ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ

ವಾಲ್ಮೀಕಿ ನಿಗಮದಲ್ಲಿ ಹಗರಣ; ಬಿಜೆಪಿಯಿಂದ ಪ್ರತಿಭಟನೆ
Published 29 ಜೂನ್ 2024, 4:16 IST
Last Updated 29 ಜೂನ್ 2024, 4:16 IST
ಅಕ್ಷರ ಗಾತ್ರ

ಬೀದರ್‌: ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಬಿಜೆಪಿ ಮುಖಂಡರು, ಕಾರ್ಯಕರ್ತರು ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ಗೇಟ್‌ನಿಂದ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು. ಈ ವೇಳೆ ಕೆಲಕಾಲ ನೂಕಾಟ, ತಳ್ಳಾಟ ಉಂಟಾಯಿತು.

ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಸಲ್ಲಿಸಿದರು. ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಮಹರ್ಷಿ ವಾಲ್ಮೀಕಿ ನಿಗಮಕ್ಕೆ ಸರ್ಕಾರ ಹಣ ಮೀಸಲಿಟ್ಟಿತ್ತು. ಆದರೆ, ಅಕ್ರಮವಾಗಿ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದೆ. ಹಗರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡ ಆಗಿದೆ. ಇನ್ನೂ ಹಲವರು ಇದರಲ್ಲಿ ಶಾಮಿಲಾಗಿದ್ದಾರೆ. ಅವರ ತಲೆದಂಡ ಕೂಡ ಆಗಬೇಕು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಪರಿಶಿಷ್ಟ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆ ಉಂಟಾಗಬೇಕು. ಪರಿಶಿಷ್ಟರ ಕಲ್ಯಾಣದ ಮಾತುಗಳನ್ನು ಆಡುವ ಕಾಂಗ್ರೆಸ್ಸಿಗರು ಅಕ್ರಮ ಮಾಡಿ ಮೌನ ವಹಿಸಿದ್ದಾರೆ. ಯಾರ್‍ಯಾರು ಇದರಲ್ಲಿ ಶಾಮಿಲಾಗಿದ್ದಾರೆ. ಅವರೆಲ್ಲರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮುಖಂಡರಾದ ಮುಖಂಡರಾದ ಬಾಬು ವಾಲಿ, ರೇವಣಸಿದ್ದಪ್ಪ ಜಲಾದೆ, ಶಕುಂತಲಾ ಬೆಲ್ದಾಳೆ, ಶಶಿಧರ ಹೊಸಳ್ಳಿ, ಪೀರಪ್ಪ ಔರಾದೆ, ಗುರುನಾಥ ಜ್ಯಾಂತಿಕರ್, ಕಿರಣ ಪಾಟೀಲ, ಜಗನ್ನಾಥ ಜಮಾದಾರ, ಬಸವರಾಜ ಆರ್ಯ, ಅರಹಂತ ಸಾವಳೆ, ಮಹೇಶ ಪಾಲಂ, ವೀರು ದಿಗ್ವಾಲ್, ರಾಮಶೆಟ್ಟಿ ಪನ್ನಾಳೆ, ವೀರಣ್ಣ ಕಾರಬಾರಿ, ವೀರೇಶ ಸ್ವಾಮಿ, ಸಂಜೀವಕುಮಾರ ಸಜ್ಜನ್‌ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT