ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ: ಸಂಚಾರ ದಟ್ಟಣೆಯಿಂದ ಹೈರಾಣಾದ ನಾಗರಿಕರು

Published 13 ಮೇ 2024, 4:45 IST
Last Updated 13 ಮೇ 2024, 4:45 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಕಾರಣಕ್ಕೆ ಜನ ಬೇಸತ್ತು ಹೋಗಿದ್ದಾರೆ. ಕೆಲಸ–ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ತಾಲ್ಲೂಕಿನ ಹಾಗೂ ಚಿಂಚೋಳಿ ತಾಲ್ಲೂಕಿನ ಹಲವು ಗ್ರಾಮಗಳ ನಾಗರಿಕರು ನಿತ್ಯ ಹೈರಾಣಾಗುತ್ತಿದ್ದಾರೆ.

ಪಟ್ಟಣದಲ್ಲಿ ಪೊಲೀಸರು ಇದ್ದೂ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ಓಡಿಸುವುದು, ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವುದು. ಬೇಕಾ ಬಿಟ್ಟಿಯಾಗಿ ಪಾರ್ಕಿಂಗ್‌ ಮಾಡುವುದು. ರಸ್ತೆ ಮಧ್ಯದಲ್ಲಿಯೇ ತಳ್ಳು ಬಂಡಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತ ನಿಲ್ಲುವುದು ನಡೆದೇ ಇದೆ. ಇದರಿಂದ ಸಂಚಾರಕ್ಕೆ ರಸ್ತೆ ಮೇಲೆ ಸ್ಥಳವಿಲ್ಲದಂತಾಗಿದೆ.

ಭಾರಿ ವಾಹನಗಳ ಪ್ರವೇಶ, ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ, ಪೊಲೀಸ್ ಸಿಬ್ಬಂದಿ ಕೊರತೆ, ಎಲ್ಲೆಂದರಲ್ಲಿ ಖಾಸಗಿ ವಾಹನಗಳ ನಿಲುಗಡೆ ಪಟ್ಟಣದ ಸಂಚಾರ ಶಿಸ್ತನ್ನು ಹಾಳು ಮಾಡಿದೆ.

ಪಟ್ಟಣದ ಹಳೆ ಪ್ರದೇಶವಾದ ಅಗಸಿ ಹೊರಗಡೆಯ ರಸ್ತೆಗಳು ಇದ್ದು ಇಲ್ಲವಾಗಿವೆ. ನಡು ರಸ್ತೆಗಳ ಮೇಲೇಯೇ ಬೈಕ್‌ ನಿಲ್ಲಿಸಿಕೊಂಡು ಸವಾರರು ಒಬ್ಬರಿಗೊಬ್ಬರು ಮಾತನಾಡುತ್ತ ಗಂಟೆಗಟ್ಟಲೇ ನಿಲ್ಲುತ್ತಾರೆ. ಕಾರು, ಆಟೊಗಳು ಬಂದು ಶಬ್ದ ಮಾಡಿದರೂ ಬೈಕ್‌ ಸವಾರರು ರಸ್ತೆ ಬಿಟ್ಟು ಕದಲುವುದಿಲ್ಲ. ರಸ್ತೆಯ ಎರಡೂ ಬದಿಗಳಲ್ಲಿ ಚಹದ ಅಂಗಡಿಗಳು ಇರುವುದರಿಂದ ಅಗಸಿ ಓಣಿಯ ಎಲ್ಲ ನಾಗರಿಕರು ಹೋಟೆಲ್‌ಗಳ ಮುಂದೆಯೇ ಜಮಾಯಿಸುತ್ತಾರೆ. ಇದರಿಂದ ಸಂಚಾರಕ್ಕೆ ಸವಾರರು ಸಂಕಟ ಪಡುವಂತಾಗಿದೆ.

ಶಿವಾಜಿ ವೃತ್ತದಲ್ಲಿ ವಾಹನಗಳು ವೃತ್ತ ಸುತ್ತು ಹಾಕಿ ಮುಂದೆ ಹೋಗುವುದಕ್ಕೂ ಆಗುತ್ತಿಲ್ಲ. ಸುತ್ತಲಿನ ಪ್ರದೇಶ ವಾಹನಗಳಿಂದ ತುಂಬಿರುತ್ತದೆ. ಕಾರು ಹಾಗೂ ಆಟೊಗಳು ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವುದರಿಂದ ಭಾರಿ ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತಿದೆ.

ನಿರ್ಮಾಣವಾಗದ ಬೈಪಾಸ್‌: ಹುಮನಾಬಾದ್‌ ಕಡೆಯಿಂದ ಬರುವ ರಸ್ತೆಗೆ ಖಾನಸಾರಿ ಸಕ್ಕರೆ ಕಾರ್ಖಾನೆ ಸಮೀಪ ನಿರ್ಮಾಣ ಮಾಡುತ್ತಿರುವ ಕುಡಂಬಲ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ ನಿರ್ಮಾಣ ಕಾರ್ಯ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ಕಾಮಗಾರಿ ಪೂರ್ಣಗೊಳಿಸಲು ಪುರಸಭೆ ಕ್ರಮ ಕೈಗೊಂಡಿಲ್ಲ.

ಹೀಗಾಗಿ ಪಟ್ಟಣದ ಮೂಲಕವೇ ಗೂಡ್ಸ್ ವಾಹನಗಳು, ಖಾಸಗಿ ವಾಹನಗಳು, ಮರಳು ತುಂಬಿದ ಲಾರಿಗಳು ಮತ್ತು ಸರಕು ಸಾಗಿಸುವ ಭಾರಿ ವಾಹನಗಳು ಕೂಡ ಒಂದೇ ದಾರಿಯಲ್ಲಿ ಸಂಚರಿಸುತ್ತಿವೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆಗಳು ಕೂಡ ಬೇಗ ಹಾಳಾಗುತ್ತಿವೆ. ಅಲ್ಲದೇ, ಆಗಾಗ ರಸ್ತೆ ಅಪಘಾತಗಳು, ಟ್ರಾಫಿಕ್ ಕಿರಿ ಕಿರಿ ಹೆಚ್ಚಾಗುತ್ತಿದೆ.

ಪೊಲೀಸರಿಗೂ ಬೆಲೆ ಇಲ್ಲ: ಪೊಲೀಸ್‌ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಅನೇಕ ಬಾರಿ ಜನ ಜಾಗೃತಿ ಸಭೆ ನಡೆಸಿ, ಎಚ್ಚರಿಕೆ ನೀಡಿದರೂ ಬೈಕ್‌ ಸವಾರರು, ಆಟೊ ಚಾಲಕರು, ಖಾಸಗಿ ವಾಹನದವರು ಬೆಲೆ ಕೊಡುತ್ತಿಲ್ಲ. ಯಾರೂ ಸಂಚಾರ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮೇಲಿಂದ ಮೇಲೆ ಅಪಘಾತಗಳು ಕೂಡ ಸಂಭವಿಸುತ್ತಿವೆ.

ಖಾಸಗಿ ವಾಹನದವರು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗೂಡ್ಸ್ ವಾಹನ ಚಾಲಕರಿಗೆ ಪ್ರತ್ಯೇಕ ಸಮಯದಲ್ಲಿ ಅಂಗಡಿಕಾರರಿಗೆ ಸರಕುಗಳನ್ನು ವಿತರಣೆ ಮಾಡುವಂತೆ ಸೂಚನೆ ನೀಡಬೇಕಿದೆ. ಜನದಟ್ಟಣೆ ಇರುವ ಸಮಯದಲ್ಲಿಯೇ ಮುಖ್ಯ ಬೀದಿಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸರಕುಗಳನ್ನು ಅಂಗಡಿಗಳಿಗೆ ವಿತರಿಸುವುದರಿಂದ ಕಿರಿಕಿರಿ ಹೆಚ್ಚಾಗುತ್ತಿದೆ.

ವೈಯಕ್ತಿಕ ಕೆಲಸ–ಕಾರ್ಯಗಳಿಗೆ ಹೋಗುವ ಜನರಿಗೆ, ಶಾಲಾ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ವಯೋವೃದ್ಧರಿಗೆ ತೊಂದರೆಯಾಗುತ್ತಿದೆ.

ಪಟ್ಟಣದ ಮುಖ್ಯ ವೃತ್ತಗಳಲ್ಲಿ ಹಾಗೂ ಅನೇಕ ಸ್ಥಳಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ. ಗಾಂಧಿ, ಬಸವೇಶ್ವರ ಹಾಗೂ ಶಿವಾಜಿ ವೃತ್ತಗಳಲ್ಲಿ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಕಂಡುಬರುತ್ತದೆ. ಪಟ್ಟಣದಲ್ಲಿನ ಪ್ರಮುಖ ರಸ್ತೆಗಳು ಅಗಲವಾಗಿದ್ದರೂ ಅಂಗಡಿಕಾರರು ಫುಟ್‌ಪಾತ್‌ ಅತಿಕ್ರಮಣ ಮಾಡಿ ರಸ್ತೆಗಳ ಮೇಲೆ ವ್ಯಾಪಾರ–ವಹಿವಾಟು ನಡೆಸುತ್ತಿದ್ದಾರೆ. ಪುರಸಭೆ ಸಿಬ್ಬಂದಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಪಾಟೀಲ ಆಗ್ರಹಿಸಿದ್ದಾರೆ.

ಭಾರಿ ವಾಹನಗಳು ದಿನ ಪೂರ್ತಿ ಒಳಗಡೆ ಬರುವುದರಿಂದ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಭಾರಿ ವಾಹನಗಳನ್ನು ಬೆಳಗಿನ ಸಮಯ ಮಾತ್ರ ಸೀಮಿತ ಮಾಡಿದರೆ ಸಮಸ್ಯೆ ಬಗೆಹರಿಯಬಹುದು ಎನ್ನುವುದು ಇಲ್ಲಿಯ ನಾಗರಿಕರ ಆಗ್ರಹ.

ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರದೇಶದ ರಸ್ತೆಯಲ್ಲಿ ಈಗಾಗಲೇ ಒಂದು ಬದಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ನಾಮಫಲಕಗಳನ್ನೂ ಅಳವಡಿಸಲಾಗಿದೆ. ಆದರೂ ಜನ ಬೇಕಾ ಬಿಟ್ಟಿಯಾಗಿ ವರ್ತಿಸುತ್ತಿರುವುದರಿಂದ ಸಂಚಾರ ಸಮಸ್ಯೆಯಾಗುತ್ತಿದೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು

–ಶ್ರೀನಿವಾಸ ಅಲ್ಲಾಪುರ್ ಸಿಪಿಐ ಚಿಟಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT