ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೈಲ ದರ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ

ಬೈಕ್‌ ಅಣಕು ಶವಯಾತ್ರೆ; ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ
Published 18 ಜೂನ್ 2024, 5:07 IST
Last Updated 18 ಜೂನ್ 2024, 5:07 IST
ಅಕ್ಷರ ಗಾತ್ರ

ಬೀದರ್‌: ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ವಿಧಿಸಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದ ಕಾರ್ಯಕರ್ತರು, ಶವದಂತೆ ಬೈಕ್‌ ಹೊತ್ತು ಅಣಕು ಶವಯಾತ್ರೆ ನಡೆಸಿದರು. ಮಾರ್ಗದುದ್ದಕ್ಕೂ ರಾಜ್ಯದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದಿಕ್ಕಾರ ಹಾಕಿದರು. ಆನಂತರ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಮಿತ್ರ ಪಕ್ಷ ಜೆಡಿಎಸ್‌ ಕಾರ್ಯಕರ್ತರು ಸಾಥ್‌ ನೀಡಿದರು.

‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿ ಆಗಿದೆ. ಸರ್ಕಾರ ನಡೆಸಲು ಹಣವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಸರ್ಕಾರದ ಬೊಕ್ಕಸ ತುಂಬಿಕೊಳ್ಳಲು ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ವಿಧಿಸಿದ್ದಾರೆ. ಇದರಿಂದ ಎರಡರ ಬೆಲೆ ಹೆಚ್ಚಾಗಿದೆ. ಇತರೆ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಇದು ರಾಜ್ಯದ ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ’ ಎಂದು ಟೀಕಿಸಿದರು.

‘ಲೋಕಸಭೆ ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದ ರಾಜ್ಯ ಸರ್ಕಾರವು ಚುನಾವಣೆ ಫಲಿತಾಂಶ ನಂತರ ಬೆಲೆ ಹೆಚ್ಚಿಸಿದೆ. ಚುನಾವಣೆಯಲ್ಲಿ ರಾಜ್ಯದ ಮತದಾರರು ರಾಜ್ಯ ಸರ್ಕಾರ ಹಾಗೂ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿ ಅವರಿಗೆ ವಿರುದ್ಧವಾಗಿ ಮತ ಹಾಕಿದ್ದಾರೆ. ಈ ಸಿಟ್ಟಿನಿಂದ ರಾಜ್ಯ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ಹಾಕಿದೆ. ಇದು ಮತದಾರರ ವಿರುದ್ಧ ಸೇಡಿನ ಕ್ರಮ’ ಎಂದು ಆರೋಪಿಸಿದರು.

ಕೂಡಲೇ ಹೆಚ್ಚಿಸಿರುವ ದರ ಹಿಂಪಡೆಯಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟ ಮುಂದುವರೆಸಲಾಗುವುದು. ತಾಲ್ಲೂಕು ಮಟ್ಟ, ಹೋಬಳಿ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಬಿಜೆಪಿ ಕಲಬುರಗಿ ವಿಭಾಗ ಸಹಪ್ರಭಾರಿ ಈಶ್ವರ ಸಿಂಗ್‌ ಠಾಕೂರ್‌, ಸಂಗಮೇಶ ನಾಸಿಗಾರ, ಸುರೇಶ ಮಾಶೆಟ್ಟಿ, ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT