ಮಂಗಳವಾರ, ಸೆಪ್ಟೆಂಬರ್ 17, 2019
21 °C

ರಾಷ್ಟ್ರೀಯ ಡೆಂಗಿ ದಿನಾಚರಣೆ: ಜನಜಾಗೃತಿ ರ‍್ಯಾಲಿ

Published:
Updated:
Prajavani

ಬೀದರ್: ರಾಷ್ಟ್ರೀಯ ಡೆಂಗಿ ದಿನಾಚರಣೆ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದಲ್ಲಿ ಗುರುವಾರ ಡೆಂಗಿ ಕುರಿತ ಜನಜಾಗೃತಿ ರ‍್ಯಾಲಿ ನಡೆಯಿತು.

ರ‍್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿ, ‘ಡೆಂಗಿ ರೋಗ ನಿಯಂತ್ರಣಕ್ಕಾಗಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡಬೇಕು. ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯಬೇಕು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್ ಮಾತನಾಡಿ,‘ಸದ್ಯ ಡೆಂಗಿ ಪ್ರಕರಣಗಳಲ್ಲಿ ತೀವ್ರ ಇಳಿಮುಖ ಕಂಡು ಬಂದಿದೆ. 2018ರಲ್ಲಿ 121 ಖಚಿತ ಪ್ರಕರಣಗಳು ಪತ್ತೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕೇವಲ 22 ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆ ಕಡಿತದಿಂದ ಬರುವ ಎಲ್ಲ ಕಾಯಿಲೆಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ’ ಎಂದು ತಿಳಿಸಿದರು.

ಡೆಂಗಿ ಮತ್ತು ಚಿಕುನ್‌ಗುನ್ಯ ರೋಗಗಳ ತಡೆಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಹಕಾರದೊಂದಿಗೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಅನಿಲ ಚಿಂತಾಮಣಿ ಮಾತನಾಡಿ,‘ಸೊಳ್ಳೆಗಳಿಂದ ಹರಡಬಹುದಾದ ಕಾಯಿಲೆಗಳನ್ನು ನಿಯಂತ್ರಿಸಲು ಯಾವಾಗಲೂ ಮೈತುಂಬ ಬಟ್ಟೆ ಧರಿಸಬೇಕು, ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಬೇಕು. ಮನೆಯ ಕಿಟಕಿ-ಬಾಗಿಲುಗಳಿಗೆ ಜಾಲಿಗಳನ್ನು ಅಳವಡಿಸಿ, ಸೊಳ್ಳೆ ನಿರೋಧಕಗಳನ್ನು ಬಳಸುವ ಮೂಲಕ ಹಲವು ರೋಗಗಳಿಂದ ತಪ್ಪಿಸಿಕೊಳ್ಳಬಹುದು’ ಎಂದು ಹೇಳಿದರು.

ರ‍್ಯಾಲಿಯಲ್ಲಿ ಡೆಂಗಿ , ಚಿಕುನ್‌ಗುನ್ಯ ಅರಿವು ಮೂಡಿಸುವ ಫಲಕಗಳು ಗಮನ ಸೆಳೆದವು. ಡೆಂಗಿ ರೋಗವು ಈಡೀಸ್ ಈಜಿಪ್ತಿ ಸೊಳ್ಳೆಗಳಿಂದ ಹರಡುತ್ತದೆ.ಇದೊಂದು ಮಾರಣಾಂತಿಕ ಕಾಯಿಲೆಯಾಗಿದೆ. ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಮಾಡಿಸಬೇಕು. ಮನೆಯ ಸುತ್ತ-ಮುತ್ತ ಕಲುಷಿತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸಿ, ಸೊಳ್ಳೆಗಳ ಬೆಳವಣಿಗೆ ನಿಯಂತ್ರಿಸಿದಲ್ಲಿ ಡೆಂಗಿ ಹಾಗೂ ಇತರ ಸೊಳ್ಳೆ ಜನಿತ ರೋಗಗಳಾದ ಚಿಕುನ್‌ಗುನ್ಯ, ಆನೆ ಕಾಲು ರೋಗ, ಮಲೇರಿಯಾ ರೋಗಗಳನ್ನು ನಿಯಂತ್ರಿಸಬಹುದು ಎನ್ನುವ ಮಾಹಿತಿಯನ್ನು ಧ್ವನಿವರ್ಧಕಗಳ ಮೂಲಕ ನೀಡಲಾಯಿತು.

ರ‍್ಯಾಲಿಯು ಜನವಾಡ ರಸ್ತೆ,ಅಂಬೇಡ್ಕರ್ ವೃತ್ತ, ಗವಾನ್ ಚೌಕ್, ಚೌಬಾರಾ,ಮಂಗಲಪೇಟ್, ಅಬ್ದುಲ್ ಫೈಜ್ ದರ್ಗಾ, ಲಾಡಗೇರಿ, ಕುಂಬಾರವಾಡ, ಸಿದ್ಧಾರೂಢ ಮಠ, ಮೈಲೂರ, ಚಿದ್ರಿ, ಆದರ್ಶ ಕಾಲೊನಿ, ನೌಬಾದ್ ಹೊಸ ಬಸ್ ನಿಲ್ದಾಣ ಮಾರ್ಗದ ಮೂಲಕ ಸಂಚರಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಬಂದು ಮುಕ್ತಾಯಗೊಂಡಿತು.

ಆರೋಗ್ಯ ಅಧಿಕಾರಿಗಳಾದ ಡಾ.ದೀಪಾ ಖಂಡ್ರೆ, ಡಾ.ಕೃಷ್ಣಾರಡ್ಡಿ, ಡಾ.ಇಂದುಮತಿ ಪಾಟೀಲ, ಡಾ.ರಾಜಶೇಖರ ಪಾಟೀಲ, ಡಾ.ಶಿವಶಂಕರ ಬಿ., ಡಾ.ಶಂಕ್ರೆಪ್ಪ ಬೊಮ್ಮ, ಡಾ.ಮಾರ್ಥಂಡರಾವ್ ಕಾಶೆಂಪೂರಕರ್, ಅಬ್ದುಲ್ ಸಲೀಂ, ಸಂಗಪ್ಪ ಕಾಂಬಳೆ, ಮಲ್ಲಿಕಾರ್ಜುನ ಸದಾಶಿವ, ರಾಜು ಕುಲಕರ್ಣಿ, ಕಮಲಾಕರ ಹಲಗೆ, ಅರುಣಕುಮಾರ, ಶಿವಶಂಕರ ಬೆಮಳಗಿ, ತಬ್ರೇಜ್, ಬಾಬು ಪ್ರಿಯಾ, ಶಿವಕಾಂತ, ಮಹೆಬೂಬಮಿಯ್ಯಾ, ಮಹ್ಮದ್ ರಫಿಯೋದ್ದಿನ್, ಸಂಗಶೆಟ್ಟಿ ಬಿರಾದಾರ, ಲೈಕೋದ್ದಿನ್, ಸಮಿಯೊದ್ದಿನ್, ವೀರಶೆಟ್ಟಿ ಚನಶೆಟ್ಟಿ, ಗೋರಖನಾಥ್ ಇದ್ದರು.

Post Comments (+)