ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳದಲ್ಲೇ ಮಾಲಿನ್ಯ ಪತ್ತೆ ಮಾಡುವ ಹೈಟೆಕ್‌ ವಾಹನ

ವಾಯು ಮಾಲಿನ್ಯ ನಿಯಂತ್ರಣಕ್ಕೆ ಮಂಡಳಿ ದಿಟ್ಟ ಕ್ರಮ
Last Updated 22 ಜುಲೈ 2019, 20:23 IST
ಅಕ್ಷರ ಗಾತ್ರ

ಬೀದರ್‌: ಕೈಗಾರಿಕೆಗಳು ಹೊರ ಸೂಸುತ್ತಿರುವ ಹೊಗೆ ಹಾಗೂ ತ್ಯಾಜ್ಯದಿಂದ ವಾಯು ಮಾಲಿನ್ಯಗೊಳ್ಳುತ್ತಿರುವುದನ್ನು ತಡೆಗಟ್ಟುವ ದಿಸೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದಿಟ್ಟ ಕ್ರಮ ಕೈಗೊಂಡಿದೆ.

ಕೈಗಾರಿಕೆಗಳ ಆವರಣದಲ್ಲಿಯೇ ಮಾಲಿನ್ಯ ಪತ್ತೆ ಮಾಡುವ ಹೈಟೆಕ್‌ ವಾಹನ ಬಂದು ನಿಲ್ಲುತ್ತಿರುವುದು ಬೇಕಾಬಿಟ್ಟಿಯಾಗಿ ಗಾಳಿಯಲ್ಲಿ ಅನಿಲ ಬಿಡುತ್ತಿದ್ದ ಕೈಗಾರಿಕೆಗಳ ಮಾಲೀಕರಿಗೆ ಚುರುಕು ಮುಟ್ಟಿಸಿದೆ.

ಸಾರ್ವಜನಿಕರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ ತಕ್ಷಣ ಮಂಡಳಿಯ ಅಧಿಕಾರಿಗಳು ಬಳ್ಳಾರಿಯಲ್ಲಿ ಸ್ಥಾಪಿಸಲಾಗಿರುವ ಕೇಂದ್ರದ ಅಧಿಕಾರಿಗಳಿಗೆ ಸಂದೇಶ ಕಳಿಸುತ್ತಿದ್ದಾರೆ. ಅಲ್ಲಿಯ ಅಧಿಕಾರಿಗಳು ತಕ್ಷಣ ಕೈಗಾರಿಕೆ ಪ್ರದೇಶಕ್ಕೆ ವಾಹನ ಕಳಿಸುತ್ತಿದ್ದಾರೆ. ಆಧುನಿಕ ಉಪಕರಣಗಳನ್ನು ಹೊಂದಿರುವ ಸಂಚಾರ ವಾಹನ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದೆ. ನಂತರ ವಿವರವಾದ ವರದಿಯನ್ನೂ ಕೊಡುತ್ತಿರುವ ಕಾರಣ ದಂಡದಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ₹ 1.40 ಕೋಟಿ ವೆಚ್ಚದಲ್ಲಿ ಖರೀದಿಸಿದ ನಿರಂತರ ಶುದ್ಧ ಗಾಳಿ ಗುಣಮಟ್ಟ ಪರಿಶೀಲನಾ ವಾಹನವು ಅಧಿಕಾರಿಗಳು ಸೂಚಿಸಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತದೆ. ಕ್ಷಣಾರ್ಧದಲ್ಲಿ ವಿವರ ವರದಿಯನ್ನು ಇಂಟರ್ನೆಟ್‌ ಮೂಲಕ ಹೈದರಾಬಾದ್‌ನಲ್ಲಿರುವ ಇಕೊ ಟೆಕ್‌ ಏಜೆನ್ಸಿಗೆ ಕಳಿಸಿಕೊಡುತ್ತಿದೆ. ಈ ಏಜೆನ್ಸಿಯು ದೂರು ಬಂದ ಸಂಬಂಧಪಟ್ಟ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುತ್ತಿದೆ’ ಎಂದು ಸ್ಟೇಶನ್‌ ಆಪರೇಟರ್‌ ಶರಣಬಸವ ಕಲ್ಲೂರಮಠ ಹೇಳುತ್ತಾರೆ.

ಗಾಳಿಯಲ್ಲಿನ ಕಶ್ಮಲಪತ್ತೆ ಮಾಡಲು ಮಂಡಳಿಯು ಎರಡು ಆಧುನಿಕ ತಂತ್ರಜ್ಞಾನದ ವಾಹನಗಳನ್ನು ಖರೀದಿಸಿದೆ. ಒಂದನ್ನು ದಕ್ಷಿಣ ಕರ್ನಾಟಕಕ್ಕೆ, ಇನ್ನೊಂದನ್ನು ಉತ್ತರ ಕರ್ನಾಟಕಕ್ಕೆ ನೀಡಿದೆ. ವಾಹನದಲ್ಲಿ ಒಬ್ಬರು ಚಾಲಕ ಹಾಗೂ ಸ್ಟೇಶನ್‌ ಆಪರೇಟರ್‌ ಇದ್ದಾರೆ. ಯಾವ ಜಿಲ್ಲೆಗೆ ವಾಹನ ತೆರಳುವುದೋ ಅಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಒಬ್ಬ ಕ್ಷೇತ್ರ ಅಧಿಕಾರಿ ಬಂದು ಸಮೀಕ್ಷೆಗೆ ಸಹಕಾರ ನೀಡುತ್ತಾರೆ.

ಬಳ್ಳಾರಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ದೂರುಗಳ ಆಧಾರದ ಮೇಲೆ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ವಾಹನ ತೆರಳುತ್ತದೆ.

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಯುತ್ತಿರುವುದರಿಂದ ಗಾಳಿಯಲ್ಲಿ ದೂಳು ಅಧಿಕ ಇದೆ. ಕೆಲ ಕಡೆ ಕೈಗಾರಿಕೆಗಳಿಂದಾಗಿ ವಾಯು ಮಾಲಿನ್ಯ ಹೆಚ್ಚಿದೆ. ನಾಲ್ಕು ದಿನಗಳ ಹಿಂದೆ ವಾಹನ ಹುಮನಾಬಾದ್ ಹಾಗೂ ಕೊಳಾರ ಕೈಗಾರಿಕೆ ಪ್ರದೇಶಕ್ಕೆ ತೆರಳಿ ವಾಯು ಮಾಲಿನ್ಯ ಪರಿಶೀಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT