ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಯು ಬೆಡ್‌ ಹೆಸರಿನಲ್ಲಿ ವಂಚನೆ

ಹೌಸ್‌ ಕೀಪಿಂಗ್ ಏಜೆನ್ಸಿ ನಡೆಸುತ್ತಿದ್ದ ಆರೋಪಿ ಬಂಧನ
Last Updated 29 ಏಪ್ರಿಲ್ 2021, 21:44 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರಿಗೆ ಬಿಬಿಎಂಪಿ ವತಿಯಿಂದ ಐಸಿಯು ಬೆಡ್‌ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿ ಮನೀಶ್ ಸರ್ಕಾರ್ ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಪಶ್ಚಿಮ ಬಂಗಾಳದ ಮನೀಶ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಮಲ್ಲೇಶ್ವರದಲ್ಲಿ ನೆಲೆಸಿ, ಹೌಸ್ ಕೀಪಿಂಗ್ ಏಜೆನ್ಸಿ ಆರಂಭಿಸಿದ್ದ. ಸ್ಥಳೀಯ ನಿವಾಸಿಯೊಬ್ಬರು ನೀಡಿದ್ದ ದೂರಿನನ್ವಯ ಆತನನ್ನು ಬಂಧಿಸಲಾಗಿದ್ದು, ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಕೊರೊನಾ ಸೋಂಕಿತರಿಗೆ ಐಸಿಯು ಬೆಡ್‌ ಒದಗಿಸಲಾಗುವುದು’ ಎಂಬುದಾಗಿ ಹೇಳಿ ಮೊಬೈಲ್‌ ನಂಬರ್ ಸಹಿತ ಆರೋಪಿ ಸಂದೇಶ ಹರಿಬಿಟ್ಟಿದ್ದ. ಹಲವು ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡಿತ್ತು.’

‘ಸಂದೇಶ ನಂಬಿದ್ದ ದೂರುದಾರ, ತಮ್ಮ ತಾಯಿಗೆ ಬೆಡ್‌ ಕೊಡಿಸುವಂತೆ ಕೋರಿ ಆರೋಪಿಯನ್ನು ಸಂಪರ್ಕಿಸಿದ್ದರು. ‘ಬೆಡ್‌ ಕೊಡಿಸಲು ಹಣ ಖರ್ಚಾಗುತ್ತದೆ’ ಎಂದಿದ್ದ ಆರೋಪಿ, ದೂರುದಾರರಿಂದ ಗೂಗಲ್ ಪೇ ಮೂಲಕ ₹ 20,000 ಪಡೆದಿದ್ದ. ಅದಾದ ನಂತರ ದೂರುದಾರರ ಮೊಬೈಲ್ ನಂಬರ್ ಬ್ಲಾಕ್‌ ಮಾಡಿ ನಾಪತ್ತೆಯಾಗಿದ್ದ’ ಎಂದೂ ಹರೀಶ್ ಪಾಂಡೆ ಹೇಳಿದರು.

‘ದೂರುದಾರರ ತಂದೆ–ತಾಯಿ ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ತಾಯಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ಅವರಿಗಾಗಿ ಐಸಿಯು ಬೆಡ್‌ ಹುಡುಕುತ್ತಿದ್ದರು. ಆದರೆ, ಏಪ್ರಿಲ್ 24ರಂದು ತಾಯಿ ತೀರಿಕೊಂಡಿದ್ದಾರೆ. ಮರುದಿನ ತಂದೆ ಸಹ ಅಸುನೀಗಿದ್ದಾರೆ. ಅವರಿಬ್ಬರ ಅಂತ್ಯಕ್ರಿಯೆ ಮುಗಿಸಿದ ಬಳಿಕ ದೂರುದಾರ ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ಅವರು ವಿವರಿಸಿದರು.

‘ತಮಗಾದ ವಂಚನೆ ಬೇರೆ ಯಾರಿಗೂ ಆಗಬಾರದೆಂದು ದೂರುದಾರರು ಬಯಸಿದ್ದರು. ದೂರು ದಾಖಲಾಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಗಿದೆ. ಇಂಥ ಆರೋಪಿಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಬೆಡ್‌ ಹಂಚಿಕೆ ಪ್ರಕ್ರಿಯೆ ಸಾಫ್ಟ್‌ವೇರ್‌ ಮೂಲಕ ಆಗುತ್ತಿದ್ದು, ಯಾವುದೇ ಹಣ ನೀಡಬೇಕಿಲ್ಲ. ಶ್ರೀಮಂತರು ಹಾಗೂ ಬಡವರೆಂಬ ತಾರತಮ್ಯವೂ ಇಲ್ಲ’ ಎಂದರು.

‘ಸಿಟಿ ಸ್ಕ್ಯಾನ್‌ಗೆ ಏಕರೂಪದರ ನಿಗದಿಪಡಿಸಿ’
ಬೆಂಗಳೂರು
: ‘ಖಾಸಗಿ ಸಿಟಿ ಸ್ಕ್ಯಾನ್‌ ಸೆಂಟರ್‌ಗಳು ಮನಸೋ ಇಚ್ಛೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಹಾಗಾಗಿ, ಏಕರೂಪದ ದರ ವನಿಗದಿಪಡಿಸಬೇಕು’ ಎಂದು ಸಂಸದ ಪಿ.ಸಿ. ಮೋಹನ್ ಅವರು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

‘ಕೋವಿಡ್ ಎರಡನೇ ಅಲೆಯಲ್ಲಿ ವಿವಿಧ ರೀತಿಯ ರೋಗ ಲಕ್ಷಣಗಳು ಗೋಚರಿಸುತ್ತಿವೆ. ವೈದ್ಯರ ಸಲಹೆಯಂತೆ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿದರೆ ಕೆಲವರಿಗೆ ನೆಗಟಿವ್ ವರದಿ ಬರುತ್ತಿದೆ. ಆದರೆ, ಸಿಟಿ ಸ್ಕ್ಯಾನ್‌ನಲ್ಲಿ ಸೋಂಕಿತರಾಗಿರುವುದು ದೃಢಪಡುತ್ತಿದೆ. ಏಕರೂಪ ದರ ಇಲ್ಲದ ಕಾರಣ ಖಾಸಗಿ ಸಿಟಿ ಸ್ಕ್ಯಾನ್ ಸೆಂಟರ್‌ಗಳು ಹೆಚ್ಚಿನ ಹಣ ಪಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ’ ಎಂದು ತಿಳಿಸಿದ್ದಾರೆ.

**

ಐಸಿಯು ಬೆಡ್‌, ಆಕ್ಸಿಜನ್ ಹಾಗೂ ಇತರೆ ಸೇವೆ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟು ವಂಚಿಸಲು ಯತ್ನಿಸುವರ ಬಗ್ಗೆ ಸಾರ್ವಜನಿಕರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು.
-ಹರೀಶ್ ಪಾಂಡೆ,ದಕ್ಷಿಣ ವಿಭಾಗದ ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT