ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ವಿಘ್ನ ನಿವಾರಕನಿಗೆ ಕೊರೊನಾ ವಿಘ್ನ

ಗ್ರಾಹಕರ ಕಷ್ಟ ಅರಿತು ಕಡಿಮೆ ಬೆಲೆಗೆ ಮೂರ್ತಿ ಮಾರಾಟ
Last Updated 19 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಬೀದರ್: ಭಕ್ತರ ವಿಘ್ನ ವಿನಾಶಕ ವಿಘ್ನೇಶ್ವರನಿಗೂ ಈ ಬಾರಿ ಕೊರೊನಾ ಬಿಸಿ ತಟ್ಟಿದೆ. ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದರೂ ನಾಲ್ಕು ಅಡಿಗೂ ಹೆಚ್ಚು ಎತ್ತರದ ಲಂಬೋದರನ ಮೂರ್ತಿಗಳು ಬೀದರ್ ಜಿಲ್ಲೆಯೊಳಗೆ ಪ್ರವೇಶಿಸಲಾಗದೆ ಮರಳುತ್ತಿವೆ.

ನೆರೆಯ ತೆಲಂಗಾಣದ ಹೈದರಾಬಾದ್ ಹಾಗೂ ಮಹಾರಾಷ್ಟ್ರದ ಸೋಲಾಪುರದಿಂದ ಪ್ರತಿ ವರ್ಷ ನೂರಾರು ಗಣಪತಿ ಮೂರ್ತಿಗಳು ಬೀದರ್ ಜಿಲ್ಲೆಗೆ ಬರುತ್ತಿದ್ದವು. ಜಿಲ್ಲೆ ಹಿಂದಿನಿಂದಲೂ ನೆರೆಯ ರಾಜ್ಯದ ಕಲಾವಿದರ ಮೂರ್ತಿಗಳಿಗೂ ದೊಡ್ಡ ಮಾರುಕಟ್ಟೆ ಒದಗಿಸುತ್ತಲೇ ಬಂದಿದೆ. ಆದರೆ, ಈ ಬಾರಿ ಗಣೇಶನ ಮೂರ್ತಿಯ ಎತ್ತರಕ್ಕೂ ನಿರ್ಬಂಧ ಹಾಕಿದ ನಂತರ ಮೂಷಿಕ ವಾಹನದ ಮೇಲೆ ಬರುತ್ತಿದ್ದ ಗಣೇಶನಿಗೆ ಜಿಲ್ಲೆಯಲ್ಲಿ ಪ್ರತಿ ವರ್ಷ ಸಿಗುತ್ತಿದ್ದ ಅದ್ಧೂರಿ ಸ್ವಾಗತಕ್ಕೂ ಕಡಿವಾಣ ಬಿದ್ದಿದೆ.

ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡ ಅನೇಕ ಜನ ಮನೆಯಲ್ಲಿ ಚಿಕ್ಕದಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲೂ ಮೂರ್ತಿಗಳ ಮಾರಾಟದ ಭರಾಟೆ ಕಂಡು ಬರುತ್ತಿಲ್ಲ.

ಮಾರುಕಟ್ಟೆಯಲ್ಲಿ ಇಷ್ಟೊತ್ತಿಗೆ ಅಲಂಕಾರಿಕ ವಸ್ತುಗಳು, ಹೂಮಾಲೆಗಳು, ಝಗಮಗಿಸುವ ವಿದ್ಯುತ್ ದೀಪಗಳ ಮಾರಾಟ ತಡ ರಾತ್ರಿಯ ವರೆಗೂ ನಡೆಯುತ್ತಿತ್ತು. ಇದೀಗ ಮಾರುಕಟ್ಟೆಯಲ್ಲಿ ಕೊಳ್ಳುವ ಗ್ರಾಹಕರ ದಟ್ಟಣೆ ಇಲ್ಲ. ವ್ಯಾಪಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಶೀಘ್ರ ಸೋಂಕು ತೊಲಗಲಿ ಎಂದು ಭಕ್ತರು ವಿಘ್ನ ನಿವಾರಕನ ಮೊರೆ ಹೋಗಿದ್ದಾರೆ.

ಯುಗಾದಿಯ ನಂತರ ಮೂರ್ತಿಕಾರರು ನದಿ, ಕೆರೆಯಿಂದ ಮಣ್ಣು ತಂದು ಗಣಪತಿ ಮೂರ್ತಿ ತಯಾರಿಕೆ ಪ್ರಕ್ರಿಯೆ ಶುರು ಮಾಡುತ್ತಿದ್ದರು. ಲಾಕ್‌ಡೌನ್ ಹೇರಿಕೆಯಾಗಿ ಮೂರ್ತಿಗಳನ್ನು ರೂಪಿಸುವ ಕಲಾವಿದರಿಗೆ ಮಣ್ಣು ತರುವುದೇ ಕಷ್ಟವಾಯಿತು. ಸಾರ್ವಜನಿಕ ಗಣೇಶೋತ್ಸವ ನಡೆಯುವುದು ಅನುಮಾನವಾಗಿ ಕೆಲವರು ಮೂರ್ತಿ ಮಾಡಲು ಹಿಂಜರಿದಿದ್ದಾರೆ.

ಸರ್ಕಾರ ಆಟೊ ಚಾಲಕರು, ಕ್ಷೌರಿಕರು ಸೇರಿದಂತೆ ಹಲವು ವೃತ್ತಿಯವರಿಗೆ ನೆರವು ನೀಡಿದೆ. ಆದರೆ, ಕಲಾವಿದರನ್ನೇ ಮರೆತಿದೆ ಎಂದು ಕಲಾವಿದ ಪ್ರವೀಣ ಗುತ್ತೆ ಬೇಸರ ವ್ಯಕ್ತಪಡಿಸಿದ್ದಾರೆ.

ಕಡಿಮೆ ಬೆಲೆಗೆ ಮೂರ್ತಿಗಳ ಮಾರಾಟ

ಬೀದರ್: ಕೊರೊನಾದಿಂದಾಗಿ ಗಣೇಶನ ಭಕ್ತರು ಸಹ ಆರ್ಥಿಕ ಸಂಕಷ್ಟದಲ್ಲಿ ಇರುವ ಕಾರಣ ಓಲ್ಡ್‌ಸಿಟಿಯ ಕಲಾವಿದ ವಿಜಯಕುಮಾರ ಅವರು ಅತ್ಯಂತ ಕಡಿಮೆ ಬೆಲೆಯಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಗ್ರಾಹಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಸಣ್ಣ ಸಣ್ಣ ಮೂರ್ತಿಗಳನ್ನು ತಯಾರಿಸಿ ₹ 8 ರಿಂದ ₹ 50ರ ವರೆಗೆ ಮಾರಾಟ ಮಾಡುತ್ತಿದ್ದೇವೆ. ದೊಡ್ಡ ಮೂರ್ತಿಗಳಿಗೆ ಬೇಡಿಕೆ ಕಡಿಮೆಯಾಗಿರುವ ಕಾರಣ ಹೈದರಾಬಾದ್‌ನಿಂದ ನಾಲ್ಕು ಅಡಿ ಎತ್ತರದ ಎಂಟು ಮೂರ್ತಿಗಳನ್ನು ಮಾತ್ರ ಮಾರಾಟಕ್ಕೆ ತಂದಿದ್ದೇವೆ ಎಂದು ಹೇಳುತ್ತಾರೆ ಕಲಾವಿದ ವಿಜಯಕುಮಾರ.

‘ಲಾಕ್‌ಡೌನ್‌ನಿಂದ ಅನೇಕ ಫ್ಯಾಕ್ಟರಿಗಳು ಮುಚ್ಚಿವೆ. ಮಾರುಕಟ್ಟೆಯಲ್ಲಿ ಬಣ್ಣದ ಬೆಲೆಯಲ್ಲಿ ಹೆಚ್ಚಳವಾಗಿದೆ. ಆದರೂ ಮೂರ್ತಿಗಳ ಬೆಲೆ ಏರಿಸಿಲ್ಲ. ನಾನು ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್‌ಡೌನ್ ನಂತರ ಮನೆಗೆ ಮರಳಿ ಮೂರ್ತಿ ತಯಾರು ಮಾಡಲು ತಂದೆಗೆ ನೆರವಾಗಿದ್ದೇನೆ’ ಎಂದು ತಿಳಿಸುತ್ತಾರೆ.

ನಮ್ಮ ಕುಟುಂಬದವರು ಕಳೆದ 25 ವರ್ಷಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂದ್ದಾರೆ. ಇಂತಹ ಕಷ್ಟ ಎಂದೂ ಬಂದಿರಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಅವರು.


ಸೌಂಡ್‌ ಸಿಸ್ಟಮ್‌ ಮಾಲೀಕರ ಮನವಿ

ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ನೀಡಿ ಪರಿಷ್ಕೃತ ಆದೇಶ ಹೊರಡಿಸುತ್ತಿದ್ದಂತೆಯೇ ಪೆಂಡಾಲ್, ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್‌ ಮಾಲೀಕರು ನಮಗೂ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ.

ಸಾರ್ವಜನಿಕ ಗಣೇಶ ಉತ್ಸವಕ್ಕೆ ಅನುಮತಿ ಕೊಟ್ಟಿರುವುದು ಸಂತಸ ತಂದಿದೆ. ಬದುಕು ಸಾಗಿಸುವುದಕ್ಕಾಗಿಯೇ
ಸಾಲ ಮಾಡಿ ಸೌಂಡ್ ಸಿಸ್ಟಮ್ ಖರೀದಿ ಮಾಡಿದ್ದೇವೆ. ಜಿಲ್ಲೆಗೆ ಕೋವಿಡ್ ಸೋಂಕು ಪ್ರವೇಶಿಸಿದ ನಂತರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಲಾಕ್‌ಡೌನ್ ಅವಧಿಯಲ್ಲಿ ಎಲ್ಲ ವ್ಯವಹಾರ ಸ್ಥಗಿತಗೊಂಡಿದ್ದರಿಂದ ಸಾಲ ಮರು ಪಾವತಿ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ನಿಯಮಾವಳಿಗಳ ಇತಿಮಿತಿಯಲ್ಲೇ ಗಣೇಶ ಉತ್ಸವದಲ್ಲಿ ನಮಗೂ ಅನುಮತಿ ಕೊಟ್ಟು ಬದುಕಲು ಅವಕಾಶ ಕೊಡಬೇಕು ಎಂದು ಲೈಟ್ ಆ್ಯಂಡ್ ಸೌಂಡ್ ಸಿಸ್ಟಮ್‌ ಮಾಲೀಕ ರವೀಂದ್ರ ಕರಂಜೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT