದ್ವಾರ, ದರ್ಗಾ ಹಾಗೂ ಮಸೀದಿಗಳಲ್ಲಿ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಯಿತು. ಆದರೆ, ಕೋವಿಡ್‌ 19 ಸೋಂಕಿನ ಭಯದಿಂದ ಭಕ್ತರು ಪ್ರಾರ್ಥನಾ ಮಂದಿರಗಳತ್ತ ಸುಳಿಯಲಿಲ್ಲ.

ಇಲ್ಲಿಯ ಗುರುದ್ವಾರಕ್ಕೆ ಕೋವಿಡ್‌ 19 ಸೋಂಕು ಕಾಣಿಸಿಕೊಳ್ಳುವ ಮೊದಲು ನಿತ್ಯ 2,000 ರಿಂದ 3,000 ಜನ ಬಂದು ಹೋಗುತ್ತಿದ್ದರು. ಸೋಮವಾರ ಬೆರಳಣಿಕೆಯಷ್ಟು ಭಕ್ತರು ಗುರುದ್ವಾರಕ್ಕೆ ಬಂದು ಹೋಗಿದ್ದಾರೆ. ಉತ್ತರ ಭಾರತದಿಂದ ಅತಿ ಹೆಚ್ಚು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಕೊರೊನಾದ ಪರಿಣಾಮ ಭಕ್ತರ ಸಂಖ್ಯೆ ಕ್ಷೀಣಿಸಿದೆ. ಗುರುದ್ವಾರದಲ್ಲಿ ಗ್ರಂಥಸಾಹೀಬ ಪಠಣ ಹಾಗೂ ಕೀರ್ತನ ನಡೆಯಿತು.

ಕೋವಿಡ್‌ 19 ಸೋಂಕು ಹರಡುವಿಕೆ ತಡೆಯುವ ದಿಸೆಯಲ್ಲಿ ಮೂರು ತಿಂಗಳಿಂದ ಲಂಗರ್‌ ಬಂದ್ ಮಾಡಲಾಗಿದೆ. ಆದರೆ, ಗುರುದ್ವಾರದ ಸಿಬ್ಬಂದಿ ಹಾಗೂ ವಲಸೆ ಕಾರ್ಮಿಕರಿಗೆ ಮಾತ್ರ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂತರ ಕಾಯ್ದುಕೊಂಡು ಭಕ್ತರು ಗ್ರಂಥಸಾಹೀಬ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಗುರುದ್ವಾರ ಪ್ರಬಂಧಕ ಕಮಿಟಿ ವ್ಯವಸ್ಥಾಪಕ ದರ್ಬಾರಾ ಸಿಂಗ್‌ ಹೇಳಿದರು.

ನಗರದ ಹೊರವಲಯದಲ್ಲಿರುವ ನರಸಿಂಹ ಝರಣಾ ಪ್ರವೇಶಕ್ಕೆ ಮುಜರಾಯಿ ಇಲಾಖೆ ಅನುಮತಿ ನೀಡಿಲ್ಲ. ಮಾರ್ಗಸೂಚಿಯನ್ನೂ ಕಳಿಸಿಲ್ಲ. ಹೀಗಾಗಿ ನರಸಿಂಹ ಝರಣಾ ಗುಹಾದೇವಾಲಯದ ಬಾಗಿಲು ತೆರದಿರಲಿಲ್ಲ. ಬೀದರ್‌ನ ಕೆಲ ಭಕ್ತರು ಮಂದಿರ ಆವರಣದಲ್ಲಿ ನಿಂತು ಕೈಮುಗಿದು ಮನೆಗಳಿಗೆ ತೆರಳಿದರು.

ಇಲ್ಲಿಯ ದೇವಸ್ಥಾನಕ್ಕೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಭಕ್ತರು ಅಧಿಕ ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ಆದರೆ, ಸೋಮವಾರ ನೆರೆಯ ರಾಜ್ಯಗಳ ಭಕ್ತರು ಕಂಡು ಬರಲಿಲ್ಲ. ನಗರದ ಐತಿಹಾಸಿಕ ಪಾಪನಾಶ ಮಂದಿರಕ್ಕೂ ನಿರೀಕ್ಷೆಯಂತೆ ಭಕ್ತರು ಭೇಟಿ ಕೊಡಲಿಲ್ಲ.

ಭಾಲ್ಕಿಯ ಭಾಲ್ಕೇಶ್ವರ ದೇವಸ್ಥಾನ, ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಾಲಯ, ಹುಮನಾಬಾದ್‌ನ ವೀರಭದ್ರೇಶ್ವರ, ಔರಾದ್‌ ಅಮರೇಶ್ವರ, ಬಸವಕಲ್ಯಾಣದ ಬಸವೇಶ್ವರ ಮಂದಿರ, ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಆದರೆ, ಭಕ್ತರು ದೇವರ ದರ್ಶನಕ್ಕೆ ಬಂದಿರಲಿಲ್ಲ.

ಎರಡೂವರೆ ತಿಂಗಳ ನಂತರ ಜಿಲ್ಲೆಯ ಮಸೀದಿಗಳಲ್ಲಿ ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾಗಳಲ್ಲಿ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಯಿತು. ಎಎಸ್‌ಐ ಅಧೀನದಲ್ಲಿರುವ ಅಷ್ಟೂರಿನ ಅಹಮದ್‌ ಶಾ ಬಹಮನಿ ದರ್ಗಾ ಹಾಗೂ ಚೌಖಂಡಿಯಲ್ಲಿ ಪ್ರವೇಶ ನಿರ್ಬಂಧಿಸಲಾಗಿತ್ತು. ಕೇಂದ್ರ ಕಚೇರಿಯಿಂದ ಆದೇಶ ಬಂದ ನಂತರ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗುವುದು ಎಂದು ಎಎಸ್‌ಐ ಅಧಿಕಾರಿಗಳು ತಿಳಿಸಿದ್ದಾರೆ.

ಶಾಹೀನ್‌ ಶಿಕ್ಷಣ ಸಂಸ್ಥೆಯ ವತಿಯಿಂದ ನಗರದ 70 ಪ್ರಾರ್ಥನಾ ಮಂದಿರಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಯಿತು. ಚರ್ಚ್‌ಗಳಲ್ಲಿ ಭಾನುವಾರ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು