ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ಮಾವಿನ ಬೇಡಿಕೆ ಕಸಿದ ಕರ್ಫ್ಯೂ

ಗ್ರಾಹಕರ ಬರ, ದರವೂ ಕುಸಿತ
Last Updated 5 ಮೇ 2021, 5:33 IST
ಅಕ್ಷರ ಗಾತ್ರ

ಚಿಟಗುಪ್ಪ: ಕೋವಿಡ್‌ ತಡೆಗಾಗಿ ಸರ್ಕಾರ ವಿಧಿಸಿದ ಕರ್ಫ್ಯೂ ಪರಿಣಾಮ ಪಟ್ಟಣದ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಇಲ್ಲವಾಗಿದೆ. ಹೀಗಾಗಿ ಹಣ್ಣಿನ ವ್ಯಾಪಾರಿಗಳು ಮಾರಾಟಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಪಟ್ಟಣಕ್ಕೆ ಪ್ರತಿ ವರ್ಷ ಸುತ್ತಲಿನ ಕುಡಂಬಲ್‌, ವಳಖಿಂಡಿ, ಮುಸ್ತರಿ, ಇಟಗಾ, ಬೆಳಕೇರಾ ಇತರೆಡೆ ಗ್ರಾಮಗಳಿಂದ ಮಾವು ಹೊತ್ತುಕೊಂಡು ಬರುತ್ತಿದ್ದ ಮಹಿಳೆಯರಿಗೆ ಈ ಬಾರಿಯ ಕರ್ಫ್ಯೂ ಆಘಾತ ಉಂಟುಮಾಡಿದೆ.

ಸುಮಾರು ₹1ರಿಂದ ₹2 ಲಕ್ಷಗಳವರೆಗೂ ನೀಡಿ ಖರೀದಿ ಮಾಡಿದ ಮಾವಿನ ತೋಪುಗಳಲ್ಲಿಯ ಮರದ ಕಾಯಿಗಳನ್ನು ಹಣ್ಣು ಮಾಡಿಕೊಂಡು ಮಾರಾಟಕ್ಕೆ ತಂದಾಗ ಕೊಂಡುಕೊಳ್ಳುವ ಗ್ರಾಹಕರೇ ಇಲ್ಲ. ಇದರಿಂದ ಮಾವು ಮಾರಾಟವಾಗದೇ ಕೊಳೆಯುವ ಪರಿಸ್ಥಿತಿ ಉಂಟಾಗಿದೆ.

ರತ್ನಗಿರಿ ಆಪೂಸ್‌, ರಸಪುರಿ ಸೇರಿದಂತೆ ವಿವಿಧ ತಳಿಯ ಮಾವು ಮಾರ್ಚ್‌– ಏಪ್ರಿಲ್‌ ಅವಧಿಯಲ್ಲಿ ಪಟ್ಟಣಕ್ಕೆ ಮಹಾರಾಷ್ಟ್ರ, ತೆಲಂಗಾಣ ದಿಂದ ಬರುತ್ತಿತ್ತು. ಆದರೆ, ಕೊರೊನಾ ಸೋಂಕು ತಡೆಗಾಗಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ವಾಹನಗಳ ಸಂಚಾರ ನಿಂತು ಮಾವು ಬರಲು ಸಾಧ್ಯವಾಗಿಲ್ಲ.

‘ನಿತ್ಯ ಬೆಳಿಗ್ಗೆ 10 ಗಂಟೆವರೆಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದರೂ ನಮ್ಮ ಊರುಗಳಿಂದ ಪಟ್ಟಣಕ್ಕೆ ಬರುವಷ್ಟರಲ್ಲಿ 9 ಗಂಟೆ ಆಗುತ್ತದೆ. ಉಳಿದ ಒಂದು ಗಂಟೆಯಲ್ಲಿ ಹೆಚ್ಚೆಂದರೂ 8ರಿಂದ 10 ಕೆ.ಜಿ ವರೆಗೆ ಮಾತ್ರ ಮಾವು ಮಾರಾಟವಾಗುತ್ತವೆ. ಉಳಿದ ಎಲ್ಲ ಹಣ್ಣುಗಳು ಮರಳಿ ಮನೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಈ ಬಾರಿ ಬೆಲೆಯೂ ಕಡಿಮೆ ಆಗಿದೆ. ₹50 ರಿಂದ ₹60 ಗೆ ಒಂದು ಕೆ.ಜಿ ಮಾರಾಟ ಮಾಡುತ್ತಿರುವುದರಿಂದ ಹೆಚ್ಚಿನ ನಷ್ಟ ಆಗುತ್ತಿದೆ’ ಎಂದು ಮಾವು ಮಾರಾಟ ಮಾಡುವ ಕುಡಂಬಲ್‌ ಗ್ರಾಮದ ಮಹಿಳೆ ಸರಸ್ವತಿ ತಿಳಿಸುತ್ತಾರೆ.

ಮುಂಗಾರು ಮಳೆ ಜೂನ್‌ನಲ್ಲಿ ಆರಂಭವಾದರೆ ಮಾವಿನ ಹಣ್ಣುಗಳಲ್ಲಿ ಹುಳುಗಳಾಗುತ್ತವೆ ಎಂದುಕೊಂಡು ಬಹಳಷ್ಟು ಜನ ಹಣ್ಣು ಖರೀದಿಸುವುದಿಲ್ಲ. ಹೀಗಾಗಿ ಮಾವು ಬೆಳೆದ ರೈತರಲ್ಲಿ ಆತಂಕ ಮನೆ ಮಾಡಿದೆ. ಹೇಗಾದರೂ ಮಾಡಿ ತಾವು ಬೆಳೆದಿರುವ ಹಣ್ಣುಗಳನ್ನು ಬೇಗನೇ ಮಾರಾಟ ಮಾಡಬೇಕೆನ್ನುವ ಆತುರದಲ್ಲಿ ಗ್ರಾಹಕರು ಕೇಳಿದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

‘ಸರ್ಕಾರ ಮಾವು ಬೇಸಾಯ ಮಾಡಿದ ರೈತರಿಗೆ ಮತ್ತು ನಷ್ಟ ಅನುಭವಿಸಿದ ಮಾರಾಟಗಾರರಿಗೆ ಈ ಬಾರಿ ಪರಿಹಾರ ಧನ ನೀಡಬೇಕು’ ಎಂದು ರೈತ ಶಂಕರೆಪ್ಪ ವಳಖಿಂಡಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT