ಬುಧವಾರ, ಜೂನ್ 23, 2021
28 °C
ಪಾಲಕರನ್ನೂ ಗೌರವಿಸಿದ ಜಿಲ್ಲಾ ಉಸ್ತುವಾರಿ ಸಚಿವ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ‍ಪ್ರಭು ಚವಾಣ್‌ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆ ಮತ್ತು ತಾಲ್ಲೂಕಿಗೆ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸುವ ಹಾಗೂ ವಿದ್ಯಾರ್ಥಿಗಳ ಪಾಲಕರನ್ನೂ ಸನ್ಮಾನಿಸುವ ಮೂಲಕ ಹೊಸದೊಂದು ಅಧ್ಯಾಯ ಶುರು ಮಾಡಿದರು.

ಇಲ್ಲಿಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಚವಾಣ್‌ ಅವರು ತಮ್ಮ ವೇತನವನ್ನೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ರೂಪದಲ್ಲಿ ನೀಡುವ ಮೂಲಕ ಮತ್ತಷ್ಟು ಸ್ಫೂರ್ತಿ ತುಂಬಿದರು.

‘ಜಿಲ್ಲೆಯ ವಿದ್ಯಾರ್ಥಿಗಳು ಸಾಧನೆ ತೋರಿದಾಗ ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜಿಲ್ಲೆಯಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಎನ್ನುವುದನ್ನು ಇಲ್ಲಿಯ ವಿದ್ಯಾರ್ಥಿಗಳು ಸಾಬೀತು ಪಡಿಸಿದ್ದಾರೆ. ಶೈಕ್ಷಣಿಗೆ ಪ್ರಗತಿಗೆ ನಿರಂತರವಾಗಿ ಪ್ರಯತ್ನಿಸುವೆ. ನಾನು ಮುಂದಿನ ವರ್ಷವೂ ಇಂತಹ ಕಾರ್ಯಕ್ರಮವನ್ನು ಆಯೋಜಿಸುವೆ. ಶಾಸಕನಾಗಿ ಬದುಕಿರುವ ವರೆಗೂ ಪ್ರತಿಭಾವಂತರಿಗೆ ನಗದು ಬಹುಮಾನ ನೀಡಿ ಗೌರವಿಸುವುದನ್ನು ಮುಂದುವರಿಸುವೆ’ ಎಂದು ಘೋಷಿಸಿದರು.

‘ಜಿಲ್ಲೆಯ ಯಾವುದೇ ವ್ಯಕ್ತಿ ರಾಜ್ಯದ ಯಾವುದೇ ಮೂಲೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಗೌರವದಿಂದ ನನ್ನ ಎದೆ ಉಬ್ಬುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳು ಇನ್ನಷ್ಟು ಪ್ರಯತ್ನ ಮಾಡಿ ಉನ್ನತ ಹುದ್ದೆಗಳಲ್ಲಿ ನೇಮಕಗೊಂಡು ಜಿಲ್ಲೆಗೆ ಕೀರ್ತಿ ತರಬೇಕು’ ಎಂದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೀದರ್‌ ಜಿಲ್ಲೆ ಈ ಬಾರಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪಾಸಾಗುವವರ ಸಂಖ್ಯೆ ಶೇಕಡ 85 ದಾಟಬೇಕು. ಆಗ ನನಗೆ ಇನ್ನೂ ಖುಷಿಯಾಗುತ್ತದೆ’ ಎಂದು ತಿಳಿಸಿದರು

ಸಂಸದ ಭಗವಂತ ಖೂಬಾ ಮಾತನಾಡಿ, ‘ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗಲಿದೆ. ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಶೈಕ್ಷಣಿಕ ಕ್ಷೇತ್ರದ ಉತ್ತೇಜನಕ್ಕೆ ಶ್ರಮಿಸುತ್ತಿರುವ ಸಚಿವ ಚವಾ ಣ್ ಅವರಿಗೆ ವಂದನೆಗಳು’ ಎಂದರು.

ಶಾಸಕ ರಹೀಂ ಖಾನ್ ಮಾತನಾಡಿ, ‘ಸಿರಿವಂತರೂ ಮೊಣಕಾಲು ಊರುವಂತೆ ಮಾಡುವ ಸಾಮರ್ಥ್ಯ ಶಿಕ್ಷಣಕ್ಕೆ ಇದೆ. ಉನ್ನತ ಶಿಕ್ಷಣ ಪಡೆದವರು ಮಾನವೀಯತೆ ಮರೆಯಬಾರದು. ಇಂದು ಜಾನುವಾರಗಳಲ್ಲಿ ಮಾನವೀಯತೆ ಉಳಿದಿದೆ. ಎಲ್ಲವನ್ನೂ ಬಲ್ಲ ಮನುಷ್ಯನಲ್ಲಿ ಮಾನವೀಯತೆ ಮಾಯವಾಗುತ್ತಿದೆ. ಮಾನವೀಯತೆ ಮರೆತರೆ ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ ಮಾತನಾಡಿ, ‘ಓದಲು ಸಹಕಾರ ಕೊಡುವವರು ಮತ್ತು ಬೆನ್ನು ತಟ್ಟುವವರು ಇಂದಿನ ವಿದ್ಯಾರ್ಥಿಗಳಿಗೆ ಬೇಕಾಗಿದ್ದಾರೆ. ಅಂತಹ ಕೆಲಸವನ್ನು ಸಚಿವ ಚವಾಣ್‌ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಮಾತನಾಡಿ, ‘ನಮ್ಮಿಂದ ಹಣ ಕದಿಯಬಹುದು. ಆದರೆ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಶಿಕ್ಷಣದಿಂದ ಮಾತ್ರ ನಾವು ದೊಡ್ಡ ಸ್ಥಾನಕ್ಕೆ ಹೋಗಲು ಸಾಧ್ಯವಿದೆ. ನಿಮ್ಮೊಳಗಿನ ಪ್ರತಿಭೆಯನ್ನು ನಂಬಿ ನೀವು ಪ್ರಯತ್ನಿಸಿದರೆ ಖಂಡಿತ ನಿಮಗೆ ಗೆಲುವು ಸಿಗಲಿದೆ’ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಎಸ್, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಎಚ್.ಸಿ., ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ ಬೆಜಗಂ, ಶಾಹೀನ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್ ಮತ್ತು ಸಾಧಕ ವಿದ್ಯಾರ್ಥಿಗಳ ಪಾಲಕರು ಇದ್ದರು.

ಮೊದಲ ಸ್ಥಾನಕ್ಕೆ ₹ 11 ಸಾವಿರ ಬಹುಮಾನ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ರಿತಾಜ್ ಮಹಮ್ಮದ್ ಅಕ್ಬರ್, ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದ ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಕಲಾ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಭಿಷೇಕ ಸೂರ್ಯವಂಶಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೋಹಿಣಿ ಮಹಾಜನ ಅವರಿಗೆ ತಲಾ ₹ 11 ಸಾವಿರ ನಗದು ಪುರಸ್ಕಾರ ಪ್ರದಾನ ಮಾಡಲಾಯಿತು. ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಂದವರಿಗೆ ತಲಾ ₹ 7 ಸಾವಿರ ನಗದು ಬಹುಮಾನ ನೀಡಲಾಯಿತು.

ಎಸ್ಸೆಸ್ಸೆಲ್ಸಿ ಸಾಧಕರಿಗೂ ಸನ್ಮಾನ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯ ಅಪರಾಜಿತೇಶ್ವರಿ ಸೂರ್ಯಕಾಂತ, ದ್ವಿತೀಯ ಸ್ಥಾನ ಗಳಿಸಿದ ಹುಮನಾಬಾದ್‌ನ ಶಾದಾನ್‌ ಪ್ರೌಢ ಶಾಲೆಯ ಮಹಮ್ಮದ್‌ ಸೂಫಿಯಾನಾ ಹಾಗೂ ತೃತೀಯ ಸ್ಥಾನ ಪಡೆದ ಔರಾದ್‌ನ ಆದರ್ಶ ಶಾಲೆಯ ವಿದ್ಯಾರ್ಥಿನಿ ಅರುಣಾ ರಾಠೋಡ ಅವರನ್ನು ಸಚಿವರು ಸನ್ಮಾನಿಸಿ ತಲಾ ₹ 11 ಸಾವಿರ ನಗದು ಬಹುಮಾನ ವಿತರಿಸಿದರು. ತಾಲ್ಲೂಕು ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೂ ನಗದು ಬಹುಮಾನ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.