ಬುಧವಾರ, ನವೆಂಬರ್ 25, 2020
21 °C

ಬೀದರ್: ಕನ್ನಡ ನಾಮಫಲಕ ಅಳವಡಿಕೆಗೆ ಕರವೇ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ) 48 ಗಂಟೆಗಳ ಗಡುವು ನೀಡಿದೆ.

ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಶಿಕ್ಷಣ ಸೇರಿ ಸಂಘ ಸಂಸ್ಥೆ, ಖಾಸಗಿ ಆಸ್ಪತ್ರೆ, ಶೋ ರೂಂ, ಮಾಲ್, ಹೊಟೇಲ್, ಅಂಗಡಿ ಮುಂಗಟ್ಟುಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಬರೆಸಲು ಕ್ರಮ ಕೈಗೊಳ್ಳದಿದ್ದರೆ ನವೆಂಬರ್ 1 ರಂದು ಅನ್ಯ ಭಾಷೆ ನಾಮಫಲಕ ಹಾಗೂ ಜಾಹೀರಾತು ಫಲಕಗಳಿಗೆ ಮಸಿ ಬಳಿಯಲಾಗುವುದು. ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಸ್ಥಳೀಯ ಆಡಳಿತವೇ ನೇರ ಹೊಣೆಯಾಗಲಿದೆ ಎಂದು ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಎಚ್ಚರಿಕೆ ನೀಡಿದ್ದಾರೆ.

ನಾಮಫಲಕ ಸ್ಥಳದ ಶೇ 70 ರಷ್ಟು ಭಾಗದಲ್ಲಿ ಕಡ್ಡಾಯವಾಗಿ ಕನ್ನಡದಲ್ಲಿ ದಪ್ಪ ಅಕ್ಷರಗಳಲ್ಲಿ ನಾಮಫಲಕ ಬರೆಸುವಂತೆ ಒತ್ತಾಯಿಸಿ ವೇದಿಕೆಯಿಂದ ಬೀದರ್‍ನಲ್ಲಿ ಪ್ರತಿಭಟನೆ ನಡೆಸಿ ಆಡಳಿತದ ಗಮನ ಸೆಳೆಯಲಾಗಿತ್ತು. ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನೂ ಕೊಟ್ಟಿದ್ದರು. ಆದರೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಕಾಟಾಚಾರಕ್ಕೆ ಪತ್ರಿಕಾ ಪ್ರಕಟಣೆಯೊಂದನ್ನು ಮಾತ್ರ ಹೊರಡಿಸಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದ್ದಾರೆ.

ಕನ್ನಡದ ನೆಲದಲ್ಲಿ ಅನ್ಯ ಭಾಷೆ ಫಲಕಗಳೇ ರಾರಾಜಿಸುತ್ತಿರುವುದು ಕನ್ನಡಾಭಿಮಾನಿಗಳಿಗೆ ತೀವ್ರ ನೋವು ಉಂಟು ಮಾಡುತ್ತಿದೆ. ಕನ್ನಡ ನಾಮಫಲಕ ಕಡ್ಡಾಯಕ್ಕೆ ಕ್ರಮ ಕೈಗೊಳ್ಳಬೇಕಾದ ಬೀದರ್ ನಗರಸಭೆ ಆಯುಕ್ತರೇ ತಮ್ಮ ವಾಹನದ ಮೇಲೆ ‘ಸಿಎಂಸಿ ಕಮಿಷನರ್’ ಎಂದು ಆಂಗ್ಲ ಭಾಷೆಯಲ್ಲಿ ಫಲಕ ಅಳವಡಿಸಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರಸಭೆ ಆಯುಕ್ತರು ಬೀದರ್ ನಗರದಲ್ಲಿರುವ ಅನ್ಯ ಭಾಷೆ ಜಾಹೀರಾತು ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು. ಕನ್ನಡ ನಾಮಫಲಕ ಅಳವಡಿಕೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಕನ್ನಡದಲ್ಲಿ ನಾಮಫಲಕ ಅಳವಡಿಸದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನವೆಂಬರ್ 2 ರಿಂದ ನಗರಸಭೆ ಆಯಕ್ತರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.