ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಸೂರ: ಮಳೆ ಬಂದರೆ ರಸ್ತೆ ಸಂಪರ್ಕ ಕಡಿತ

ಭಾಲ್ಕಿ ತಾಲ್ಲೂಕಿನ ಕೊಂಗಳಿ ಗ್ರಾಮಸ್ಥರ ಆತಂಕ
Published 13 ಜೂನ್ 2024, 13:22 IST
Last Updated 13 ಜೂನ್ 2024, 13:22 IST
ಅಕ್ಷರ ಗಾತ್ರ

ಹುಲಸೂರ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ಇದೇ ರೀತಿ ಮಳೆ ಮುಂದುವರಿದರೆ  ಇಲ್ಲಿನ ತಾಲ್ಲೂಕು ಕೇಂದ್ರ ಸಮೀಪದ ಕೊಂಗಳಿ ಗ್ರಾಮವು (ಭಾಲ್ಕಿ ತಾಲ್ಲೂಕು) ರಸ್ತೆ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಿಸುತ್ತಿದೆ.

ಕೊಂಗಳಿ ಗ್ರಾಮದಿಂದ ಹುಲಸೂರು ಸಂಪರ್ಕ ರಸ್ತೆಯಲ್ಲಿ ಚಿಕ್ಕದೊಂದು ಸೇತುವೆಯಿದೆ. ಈ ಸೇತುವೆಯು ಸಮೀಪದ ಮಾಂಜ್ರಾ ನದಿಯಲ್ಲಿ ಪ್ರವಾಹ ಬಂದರೆ ಮುಳುಗುತ್ತದೆ. ಅಲ್ಲದೇ ಸುತ್ತಲಿನ ಪ್ರದೇಶಗಳ ಕೃಷಿ ಭೂಮಿ ಜಲಾವೃತವಾಗುತ್ತದೆ. ಇದರಿಂದ ಕೊಂಗಳಿ ಸೇರಿ ವಿವಿಧ ಗ್ರಾಮಗಳಿಗೆ ಹೋಗಲು ಇರುವ ಏಕೈಕ ರಸ್ತೆ ಕಡಿತವಾಗುತ್ತದೆ.

ಕೊಂಗಳಿ ಗ್ರಾಮದಲ್ಲಿ 500ಕ್ಕು ಹೆಚ್ಚೂ ಮನೆಗಳಿವೆ. ಇಲ್ಲಿನ ಜನರು ಎಲ್ಲ ವಹಿವಾಟು, ದಿನಸಿ, ಆಸ್ಪತ್ರೆ, ಬಸ್ ನಿಲ್ದಾಣ ಎಲ್ಲದಕ್ಕೂ ಹುಲಸೂರನ್ನೇ ಅವಲಂಬಿಸಿದ್ದಾರೆ.  ಪ್ರಸ್ತುತ ಮಳೆಗಾಲ ಸಮೀಪಿಸುತ್ತಿರುವುದರಿಂದ  ಮತ್ತೆ ಗ್ರಾಮಸ್ಥರಿಗೆ ಸಂಪರ್ಕ ಕಡಿತದ ಭಯ ಅವರಿಸಿದೆ.

ಪ್ರವಾಹ ಇಳಿಯುವವರೆಗೂ ವಾರಗಟ್ಟಲೇ ರಸ್ತೆಯ ಮೇಲೆ ನಾಲೈದು ಅಡಿ ನೀರು ನಿಂತಿರುತ್ತದೆ. ಹೀಗಾಗಿ ತಗ್ಗಿನಲ್ಲಿರುವ ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡಬೇಕು ಹಾಗೂ ಎತ್ತರಿಸಬೇಕು ಎಂಬುದು ಇಲ್ಲಿನ ಜನರ ದಶಕಗಳ ಹಿಂದಿನ ಬೇಡಿಕೆಯಾಗಿ ಕನಸಾಗಿಯೇ ಉಳಿದಿದೆ.

ಗ್ರಾಮಸ್ಥರ ಒತ್ತಾಯದ  ಮೇರೆಗೆ ಕಳೆದ ಒಂದು ವರ್ಷಗಳ ಹಿಂದೆ ಶಾಸಕರು ಹೊಸ ಸೇತುವೆ ನಿರ್ಮಿಸಲು   ಸೇತುವೆ ಕಾಮಗಾರಿ ನಿರ್ಮಾಣಕ್ಕೆ ಸೂಚಿಸಿದ್ದರು. ಆದರೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಮುಂಗಾರು ಹಂಗಾಮಿನ ಮೊದಲ ಮಳೆಗೆ ಸೇತುವೆ ಸಂಪೂರ್ಣ ಹಾಳಾಗಿದ್ದು, ಈ ಸೇತುವೆ ಮೂಲಕವೇ ಶಾಲಾ ವಾಹನ ಸವಾರರು ಜೀವಭಯದಲ್ಲಿ ಓಡಾಡುತ್ತಿದ್ದಾರೆ.

‘ಮಾಂಜ್ರಾ ನದಿಗೆ ನೆರೆ ಬಂದು ಸೇತುವೆ ಮುಳುಗಿದರೆ, ಜಮಖಂಡಿ, ಮೆಹಕರ, ವಾಂಝರಖೇಡ ಭಾಗದ ಸಾವಿರಾರು ಜನರಿಗೆ ರಸ್ತೆ ಸಂಪರ್ಕ ಕಡಿತ ಉಂಟಾಗಿ ಓಡಾಡಲು ತೊಂದರೆಯಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು, ನಿತ್ಯ ಕೆಲಸಕ್ಕೆ ಹೋಗುವವರಿಗೆ ತುಂಬಾ ತೊಂದರೆಯಾಗುತ್ತದೆ’ ಈ ಸಮಸ್ಯೆ ಕುರಿತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಸ್ಪಂದಿಸಿಲ್ಲ’ ಎಂದು ಸ್ಥಳೀಯರಾದ ಬ್ರಹ್ಮಾನಂದ ದೇಶಮುಖ ಅಳಲು ತೋಡಿಕೊಂಡರು.

ತಾಂತ್ರಿಕ ಕಾರಣದಿಂದ ಕೊಂಗಳಿ ಸೇತುವೆ ಕಾಮಗಾರಿ ಆರಂಭವಾಗಿಲ್ಲ. ಪ್ರಸ್ತುತ ಇರುವ ಸಮಸ್ಯೆಗಳು ಗಮನದಲ್ಲಿಟ್ಟು ಶೀಘ್ರದಲ್ಲಿ ಸೇತುವೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು.

-ಅಲ್ತಾಫ್ ಮಿಯಾ ಎಇಇ ಲೋಕೋಪಯೋಗಿ ಇಲಾಖೆ

ಪ್ರವಾಹ ಬಂದರೆ ಮುಳುಗಡೆ ಆಗುವ ಗ್ರಾಮಕ್ಕೆ ಸಂಪರ್ಕ ಕಲಿಸುವ ಎರಡು ಸೇತುವೆಗಳು ಒಂದೆಡೆಯಾದರೆ ಅಪಘಾತಕ್ಕೆ ದಾರಿ ಮಾಡಿ ಕೊಡುವ ಕಿರಿದಾದ ರಸ್ತೆ ಮತ್ತೊಂದು ಕಡೆಯಾಗಿದೆ. ಮಾಂಜ್ರಾ ನದಿಯ ಪ್ರವಾಹಕ್ಕೆ ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.

-ಪಂಡಿತ್ ಶಿರೊಳೆ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT