ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಸಂಕ್ರಾಂತಿಯೊಳಗೆ ಜಿಲ್ಲಾ ಬಿಜೆಪಿಗೆ ಹೊಸ ಸಾರಥಿ

Published 4 ಜನವರಿ 2024, 4:42 IST
Last Updated 4 ಜನವರಿ 2024, 4:42 IST
ಅಕ್ಷರ ಗಾತ್ರ

ಬೀದರ್‌: ಬರುವ ಸಂಕ್ರಾಂತಿಯೊಳಗೆ ಬೀದರ್‌ ಜಿಲ್ಲೆ ಬಿಜೆಪಿಗೆ ಹೊಸ ಸಾರಥಿ ನೇಮಕಗೊಳ್ಳುವುದು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ.

ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ವೀಕ್ಷಕ ಸಿ. ಮುನಿರಾಜು ಅವರ ನೇತೃತ್ವದಲ್ಲಿ ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಿ, ಮುಖಂಡರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಾಹಿತಿ ನೀಡಲಾಗಿದ್ದು, ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಹೆಸರು ಘೋಷಿಸುವುದೊಂದೆ ಬಾಕಿ ಉಳಿದಿದೆ. ಅದಕ್ಕೆ ಸಂಕ್ರಾಂತಿಯ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

ಆಕಾಂಕ್ಷಿಗಳು ಯಾರ್‍ಯಾರು?: ಈಗಾಗಲೇ ಜಿಲ್ಲಾ ಬಿಜೆಪಿ ಅಧ್ಯಕ್ಷರ ಅವಧಿ ಪೂರ್ಣಗೊಂಡಿದೆ. ಶಿವಾನಂದ ಮಂಠಾಳಕರ್‌ ಅವರನ್ನು ತಾತ್ಕಾಲಿಕವಾಗಿ ಮುಂದುವರೆಸಲಾಗಿದೆ. ಈಗಾಗಲೇ ಸಭೆ ನಡೆಸಿ, ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯಲಾಗಿದ್ದು, 20ಕ್ಕೂ ಹೆಚ್ಚು ಜನ ಪ್ರಮುಖ ಆಕಾಂಕ್ಷಿಗಳಿದ್ದಾರೆ. ಹಾಗೆ ನೋಡಿದರೆ 120ಕ್ಕೂ ಹೆಚ್ಚು ಮಂದಿ ತನಗೆ ಅವಕಾಶ ಕೊಡಬೇಕೆಂದು ರಾಜ್ಯ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ, ಪ್ರಮುಖವಾಗಿ ಕೆಲವೊಂದು ಹೆಸರು ಕೇಳಿ ಬರುತ್ತಿವೆ.

ಹುಮನಾಬಾದ್‌ ತಾಲ್ಲೂಕಿನ ಹುಡಗಿ ಗ್ರಾಮದ ಸೋಮನಾಥ ಪಾಟೀಲ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಸೋಮನಾಥ ಅವರು ಮೂಲತಃ ಬಿಜೆಪಿ ಕಾರ್ಯಕರ್ತರು. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪನವರೊಂದಿಗೆ ಕೆಜೆಪಿ ಪಕ್ಷಕ್ಕೂ ಹೋಗಿದ್ದರು. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರಿಗೆ ನಿಷ್ಠರಾಗಿದ್ದಾರೆ. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಪದಾಧಿಕಾರಿಗಳ ನೇಮಕದಲ್ಲೂ ವಿಜಯೇಂದ್ರ ಅವರ ಆಪ್ತರಿಗೆ ಪ್ರಾಶಸ್ತ್ಯ ಸಿಕ್ಕಿದೆ. ಹೀಗಾಗಿ ಸೋಮನಾಥ ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಇನ್ನು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರು ರೇವಣಸಿದ್ದಪ್ಪ ಜಲಾದೆ. ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬೀದರ್‌ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರು. ಇನ್ನು, ಪರಿಶಿಷ್ಟ ಜಾತಿಯಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರು ಜೈಕುಮಾರ ಕಾಂಗೆ. ಹಿಂದೆ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಆಗಿದ್ದರು.

ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ನೀಡಬೇಕೆಂದು ಬಹಿರಂಗವಾಗಿಯೇ ಆಗ್ರಹಿಸಿರುವ ಪದ್ಮಾಕರ ಪಾಟೀಲ ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನ ಗಿಟ್ಟಿಸುವುದಕ್ಕಾಗಿಯೇ ಎಂ.ಪಿ. ಟಿಕೆಟ್‌ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಮರಾಠ ಸಮಾಜದ ಇನ್ನೊಬ್ಬ ಮುಖಂಡ, ಮಾಜಿಶಾಸಕ ಮಾರುತಿರಾವ ಮುಳೆ ಸಹ ಸ್ಪರ್ಧೆಯಲ್ಲಿದ್ದಾರೆ. ಬಸವಕಲ್ಯಾಣದಿಂದ ಶಾಸಕರಾಗಿ ಚುನಾಯಿತರಾಗಿದ್ದರು.

ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುವಾಲಿ ಕೂಡ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತ ಬಂದಿದ್ದಾರೆ. ಪಕ್ಷದಲ್ಲಿ ಹಲವು ಜವಾಬ್ದಾರಿ ನಿಭಾಯಿಸಿದ್ದಾರೆ. ಲಿಂಗಾಯತ ಕೋಟಾ ಹಾಗೂ ಪಕ್ಷ ನಿಷ್ಠೆಯನ್ನು ಗಮನಿಸಿ ಅವಕಾಶ ಕೊಡಬೇಕೆಂದು ಪಕ್ಷಕ್ಕೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ. ಮುಖಂಡರಾದ ರಾಜರಾಮ, ವೆಂಕಟ್‌ ಲಾಳೆ ಸೇರಿದಂತೆ 120ಕ್ಕೂ ಹೆಚ್ಚು ಮಂದಿ ತಮಗೆ ಅವಕಾಶ ಕೊಡಬೇಕೆಂದು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಕೆಲ ಶಾಸಕರು ಕೂಡ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಒಬ್ಬರಿಗೆ ಎರಡು ಹುದ್ದೆ ಕೊಡುವುದು ಬೇಡ ಎಂಬ ಚಿಂತನೆ ಪಕ್ಷದಲ್ಲಿದೆ. ಆದರೆ, ಪಕ್ಷ ಅಂತಿಮವಾಗಿ ಯಾರಿಗೆ ಮಣೆ ಹಾಕುತ್ತದೋ? ಸಂಕ್ರಾಂತಿಯ ಸಿಹಿ ಯಾರಿಗೆ ಸಿಗುತ್ತದೋ? ಹಬ್ಬಕ್ಕೆ ಉತ್ತರ ಸಿಗುವ ನಿರೀಕ್ಷೆ ಇದೆ.

‘ಹಿರಿತನ ಸಂಘಟನಾ ಚತುರರಿಗೆ ಆದ್ಯತೆ’

‘ಹಿರಿತನ ಸಂಘಟನಾ ಚತುರ ಹಾಗೂ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ವ್ಯಕ್ತಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. ಎರಡ್ಮೂರು ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯೂ ಇದೆ. ಬರುವ ಸಂಕ್ರಾಂತಿಯೊಳಗೆ ಹೊಸ ಅಧ್ಯಕ್ಷರ ನೇಮಕ ಮಾಡಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಡಾ. ಶೈಲೇಂದ್ರ ಕೆ. ಬೆಲ್ದಾಳೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಈಗಾಗಲೇ ಪಕ್ಷದ ವೀಕ್ಷಕರು ಸಭೆ ನಡೆಸಿ ಅಭಿಪ್ರಾಯ ಪಡೆದುಕೊಂಡು ಹೋಗಿದ್ದಾರೆ. ಅರ್ಹರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ನೇಮಕ ಮಾಡಲಿದ್ದಾರೆ’ ಎಂದು ತಿಳಿಸಿದರು.

ಪಕ್ಷ ನಿಷ್ಠೆಯೋ ವ್ಯಕ್ತಿ ನಿಷ್ಠೆಯೋ?

ಬಿಜೆಪಿಯಲ್ಲಿ ಪಕ್ಷ ನಿಷ್ಠರಿಗಿಂತ ವ್ಯಕ್ತಿ ನಿಷ್ಠರಿಗೆ ಮೊದಲಿನಿಂದಲೂ ಪ್ರಾಶ್ಯಸ್ತ ಕೊಡುತ್ತ ಬರಲಾಗಿದೆ. ಬಿಜೆಪಿ ರಾಜ್ಯ ಘಟಕದ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಅವರ ಆಪ್ತರಿಗೆ ಮಣೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಅದರಲ್ಲೂ ಬೀದರ್‌ ಜಿಲ್ಲೆಯಿಂದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರನ್ನು ರಾಜ್ಯ ಕಾರ್ಯದರ್ಶಿ ಮಾಡಿದ್ದಾರೆ. ಬೆಲ್ದಾಳೆ ಅವರು ಮೊದಲಿನಿಂದಲೂ ಯಡಿಯೂರಪ್ಪ ಕುಟುಂಬಕ್ಕೆ ಹತ್ತಿರದವರು. ಜಿಲ್ಲಾಧ್ಯಕ್ಷರ ನೇಮಕದಲ್ಲೂ ವಿಜಯೇಂದ್ರ ತಮಗೆ ಆಪ್ತರಾದವರಿಗೆ ಮಣೆ ಹಾಕುತ್ತಾರೆ ಎಂಬ ಚರ್ಚೆಗಳು ಪಕ್ಷದ ಪಡಸಾಲೆಯಲ್ಲಿ ನಡೆಯುತ್ತಿವೆ. ಅಂತಿಮವಾಗಿ ಪಕ್ಷ ನಿಷ್ಠರಿಗೋ ಅಥವಾ ವ್ಯಕ್ತಿ ನಿಷ್ಠರಿಗೋ? ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಬಿಜೆಪಿಯಲ್ಲೂ ಕುತೂಹಲ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT