ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಯುವ ಜೋಡಿಗೆ ಬದುಕು ನೀಡಿದ ಎಲ್‌ಇಡಿ ದೀಪ

Last Updated 4 ಡಿಸೆಂಬರ್ 2022, 6:50 IST
ಅಕ್ಷರ ಗಾತ್ರ

ಔರಾದ್: ಸಮೀಪದ ಕೊರೆಕಲ್ ಗ್ರಾಮದ ಯುವ ಜೋಡಿ ಎಲ್‌ಇಡಿ ದೀಪ ತಯಾರಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.

ಪಿಯುಸಿ ಓದಿದ ಅಂಬಿಕಾ ಹಾಗೂ ಐಟಿಐ ಓದಿದ ವೆಂಕಟ ತೋರಣೆಕರ್ ದಂಪತಿ ಎಲ್‌ಇಡಿ ದೀಪ ತಯಾರಿಸಿ ಕೈತುಂಬ ಹಣ ಮಾಡಿಕೊಂಡು ಸುಂದರ ಬದುಕು ಸಾಗಿಸುತ್ತಿದ್ದಾರೆ.

ವೃತ್ತಿಯಲ್ಲಿ ಟೈಲರ್ ಆಗಿರುವ ಅಂಬಿಕಾ ಹಾಗೂ ಆಟೊ ಚಾಲಕರಾಗಿರುವ ವೆಂಕಟ ಲಾಕ್‌ಡೌನ್ ವೇಳೆ ಕೆಲಸ ಇಲ್ಲದೆ ಕಷ್ಟ ಅನುಭವಿಸಿದ್ದರು. ಏನು ಯೂಟ್ಯೂಬ್‌ನಲ್ಲಿ ಎಲ್‌ಇಡಿ ದೀಪ ತಯಾರಿಸುವುದನ್ನು ನೋಡಿದರು. ಮಧ್ಯಪ್ರದೇಶದ ಸತ್ಯಂ ದೀಪ ತಯಾರಿಕಾ ಕಂಪನಿಯನ್ನು ಸಂಪರ್ಕಿಸಿದರು. ಅವರಿಂದಲೇ ಆನ್‌ಲೈನ್‌ನಲ್ಲೇ ತರಬೇತಿ ಪಡೆದುಕೊಂಡರು. ಅಲ್ಲಿಂದಲೇ ದೀಪ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ತರಿಸಿಕೊಂಡು ಈಗ ಖುದ್ದಾಗಿ ತಾವೇ ಎಲ್‌ಇಡಿ ದೀಪ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

‘ನಾವು ಈಗ 9 ಹಾಗೂ 12 ವ್ಯಾಟ್‌ನ ಎಲ್‌ಇಡಿ ದೀಪ ತಯಾರಿಸುತ್ತಿದ್ದೇವೆ. ಇಲ್ಲಿಯ ತನಕ 5 ಸಾವಿರ ದೀಪ ತಯಾರಿಸಿದ್ದೇವೆ. 9 ವ್ಯಾಟ್‌ನ ದೀಪ ₹70 ಹಾಗೂ 12 ವ್ಯಾಟ್ ದೀಪ ₹100ಕ್ಕೆ ಮಾರಾಟ ಮಾಡುತ್ತಿದ್ದೇವೆ. ಅಕ್ಕ-ಪಕ್ಕದ ಊರಿನವರು ನಮ್ಮ ಮನೆ ತನಕ ಬಂದು ದೀಪ ಕೊಂಡೊಯ್ಯುತ್ತಿದ್ದಾರೆ. ಹೆಚ್ಚಿನ ಬೇಡಿಕೆ ಇರುವ ಕಡೆ ನಾನೇ ಅಟೊದಲ್ಲಿ ಅವರ ಅಂಗಡಿ ತನಕ ಪೂರೈಸುತ್ತಿದ್ದೇನೆ’ ಎಂದು ವೆಂಕಟ ತೋರಣೆಕರ್ ಹೇಳುತ್ತಾರೆ.

‘ಬೇಡಿಕೆಗೆ ತಕ್ಕಂತೆ ನಾವು ನಿತ್ಯ 50 ರಿಂದ 100 ದೀಪ ತಯಾರಿಸುತ್ತೇವೆ. ನಮ್ಮದು ಗುಣಮಟ್ಟದ ಬಲ್ಬ್. ಈಗ ಮಾರಾಟವಾದ 5 ಸಾವಿರ ಬಲ್ಬ್ ಪೈಕಿ 80 ಬಲ್ಬ್‌ಗಳಲ್ಲಿ ಮಾತ್ರ ಸ್ವಲ್ಪ ಸಮಸ್ಯೆ ಕಾಣಿಸಿಕೊಂಡಿದೆ. ಅವನ್ನೂ ದುರಸ್ತಿ ಮಾಡಿ ಗ್ರಾಹಕರಿಗೆ ಒಪ್ಪಿಸಿದ್ದೇವೆ’ ಎನ್ನುತ್ತಾರೆ ಅಂಬಿಕಾ ತೋರಣೆಕರ್.

‘ಲಾಕ್‌ಡೌನ್ ಸಮಯದಲ್ಲಿ ನಾವು ಕಷ್ಟದ ದಿನಗಳನ್ನು ಕಳೆದೆವು. ಈಗ ಕಡಿಮೆ ಅಂದರೆ ವರ್ಷಕ್ಕೆ ₹1.50 ಲಕ್ಷ ಹಣ ಗಳಿಸುತ್ತಿದ್ದೇವೆ. ಮುಂದೆ ಈಗ 15 ವ್ಯಾಟ್‌ನ ಬಲ್ಬ್ ತಯಾರಿಸುವ ವಿಚಾರವೂ ಇದೆ. ಸ್ವಂತ ಕಂಪನಿ ಮಾಡಿ ಅದರಲ್ಲಿ ಅನೇಕ ಯುವಕ ಯುವತಿಯರಿಗೂ ಉದ್ಯೋಗ ಕೊಡಿಸುವ ಪ್ರಯತ್ನದಲ್ಲಿದ್ದೇವೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT